ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೇ 5ರಷ್ಟು ಆದಾಯ ಪತ್ರಿಕೆ, ಪುಸ್ತಕ ಖರೀದಿಗೆ ಮೀಸಲಿಡಿ

ಹರಿಹರದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸಲಹೆ
Published 19 ಮಾರ್ಚ್ 2024, 5:45 IST
Last Updated 19 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಹರಿಹರ: ‘ರಾಜ್ಯದಲ್ಲಿರುವ ಕನ್ನಡಿಗರು ತಮ್ಮ ಆದಾಯದ ಶೇ 5ರಷ್ಟು ಹಣವನ್ನು ದಿನ, ವಾರ, ಮಾಸ ಪತ್ರಿಕೆ, ಪುಸ್ತಕಗಳ ಖರೀದಿಗೆ ಮೀಸಲಿಡಬೇಕು’ ಎಂದು ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಸಲಹೆ ನೀಡಿದರು.

ನಗರದ ಸಿದ್ದೇಶ್ವರ ಪ್ಯಾಲೇಸ್‌ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ಸೋಮವಾರ ನಡೆದ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮ್ಮೇಳನದ ಪ್ರಧಾನ ಭಾಷಣ ಮಾಡಿದರು.

‘ಕೇರಳದವರು ತಮ್ಮ ದುಡಿಮೆಯ ಇಂತಿಷ್ಟು ಪ್ರಮಾಣವನ್ನು ದಿನ ಪತ್ರಿಕೆ, ಪುಸ್ತಕಗಳನ್ನು ಖರೀದಿಸಿ ಓದಲು ಮೀಸಲಿಡುತ್ತಾರೆ. ಕೇರಳಿಗರ ಈ ಗುಣವನ್ನು ಕನ್ನಡಿಗರೂ ಬೆಳೆಸಿಕೊಳ್ಳಬೇಕು. ಇದರಿಂದ ಕನ್ನಡ ಪತ್ರಿಕೆ, ಪುಸ್ತಕಗಳ ಪ್ರಕಾಶಕರು, ಲೇಖಕರು ಬೆಳೆಯುವ ಜೊತೆಗೆ ಕನ್ನಡ ಭಾಷೆಯೂ ಬೆಳೆಯುತ್ತದೆ’ ಎಂದರು.

‘ಒಂದು ಸರ್ವೆ ಪ್ರಕಾರ ರಾಜ್ಯದಲ್ಲಿ ಆಂಗ್ಲ ಭಾಷೆ ಮಾತನಾಡುವವರ ಸಂಖ್ಯೆ ಶೇ 76ರಷ್ಟಿದೆ. ಕನ್ನಡವೂ ಸೇರಿ ಇತರೆ ಭಾಷೆ ಮಾತನಾಡುವವರ ಸಂಖ್ಯೆ ಶೇ 24ರಷ್ಟಿದೆ. ಮಹಾನಗರಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ಕೀಳಾಗಿ ಕಾಣುವ ಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡದ ಕಂಪು ಉಳಿದಿದೆ. ಈ ವಾತಾವರಣವನ್ನು ಬದಲಾಯಿಸುವ ಶಕ್ತಿ ಮತ್ತು ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ’ ಎಂದು ಹೇಳಿದರು.

‘ಶಿಕ್ಷೆ ಮತ್ತು ಶಿಕ್ಷಣ ಕನ್ನಡದಲ್ಲಿರಬೇಕು. ಸಾಧನೆ ಮಾಡುವ ಜೊತೆಗೆ ಸಾಕ್ಷಾತ್ಕಾರ ಮಾಡಿಸಬೇಕು. 1ನೇ ತರಗತಿಯಲ್ಲಿ 5 ಬಾರಿ ಫೇಲ್ ಆದ ನನ್ನಂತಹ ವ್ಯಕ್ತಿಗೆ 12ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ಉಂಟು ಮಾಡಿತ್ತು’ ಎಂದು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಯುಗಧರ್ಮ ರಾಮಣ್ಣ ಅವರು ನೂತನ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲರಿಗೆ ಕನ್ನಡದ ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು.

‘ಹತ್ತಿ ಗಿರಣಿಗೆ ಹೆಸರುವಾಸಿಯಾಗಿದ್ದ ದಾವಣಗೆರೆ ಈಗ ವಿದ್ಯಾಕಾಶಿಯಾಗಿ ರೂಪಾಂತರವಾಗಿದೆ. ಹರಿಹರವನ್ನು ನಡುನಾಡು ಅಥವಾ ಮಧ್ಯನಾಡು ಎಂದು ಗುರುತಿಸಲಾಗಿದ್ದು, ದಕ್ಷಿಣ ಮತ್ತು ಉತ್ತರ ನಾಡಿನ ಸಾಂಸ್ಕೃತಿಕ ಹೆಬ್ಬಾಗಿಲಾಗಿದೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಹೇಳಿದರು.

‘ಸಾಮರಸ್ಯದ ಹಿರಿಮೆ ಹೊಂದಿರುವ ಹರಿಹರೇಶ್ವರ ದೇವಾಲಯ ಹರಿಹರದ ಐತಿಹಾಸಿಕ ಹಿನ್ನೆಲೆಯನ್ನು ವ್ಯಕಪಡಿಸುತ್ತದೆ. ಇಲ್ಲಿರುವ ಶಾಸನಗಳು 7ರಿಂದ 19ನೇ ಶತಮಾನದ ಅವಧಿಯದ್ದಾಗಿವೆ. ನಾಡಿನ ಖ್ಯಾತ ಸಾಹಿತಿಗಳಾದ ತ.ರಾ.ಸು, ನಾಡಿಗೇರ್ ಕೃಷ್ಣರಾಯರು, ದಾಶರತಿ ದೀಕ್ಷಿತರು, ಪ್ರೊ.ಎಚ್.ಎಂ.ಶಂಕರ ನಾರಾಯಾಣರು, ಪೊಲಂಕಿ ರಾಮಮೂರ್ತಿ, ಪಿ.ಲಂಕೇಶ್‌ರ ಪೂರ್ವಜರು ಹರಿಹರದವರಾಗಿದ್ದಾರೆ’ ಎಂದು ಹೇಳಿದರು.

‘ಭೌಗೋಳಿಕ, ಪೌರಾಣಿಕ ಹಾಗೂ ಚಾರಿತ್ರಿಕವಾಗಿ ವಿಶೇಷ ಮಹತ್ವ ಹೊಂದಿದ ಹರಿಹರ ಅಭಿವೃದ್ಧಿಯನ್ನು ಪಡೆಯಲು ಎಲ್ಲ ಅರ್ಹತೆ ಹೊಂದಿದೆ. ನದಿ ಇದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು, ಪರ್ಯಾಯ ನೀರಿನ ಮೂಲ ಅಭಿವೃದ್ಧಿಪಡಿಸಬೇಕು. ಭೈರನಪಾದ ಏತ ನೀರಾವರಿ ಯೋಜನೆ ಜಾರಿಯಾಗಬೇಕು. ಕೈಗಾರಿಕಾ ಘಟಕಗಳನ್ನು, ಜವಳಿ ಪಾರ್ಕ್, ಪವನ ವಿದ್ಯುತ್ ಸ್ಥಾವರ ಘಟಕಗಳ ಸ್ಥಾಪನೆಯಾಗಿ ನಗರವು ಸಂತುಷ್ಟಗೊಳ್ಳಬೇಕು’ ಎಂದು ಹೇಳಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಎನ್.ಟಿ.ಯರ‍್ರಿಸ್ವಾಮಿ ರಚಿತ ‘ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ’, ಸೀತಾ ಎಸ್.ನಾರಾಯಣ ರಚಿತ ‘ಜ್ಞಾನವಾರದಿ’/// ಪ್ರಬಂಧ, ಎಚ್.ಎನ್.ಶಿವಕುಮಾರ್ ರಚಿತ ‘ಶ್ರಾವಣ ಸಂಭ್ರಮ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು.

‘ಸಂಗಮ ಸಿರಿ’ ಸ್ಮರಣ ಸಂಚಿಕೆ ಕುರಿತು ಸಂಚಿಕೆಯ ಸಂಪಾದಕ ಪ್ರೊ.ಎಚ್.ಎ.ಭಿಕ್ಷಾವರ್ತಿ ಮಠ ಮಾತನಾಡಿದರು. ಸುಗಮ ಸಂಗೀತ ಪರಿಷತ್ತಿನ ಗಾಯಕರು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಕಸಾಪ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ ಸ್ವಾಗತಿಸಿದರು. ರೇವಣಸಿದ್ದಪ್ಪ ಅಂಗಡಿ ಮತ್ತು ಕೆ.ರಾಘವೇಂದ್ರ ನಾಯರಿ ನಿರೂಪಿಸಿದರು. ಜಿಗಳಿ ಪ್ರಕಾಶ್ ವಂದಿಸಿದರು. ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಿಸಿದರು.

ಹರಿಹರದಲ್ಲಿ ಸೋಮವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ಚಾಲನೆ ನೀಡಿದರು     
ಹರಿಹರದಲ್ಲಿ ಸೋಮವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ಚಾಲನೆ ನೀಡಿದರು     

ಧ್ವಜಾರೋಹಣ ಬೆಳಿಗ್ಗೆ 8ಕ್ಕೆ

ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ರಾಷ್ಟ್ರಧ್ವಜ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಪರಿಷತ್ತಿನ ಧ್ವಜ ಪೌರಾಯುಕ್ತ ಐಗೂರು ಬಸವರಾಜ್ ನಾಡ ಧ್ವಜಾರೋಹಣ ಮಾಡಿದರು. ನಂತರ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್ ಚಾಲನೆ ನೀಡಿದರು. ಸಮ್ಮೇಳನಕ್ಕೆ ಹಾಗೂ ಚಿತ್ರಕಲೆ ಪ್ರದರ್ಶನಕ್ಕೆ ಎಸ್.ಎಸ್.ಲೈಫ್ ಕೇರ್ ಟ್ರಸ್ಟ್‌ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಆಶಾ ಸಿ.ವಿ.ಪಾಟೀಲ್ ಕೆ.ಬಿ.ಕೊಟ್ರೇಶ್ ಕಸಾಪ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಹರಿಹರ ಘಟಕದ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಎ.ರಿಯಾಜ್ ಅಹ್ಮದ್ ಜಿಗಳಿ ಪ್ರಕಾಶ್ ಚಿದಾನಂದ ಕಂಚಿಕೇರಿ ಕುಂಬಳೂರು ಸದಾನಂದ ವೀರೇಶ್ ಎಸ್.ಒಡೇನಪುರ ಎ.ಕೆ.ಭೂಮೇಶ್ ಡಾ.ಬಿ.ಇ.ಸಿದ್ದಪ್ಪ ಬಿ.ಬಿ.ರೇವಣನಾಯ್ಕ ಶಶಿಕುಮಾರ್ ಮೆರ‍್ವಾಡೆ ಗಣಪತಿ ಮಾಳಂಜಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ರಮೇಶ್ ಮಾನೆ ಎಂ.ಇಲಿಯಾಸ್ ಅಹ್ಮದ್ ಎಚ್.ಸುಧಾಕರ ಪ್ರೀತಮ್ ಬಾಬು ಈಶಪ್ಪ ಬೂದಿಹಾಳ್ ರಾಜೇಶ್ ಶಶಿನಾಯ್ಕ್ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಕಸಾಪ ಅಧ್ಯಕ್ಷರಾದ ಎ.ಜಿ.ಸುಮತಿ ಜಯಪ್ಪ ಜಿ.ಮುರುಗೆಪ್ಪ ಗೌಡ ಎಲ್.ಜಿ.ಮಧುಕುಮಾರ್ ಡಿ.ಎಂ.ಹಾಲಾರಾದ್ಯ ಕೆ.ಸುಜಾತಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT