ಗುರುವಾರ , ಜುಲೈ 7, 2022
23 °C
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕರೆ

ಸಂವಿಧಾನ ಉಳಿಸಲು ಶಪಥ ಮಾಡಿ: ಸಿದ್ದರಾಮಯ್ಯ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ‘ಈ ದೇಶವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು, ಸಂವಿಧಾನವನ್ನು ಉಳಿಸಲು ನಾವು ಶಪಥ ಮಾಡಬೇಕು. ಇಲ್ಲಿವರೆಗೆ ಏನಾಗಿದೆ, ಮುಂದೆ ಏನಾಗಬೇಕಿದೆ ಎಂದು ಅವಲೋಕನ ಮಾಡಿಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಶನಿವಾರ ಆರಂಭಗೊಂಡ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಮತ್ತು ಬೃಹತ್‌ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತವು ಅನೇಕ ಭಾಷೆ, ಧರ್ಮ, ಜಾತಿಯಿಂದ ಕೂಡಿರುವ ದೇಶ. ಭಾರತ ಬಹುತ್ವದ ರಾಷ್ಟ್ರ. ಈ ದೇಶದಲ್ಲಿ ನಾವೆಲ್ಲ ಭಾರತ ಮಾತೆಯ ಮಕ್ಕಳು. ಪ್ರತಿ ಪ್ರಜೆಯು ಮೊದಲು ಭಾರತೀಯ. ಅದಾದ ಮೇಲೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌. ಕುವೆಂಪು ಹೇಳಿದಂತೆ ಇದು ಸರ್ವ ಜನಾಂಗದ ಶಾಂತಿಯ ತೋಟ. ಅಂಬೇಡ್ಕರ್‌ ಅವರ ಆಶಯದಂತೆ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಮಾಡಬೇಕಿದೆ’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ಇದನ್ನೇ ಬಯಸಿದ್ದರು. ಶ್ರೇಣೀಕೃತ ವ್ಯವಸ್ಥೆ ನಿರ್ಣಾಮವಾಗಬೇಕು. ಜಾತಿ ರಹಿತ, ಶ್ರೇಣಿರಹಿತ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ಇದು ನಮಗೆ ದಾರಿದೀಪವಾಗಬೇಕು’ ಎಂದರು.

‘ಅಂಬೇಡ್ಕರ್‌ ಅವರು ದೇಶದಲ್ಲಿ ಹುಟ್ಟದೇ ಇದ್ದರೆ ಅಸ್ಪೃಶ್ಯತೆ ನಾಶವಾಗುತ್ತಿರಲಿಲ್ಲ. ಶ್ರೇಷ್ಠ ಸಂವಿಧಾನ ನಮ್ಮದಾಗುತ್ತಿರಲಿಲ್ಲ. ಬಸವಣ್ಣ ಕಟ್ಟಿದ ಸಮಸಮಾಜದ ಕನಸನ್ನು ನನಸು ಮಾಡುವಂಥ ಸಂವಿಧಾನವನ್ನು ಅಂಬೇಡ್ಕರ್‌ ರಚಿಸಿದ್ದಾರೆ. ನಾವು ವಿಶಾಲವಾದ ಮನೋಭಾವ ಬೆಳೆಸಿಕೊಳ್ಳಬೇಕು. ಮಾನವೀಯತೆಯೇ ಧರ್ಮವಾಗಬೇಕು. ಮನುಷ್ಯರಿಗಾಗಿ ಧರ್ಮ ಇರುವುದು. ಧರ್ಮಕ್ಕಾಗಿ ಮನುಷ್ಯ ಇರುವುದಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದೇಶಕ್ಕೆ ಕೊಡುಗೆ ನೀಡಬೇಕಿದ್ದರೆ ಈ ದೇಶದ ಇತಿಹಾಸವನ್ನು ಮೊದಲು ತಿಳಿಯಬೇಕು’ ಎಂದು ಸಲಹೆ ನೀಡಿದರು.

‘ಅಧಿಕಾರ ಹಿಡಿಯಬೇಕು ಎಂಬ ಆಸೆಯಿಂದ ಸ್ವಾತಂತ್ರ್ಯ ಹೋರಾಟ ಮಾಡಿದ್ದಲ್ಲ. ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಬೇಕು; ನಮ್ಮನ್ನು ನಾವೇ ಆಳಬೇಕು ಎಂದು ನಿಸ್ವಾರ್ಥದಿಂದ ಹೋರಾಟ ಮಾಡಿದರು. ಸಾವಿರಾರು ಮಂದಿ ಹುತಾತ್ಮರಾಗಿದರು. ಸಾವಿರಾರರು ಮಂದಿ ಆಸ್ತಿಪಾಸ್ತಿ ಕಳೆದುಕೊಂಡರು. ಅವರನ್ನು ನೆನಪಿಸಿಕೊಳ್ಳುವುದು, ಅವರ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದು, ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು’ ಎಂದರು.

‘1857 ಸ್ವಾತಂತ್ರ್ಯ ಸಂಗ್ರಾಮವೇ ಮೊದಲನೇಯದ್ದಲ್ಲ. ಅದಕ್ಕಿಂತ ಮೊದಲೇ ಅನೇಕರು ಹೋರಾಟ ಮಾಡಿ ಹುತಾತ್ಮರಾಗಿದ್ದಾರೆ. ಅವರನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕಾಗಿ 16ನೇ ಶತಮಾನದಿಮದ 1947ರವರೆಗೆ ಹೋರಾಟ ಮಾಡಿದ ಪಂಚಮಸಾಲಿ ಸಮುದಾಯದ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಕೆಲಸವನ್ನು
ಸ್ವಾಮೀಜಿ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಂಗಮೇಶ್‌ ಆರ್‌. ನಿರಾಣಿ, 126 ವರ್ಷದ ಸ್ವಾಮಿ ಶಿವಾನಂದ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ್, ವಿರೂಪಾಕ್ಷಪ್ಪ ಬಳ್ಳಾರಿ, ಸೋಮಣ್ಣ ಬೇವಿನಮರದ, ಅರುಣ್‌ ಪೂಜಾರ್‌, ಎಸ್‌.ರಾಮಪ್ಪ, ಮಾಜಿ ಶಾಸಕ ಅಶೋಕ ಖೇಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಗಳಾ ಗೌರಿ, ಅಚ್ಯುತ್‌ ಗೌಡ, ಮಲ್ಲಿಕಾರ್ಜುನ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಅವರೂ ಇದ್ದರು.

ಬಸವರಾಜ ದಿಂಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್‌ ಪೂಜಾರ್‌ ಸ್ವಾಗತಿಸಿದರು.

ಕಲಾಕೃತಿ ಅನಾವರಣ

ಭಾರತದ ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಸಮಾಜದ ಏಳು ಮಹನೀಯರ ಕಲಾಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಬೆಳವಡಿ ರಾಣಿ ಮಲ್ಲಮ್ಮ, ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮೈಲಾರ ಮಹದೇವಪ್ಪ, ಏಕಿಕರಣ ಹೋರಾಟಗಾರ ಅದರಗುಂಚಿ ಶಂಕರ ಗೌಡ, ಕರ್ನಾಟಕ ಕಾಲೇಜು ಆರಂಭಿಸಿದ ಅರಟಾಳ ರುದ್ರಗೌಡ, ಅಂಬೇಡ್ಕರ್‌ ಅವರನ್ನು ಪ್ರಾಂಶುಪಾಲರಾಗಿ ಕರೆದಿದ್ದ ಕಂಬಳಿ ಸಿದ್ದಪ್ಪ ಅವರ ಕಲಾಕೃತಿಗಳು ಅನಾವರಣಗೊಂಡವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು