ಶನಿವಾರ, ಜುಲೈ 2, 2022
20 °C
ರೈತರ ಕೆಚ್ಚೆದಯ ಹೋರಾಟಕ್ಕ ಸಿಕ್ಕ ಜಯ: ಮುಖಂಡರಿಂದ ಬಣ್ಣನೆ

ಕೃಷಿ ಕಾಯ್ದೆ ವಾಪಸ್: ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಸುದೀರ್ಘ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿರುವ ಕಾರಣಕ್ಕೆ ನಗರದಲ್ಲಿ ಶನಿವಾರ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಘಟಕದಿಂದ ವಿಜಯೋತ್ಸವ ಆಚರಿಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ರೈತ ಹೋರಾಟದ ಪರವಾಗಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಆರ್‌ಕೆಎಸ್‍ ರಾಜ್ಯಾಧ್ಯಕ್ಷ ಡಾ.ಕೆ.ಸುನೀತ್ ಕುಮಾರ್, ‘ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಒತ್ತಾಯ ಪೂರ್ವಕವಾಗಿ ಈ ದೇಶದ ರೈತರು ಮತ್ತು ಜನರ ಮೇಲೆ ಹೇರಲು ಮುಂದಾಗಿತ್ತು. ಆ ಸಂದರ್ಭದಲ್ಲಿ ದೇಶದ 550ಕ್ಕೂ ಹೆಚ್ಚು ರೈತ ಸಂಘಟನೆಗಳು ಒಗ್ಗೂಡಿಕೊಂಡು ಸಂಯುಕ್ತ ಕಿಸಾನ್ ಮೋರ್ಚಾ ರಚಿಸಿಕೊಂಡು ಹೋರಾಟ ರೂಪಿಸಿದರು. ಕೇಂದ್ರ ಸರ್ಕಾರದ ಕರಾಳ ಕಾಯ್ದೆಗಳ ವಿರುದ್ಧ ಆರಂಭವಾದ ಹೋರಾಟವನ್ನು ದೆಹಲಿಯ ಒಳಗಡೆ ಬಿಡದೆ ಕೇಂದ್ರ ಸರ್ಕಾರ ಆ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆಗ ಪ್ರತಿಭಟನಾ ನಿರತ ರೈತರು ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ದಿಲ್ಲಿಯ ಸಿಂಘ್‌, ಟಿಕ್ರಿ ಸೇರಿ ವಿವಿಧ ಗಡಿಗಳಲ್ಲಿ ಪ್ರತಿಭಟನೆ ಮಾಡಿದರು’ ಎಂದು ತಿಳಿಸಿದರು.

‘ಪ್ರತಿಭಟನೆ ನಡೆಸುತ್ತಿರುವವರು ದೇಶದ್ರೋಹಿಗಳು, ಭಯೋತ್ಪಾದಕರು, ಖಲಿಸ್ಥಾನಿಗಳು ಎಂದೆಲ್ಲಾ ಕರೆದು ರೈತರನ್ನು ಕೇಂದ್ರ ಸರ್ಕಾರವು ಅಪಮಾನಿಸಿತು. ರೈತರು ಎದೆಗುಂದದೆ ಕೆಚ್ಚೆದೆಯಿಂದ ಸುದೀರ್ಘ ಹೋರಾಟ ನಡೆಸಿದರು. ಈ ಹೋರಾಟದಲ್ಲಿ 700ಕ್ಕೂ ಹೆಚ್ಚು ಜನ ರೈತರು ಮೃತ ಪಟ್ಟಿದ್ದಾರೆ. ಹಲವರ ತ್ಯಾಗ ಬಲಿದಾನವಾಗಿದೆ. ಕೊನೆಗೂ ಸರ್ಕಾರ ಈ ಹೋರಾಟಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿದೆ. ಇದು ರೈತ ಕುಲಕ್ಕೆ ಸಿಕ್ಕ ಜಯ’ ಎಂದು ಬಣ್ಣಿಸಿದರು.

ಎಐಕೆಎಎಸ್ ಮುಖಂಡ ಐರಣಿ ಚಂದ್ರು, ‘ಕರಾಳ ಕೃಷಿ ಕಾಯಿದೆಗಳ ವಿರುದ್ಧ ಸುದೀರ್ಘ ಹೋರಾಟ ನಡೆಸಿ ಗೆದ್ದಿರುವ ರೈತರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದಾನಿ, ಅಂಬಾನಿಗಳಿಗೆ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಿರುವುದನ್ನು ತಡೆಯುವ ಶಕ್ತಿಯು ಇದೆ. ಆದ್ದರಿಂದ ಸರ್ಕಾರ ಈ ಹೋರಾಟದಿಂದ ಎಚ್ಚೆತ್ತು ಜನವಿರೋಧಿ ನೀತಿಗಳನ್ನು ತಕ್ಷಣ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಎಐಡಿವೈಒ ಮುಖಂಡ ಮಧು ತೊಗಲೇರಿ, ‘ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ನಿಗದಿ ಮಾಡುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು. ಹೋರಾಟದಲ್ಲಿ ಮೃತಪಟ್ಟ 700ಕ್ಕೂ ಹೆಚ್ಚು ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಅಣಬೇರು ತಿಪ್ಪೇಸ್ವಾಮಿ, ಬಿ.ಆರ್. ಅಪರ್ಣ, ಎಂ. ಕರಿಬಸಪ್ಪ, ಇ. ಶ್ರೀನಿವಾಸ್, ಕೆ.ಎಚ್. ಆನಂದರಾಜ್, ಹೆಗ್ಗೆರೆ ರಂಗಪ್ಪ, ಭಾರತಿ, ಬಸವರಾಜ್, ಪೂಜಾ, ಆದಿಲ್ ಖಾನ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು