ಗುರುವಾರ , ನವೆಂಬರ್ 26, 2020
19 °C
ಬನ್ನಿ ಮುಡಿಯುವ ಪೂಜೆ ನೆರವೇರಿಸಿದ ಮಹಿಳೆಯರು

ದಾವಣಗೆರೆ ಜಿಲ್ಲೆಯಾದ್ಯಂತ ಸರಳ ದಸರಾ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನವರಾತ್ರಿ ಉತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಆಯುಧ ಪೂಜೆ ಹಾಗೂ ಭಾನುವಾರ ವಿಜಯದಶಮಿ ಹಬ್ಬವನ್ನು ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಯಿತು.

ನಗರದ ಬಹುತೇಕ ಕಚೇರಿ, ಮಳಿಗೆ ಹಾಗೂ ಅಂಗಡಿಗಳನ್ನು ಬಾಳೆ ದಿಂಡು, ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಜೊತೆಗೆ ವಾಹನಗಳಿಗೂ ಪೂಜೆ ನೆರವೇರಿಸಲಾಯಿತು.

ನಗರದ ವಿವಿಧ ದೇವಾಲಯಗಳಲ್ಲಿ ಬನ್ನಿಪೂಜೆ ನಡೆಯಿತು. ವಿನೋಬನಗರ, ಎಸ್.ಎಸ್. ಬಡಾವಣೆ, ನಿಟುವಳ್ಳಿ, ಪಿ.ಜೆ.ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್, ವಿದ್ಯಾನಗರ, ಆಂಜನೇಯ ನಗರ, ವಿವೇಕಾನಂದ ಬಡಾವಣೆ, ಜಯ ನಗರ, ಸರಸ್ವತಿ ನಗರ, ಕೆಟಿಜೆ ನಗರ, ಭಗತ್‌ಸಿಂಗ್ ನಗರ ಸೇರಿ ಹಲವು ಕಡೆ ಮಹಿಳೆಯರು, ಯುವತಿಯರು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಉಡಿ ತುಂಬಿಸಿದರು.

ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಆಯುಧಪೂಜೆ ಪ್ರಯುಕ್ತ ದೇವಿಗೆ ಮೋಹಿನಿ ಅಲಂಕಾರ ಮಾಡಲಾಗಿತ್ತು. ಪ್ರತಿ ವರ್ಷ 101 ಮಹಿಳೆಯರು ಕುಂಬಾಭಿಷೇಕದಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಕಾರಣದಿಂದ ಈ ಬಾರಿ 9 ಕುಂಭಗಳಿಗೆ ಸೀಮಿತಗೊಳಿಸಲಾಗಿತ್ತು. ದೇವಸ್ಥಾನದ ಸುತ್ತ ಮೂರು ಸುತ್ತು ಹಾಕಿ ಕಾರ್ಯಕ್ರಮ ನೆರವೇರಿಸಲಾಯಿತು.

ವಿಜಯದಶಮಿ ಅಂಗವಾಗಿ ಭಾನುವಾರ ದುರ್ಗಾಂಬಿಕಾ ದೇವಿಗೆ ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ತಂಡೋಪ ತಂಡವಾಗಿ ಬಂದ ಮಹಿಳೆಯರು ನಿವೇದನೆ ಮಾಡಿಕೊಂಡರು. ದವಸ ಧಾನ್ಯಗಳನ್ನು ಅಮ್ಮನ ಸನ್ನಿಧಿಗೆ ಅರ್ಪಿಸಿದರು. ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. 

ಗ್ರಾಮದೇವತೆ ನಿಟುವಳ್ಳಿ ದುರ್ಗಾಂಬಿಕಾ ದೇವಾಲಯದಲ್ಲಿ ಉತ್ಸವಮೂರ್ತಿಯನ್ನು ಕರಿಯಮ್ಮ ದೇವಸ್ಥಾನದ  ಬನ್ನಿಮರದ ಬಳಿ ತಂದು ಪೂಜಿಸಲಾಯಿತು. ದೇವಾಲಯದಲ್ಲಿ ಆನೆ ಅಂಬಾರಿ ಅಲಂಕಾರ ಹಾಗೂ ನಗರದ ದಾವಲ್‍ಪೇಟೆಯಲ್ಲಿರುವ ತೊಗಟವೀರ ಸಮಾಜದ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಮಾಡಿದ್ದ ನೋಟಿನ ಅಲಂಕಾರಗಳು ಗಮನ ಸೆಳೆದವು.

ಕಾಳಿಕಾದೇವಿ ದೇಗುಲ, ಪಾತಾಳಲಿಂಗೇಶ್ವರ ದೇವಸ್ಥಾನದ ಬನ್ನಿ ವೃಕ್ಷದ ಸುತ್ತ ಮಹಿಳೆಯರು ಪೂಜೆ ಸಲ್ಲಿಸಿದರು. ಭಗತ್‌ಸಿಂಗ್ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದ ಅಮ್ಮನವರನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಸಾಂಕೇತಿಕ ಮೆರವಣಿಗೆ ನಡೆಸಲಾಯಿತು.

ಶಂಕರ ಮಠ: ಜಯದೇವ ವೃತ್ತದಲ್ಲಿ ಇರುವ ಕೂಡಲಿ ಶೃಂಗೇರಿ ಶಂಕರ ಮಠದಲ್ಲಿ ವಿಜಯದಶಮಿ ನಿಮಿತ್ತ ದುರ್ಗಾ ದೀಪ ನಮಸ್ಕಾರ ನೆರವೇರಿಸಲಾಯಿತು. ಪಾಡ್ಯದಿಂದ ದಶಮಿಯವರೆಗೆ ಪ್ರತಿ ‌ದಿನ‌ಚಂಡಿಕಾ ಹೋಮ ನೆರವೇರಿತು. ದುರ್ಗಾದೀಪ ನಮಸ್ಕಾರ. ಸುಮಂಗಲಿ, ಕನ್ನಿಕಾ ಪೂಜೆ ಸೇವೆಯನ್ನು ಪುರೋಹಿತ ಪವನ್ ಕುಮಾರ್ ನೆರವೇರಿಸಿದರು.

ಕಾಣದ ಸಂಭ್ರಮ:

ವಿಶ್ವ ಹಿಂದೂ ಪರಿಷದ್‌ನಿಂದ ಪ್ರತಿ ವಿಜಯದಶಮಿ ದಿನ ನಡೆಯುತ್ತಿದ್ದ ಬೃಹತ್ ಶೋಭಾಯಾತ್ರೆ ಕೊರೊನಾ ಕಾರಣದಿಂದ ಸಂಭ್ರಮ ಕಂಡುಬರಲಿಲ್ಲ. ಶೋಭಾಯಾತ್ರೆಯಂದು ಇಡೀ ದಾವಣಗೆರೆ ನವರಾತ್ರಿ ಮಹೋತ್ಸವದಲ್ಲಿ ಮಿಂದೇಳುತ್ತಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು