ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ, ಹಾನಗಲ್‌ನಲ್ಲಿ ಬಿಜೆಪಿ ಗೆಲ್ಲಲಿದೆ

ದಾವಣಗೆರೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 12 ಅಕ್ಟೋಬರ್ 2021, 14:02 IST
ಅಕ್ಷರ ಗಾತ್ರ

ದಾವಣಗೆರೆ: ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಜಿಎಂಐಟಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಎರಡು ವಿಚಾರಗಳಿಗಾಗಿ ದಾವಣಗೆರೆಗೆ ಬಂದಿದ್ದೇನೆ. ದಾವಣಗೆರೆ ಮುಖಂಡರನ್ನು ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಮಾತನಾಡಬೇಕಿತ್ತು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರನ್ನು, ಮುಖಂಡರನ್ನು ಕರೆಸಿ ಅಭಿವೃದ್ಧಿ ವಿಚಾರವಾಗಿ ಸೋಮವಾರ ರಾತ್ರಿ ಚರ್ಚೆ ಮಾಡಿದ್ದೇನೆ. ಇವತ್ತು ಹಾವೇರಿ ಜಿಲ್ಲೆಯ ಮುಖಂಡರು, ಹಾನಗಲ್‌ ವಿಧಾನಸಭಾ ಕ್ಷೇತ್ರದ ಮುಖಂಡರನ್ನು ಕರೆಸಿ ಹಾನಗಲ್‌ ಉಪಚುನಾವಣೆ ಬಗ್ಗೆ ನಮ್ಮ ಸ್ಟ್ರೆಟಜಿ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು.

ಬಿ.ಸಿ. ಪಾಟೀಲ ಹೇಳಿಕೆ: ಜಿಎಂಐಟಿಯಲ್ಲಿ ಮುಖಂಡರ ಜತೆಗೆ ಚರ್ಚೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿಧಾನಸಭಾ ಉಪ ಚುನಾವಣೆ ಎದುರಿಸುವ ಬಗ್ಗೆ ಮಾತುಕತೆಗಳಾದವು. ಅಭ್ಯರ್ಥಿಗಳು, ಉಸ್ತುವಾರಿಗಳು, ಸಂಸದರು ಬಂದಿದ್ದರು. ಮುಖ್ಯಮಂತ್ರಿ ಅ. 17, 21, 22, 26 ಹಾಗೂ 27ರಂದು ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

‘ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇದು ಪ್ರತಿಷ್ಠಿತ ಚುನಾವಣೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ. ಹೀಗಾಗಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಸಹಜ. ಬಂಡಾಯಅಭ್ಯರ್ಥಿಗಳ ಮನವೊಲಿಸುತ್ತೇವೆ. ಎಲ್ಲವೂ ಸರಿ ಆಗಲಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್‌ನವರು ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಆಡಳಿತದಲ್ಲಿ ಇರುವಾಗಲೂ ಬೆಲೆ ಏರಿಕೆ ಆಗಿದೆ. ಚುನಾವಣೆ ಬಂದಾಗ ಪ್ರತಿಪಕ್ಷಗಳು ಆ ಬಗ್ಗೆ ಮಾತನಾಡವುದು ಸಹಜ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.

‘ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಬಹಳ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಗೆಲ್ಲಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ. ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ, ಗೌರವಯುತವಾಗಿ ನಡೆಸಿಕೊಂಡಿದೆ. ಇನ್ನು ಮುಂದೆ, ಜೀವನದುದ್ದಕ್ಕೂ ಬಿಜೆಪಿಯಲ್ಲಿರುತ್ತೇವೆ. ಐ.ಟಿ. ದಾಳಿ ಮೂಲಕ ಯಡಿಯೂರಪ್ಪ ಅವರ ನಿಯಂತ್ರಣ ಮಾಡುವ ಪ್ರಶ್ನೆಯೇ ಇಲ್ಲ. ಆದಾಯ ತೆರಿಗೆ ಇಲಾಖೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ಯಾರೂ ರಾಜಕೀಯ ತರಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT