ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಉಳಿವಿಗೆ ಧಾರ್ಮಿಕ ಕಾರ್ಯಗಳು ನಡೆಯಲಿ

ಕೊಟ್ಟೂರೇಶ್ವರ ಸ್ವಾಮಿ ಧಾರ್ಮಿಕ ಸಭೆಯಲ್ಲಿ ಶಾಂತಲಿಂಗದೇಶಿ ಕೇಂದ್ರ ಸ್ವಾಮೀಜಿ
Last Updated 7 ಫೆಬ್ರುವರಿ 2020, 13:03 IST
ಅಕ್ಷರ ಗಾತ್ರ

ದಾವಣಗೆರೆ: ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಎಂದು ಅರಸೀಕರೆ ಗುರು ಕೋಲಶಾಂತೇಶ್ವರ ವಿರಕ್ತಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಟ್ರಸ್ಟ್‌ನಿಂದ ಇಲ್ಲಿನ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಗುರುಬಸವರಾಜೇಂದ್ರ ಸ್ವಾಮಿ ಪ್ರತಿಷ್ಠಾ‍ಪನೆಯ ಬಳಿಕ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಧಾರ್ಮಿಕ ಮುಖಂಡರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿರಿಸಿ ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಧಾರ್ಮಿಕ ಚಿಂತನೆಯನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೊಟ್ಟೂರೇಶ್ವರಸ್ವಾಮಿ ಪಾದಯಾತ್ರೆ ಆರಂಭವಾದ ಸಂದರ್ಭದಲ್ಲಿ 10ರಿಂದ 12 ಮಂದಿ ಇದ್ದರು. ಪ್ರಸ್ತುತ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ದೇವರಲ್ಲಿನ ನಂಬಿಕೆ, ಶ್ರದ್ಧೆ ಹಾಗೂ ಭಕ್ತಿ ಅಪಾರವಾಗಿದೆ ಎಂಬುದು ತಿಳಿಯುತ್ತದೆ. ಕೊಟ್ಟೂರೇಶ್ವರ ಭಕ್ತರಿಗೆ ಒಳ್ಳೆಯದು ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ ಎಂದರು.

‘ಪಂಡರಾಪುರ ಹಾಗೂ ಶ್ರೀಶೈಲ ಯಾತ್ರೆಗಳಿಗಿಂತಲೂ ಹೆಚ್ಚು ಭಕ್ತರು ವಿವಿಧ ಭಾಗಗಳಿಂದ ಜಾತಿ, ಧರ್ಮಗಳೆನ್ನದೇ ಕೊಟ್ಟೂರಿಗೆ ಪಾದಯಾತ್ರೆ ಮಾಡುತ್ತಿದ್ದು, ದಾವಣಗೆರೆಯ ಪಾದಯಾತ್ರೆ ಟ್ರಸ್ಟ್ಇದಕ್ಕೆ ಕಾರಣ. ಶರಣರು, ಸಂತರು ನಾನಾ ರೀತಿಯ ವೇಷಗಳನ್ನು ಧರಿಸಿ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬುದಕ್ಕೆ ಕೊಟ್ಟೂರು ಗುರುಬಸವೇಶ್ವರರು ಸಾಕ್ಷಿ. ಈ ಭಾಗದಲ್ಲೇ ದೇವಾಲಯ ನಿರ್ಮಿಸಿರುವುದರಿಂದ ಭಕ್ತರಿಗೆ ಖುಷಿ ತಂದಿದೆ’ ಎಂದರು.

ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ‘ಕೆಲವರು ಪ್ರಚಾರಕ್ಕೋಸ್ಕರ ದೇವರಿಗೆ ದಾನ ಮಾಡುತ್ತಾರೆ. ದೇವರ ಹೆಸರಿಗಿಂತ ಅವರ ಹೆಸರನ್ನೇ ದೊಡ್ಡದಾಗಿ ಕೆತ್ತಿಸುತ್ತಾರೆ. ಮತ್ತೆ ಕೆಲವರು ನಿಸ್ವಾರ್ಥದಿಂದ ದೇವರಿಗೆ ಕೊಡುಗೆ ನೀಡುತ್ತಾರೆ.

‘ಧರ್ಮ, ಸಂಸ್ಕಾರ, ಆಚಾರ– ವಿಚಾರಗಳು ನಮ್ಮನ್ನು ಚೌಕಟ್ಟಿನೊಳಗೆ ಇಟ್ಟಿದ್ದು, ದೇಶದಲ್ಲಿ ಹಲವು ಭಾಷೆಗಳೂ ಇದ್ದರೂ ಎಲ್ಲಾ ಜಾತಿಯವರೂ ಪಾದಯಾತ್ರೆಗೆ ಹೋಗುತ್ತೇವೆ. ಈ ಮೂಲಕ ಆಚರಣೆಗಳು ನಮ್ಮನ್ನು ಒಗ್ಗಟ್ಟಾಗಿ ಇಟ್ಟಿವೆ. ಸಾಧು–ಸಂತರ ನೇತೃತ್ವದಲ್ಲಿ ಸಂಸ್ಕಾರಗಳು ನಮ್ಮನ್ನು ಒಂದುಗೂಡುವಂತೆ ಮಾಡಿವೆ ಎಂದು ಹೇಳಿದ ಅವರು ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಇಲಾಖೆಯಿಂದ ಅನುಕೂಲ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಕೊಟ್ಟೂರು ಮಹಲ್ ಮಠದ ಶಂರಸ್ವಾಮೀಜಿ, ಉದ್ಯಮಿ ಅಥಣಿ ವೀರಣ್ಣ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ನಗರಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್‌, ಸೋಗಿ ಶಾಂತಕುಮಾರ್‌, ವರ್ತಕ ಆರ್‌.ಜಿ. ನಾಗೇಂದ್ರ ಪ್ರಸಾದ್, ದೇವಾಲಯದ ನಿವೇಶನದ ದಾನಿ ದತ್ತರಾಜು, ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಖಜಾಂಚಿ ಮಲ್ಲಾಭಾವಿ ಗುರುಬಸವರಾಜ, ಸಹಕಾರ್ಯದರ್ಶಿ ಬಿ.ಚಿದಾನಂದ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT