ಭಾನುವಾರ, ಸೆಪ್ಟೆಂಬರ್ 19, 2021
23 °C

ಶಾಲೆ ಆರಂಭ: ಮೊದಲ ದಿನ ಶೇ 57ರಷ್ಟು ಹಾಜರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ಲಾಕ್‍ಡೌನ್‍ನಿಂದ ಒಂದುವರೆ ವರ್ಷದಿಂದ ಸ್ಥಗಿತಗೊಂಡಿದ್ದ ಶಾಲೆಯ ಬಾಗಿಲುಗಳು ಸೋಮವಾರ ಪುನಃ ತೆರೆದಿದ್ದು, ಚಿಣ್ಣರು ಖುಷಿಯಿಂದಲೇ ಹೆಜ್ಜೆ ಹಾಕಿದರು. ಆದರೆ ಮೊದಲ ದಿನ ಶೇ 57.88 ರಷ್ಟು ಹಾಜರಿ ಇತ್ತು.

ಒಂಬತ್ತರಿಂದ ಹತ್ತನೇ ತರಗತಿಗಳು ಆರಂಭಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರವು ಆರರಿಂದ ಎಂಟನೇ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿತ್ತು. ಇದಕ್ಕಾಗಿ ಶನಿವಾರದಿಂದಲೇ ಶಾಲೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದವು. ತರಗತಿ ಕೊಠಡಿಗಳಿಂದ ದೂಳು ಹೊಡೆದು, ಸ್ಯಾನಿಟೈಸ್‌ ಮಾಡಲಾಗಿತ್ತು. ಮೊದಲ ದಿನ ಸ್ವಲ್ಪಮಟ್ಟಿನ ಗಡಿಬಿಡಿ ಕಂಡು ಬಂದಿತು. 

ಸ್ನೇಹಿತರ ಒಡನಾಟವಿಲ್ಲದೇ ಒಂದುವರೆ ವರ್ಷದಿಂದ ಇದ್ದ ಮಕ್ಕಳಿಗೆ ಶಾಲೆ ಆರಂಭವಾಗಿದ್ದು, ಗೆಳೆಯರ ಜೊತೆ ಮಕ್ಕಳು ಬೆರೆತರು. ಪೋಷಕರು ಮಕ್ಕಳನ್ನು ಮುತುವರ್ಜಿಯಿಂದ ಶಾಲೆಗೆ ಕರೆತಂದು ಬಿಟ್ಟು ಹೋಗುತ್ತಿದ್ದುದು ಅಲ್ಲಲ್ಲಿ ಕಂಡುಬಂತು. ಕೊಠಡಿಗಳನ್ನು ಹುಡುಕುತ್ತಿದ್ದುದು ಕಂಡುಬಂತು.

ನಗರದ ನಿಟುವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಇಲ್ಲದ ಮಕ್ಕಳಿಗೆ ಮಾಸ್ಕ್ ಅನ್ನು ನೀಡಲಾಗುತ್ತಿತ್ತು. ಮಕ್ಕಳನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಬಿಡಲಾಗುತ್ತಿತ್ತು. ನಿಟುವಳ್ಳಿ ಶಾಲೆಯಲ್ಲಿ ಶೇ 80ರಷ್ಟು ಹಾಜರಾತಿ ಇತ್ತು.

ಶಾಲಾ ಆರಂಭದ ವೇಳೆ ಬಿಇಒ ನಿರಂಜನಮೂರ್ತಿ, ಜಿಲ್ಲಾ ಸಮನ್ವಯ ಯೋಜನಾ ಸಮನ್ವಯಾಧಿಕಾರಿ ಮಂಜುನಾಥಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜಪ್ಪ, ಪಾಲಿಕೆ ನಾಮನಿರ್ದೇಶಿತ ಸದಸ್ಯ ಹುಲ್ಮನಿ ಗಣೇಶ್‌, ಪ್ರಾಥಮಿಕ ಶಾಲೆಯ ವಿಭಾಗದ ಮುಖ್ಯ ಶಿಕ್ಷಕ ಎ.ಕೆ. ಚಂದ್ರಪ್ಪ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ, ಎಂ. ಸುರೇಶ್ ಪಾಲ್ಗೊಂಡಿದ್ದರು.

ದೊಗ್ಗಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಮಕ್ಕಳಿಗೆ ಪುಷ್ಪ‌ ನೀಡಿ ಸ್ವಾಗತ ಕೋರಲಾಯಿತು. ಆರಂಭದ ದಿನವೇ ಅತೀ ಹೆಚ್ಚು ಮಕ್ಕಳು ‌ಶಾಲೆಗೆ ಹಾಜರಾಗುವುದರ ಮೂಲಕ ‌ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಮುಖ್ಯೋಪಾಧ್ಯಾಯರಾದ ಡಿ.ರೇವಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಚಂದ್ರಪ್ಪ, ಶಿಕ್ಷಕರಾದ ಸಬಿಯಾ ಪರ್ವಿನ್, ಸುಶೀಲಮ್ಮ, ರುದ್ರಪ್ಪ, ಶರತ್ ಬಾಬು ಹಾಜರಿದ್ದರು. 

ಯಾವ ತಾಲ್ಲೂಕಿನಲ್ಲಿ ಎಷ್ಟು ಹಾಜರಾತಿ

ತಾಲ್ಲೂಕು;ಹಾಜರಾತಿ ಪ್ರಮಾಣ (ಶೇಕಡಾವಾರು)

ಚನ್ನಗಿರಿ;56.32

ದಾವಣಗೆರೆ ಉತ್ತರ;52.93

ದಾವಣಗೆರೆ ದಕ್ಷಿಣ;78.08

ಹರಿಹರ;24.08

ಹೊನ್ನಾಳಿ;67.18

ಜಗಳೂರು;53.87

===

ಯಾವ ತರಗತಿಯಲ್ಲಿ ಎಷ್ಟು ಹಾಜರಾತಿ

ತರಗತಿ; ಹಾಜರಾದ ಮಕ್ಕಳು; ಶೇಕಡಾವಾರು

6;15,279;56.49

7;14,824;56.34

8;15,593;60.91

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು