ರೈತಹೋರಾಟ ಬೆಂಬಲಿಸಿ ಏಕಾಂಗಿ ಪಾದಯಾತ್ರೆ

ದಾವಣಗೆರೆ: ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಕಲಗುಟಕರ್ ಹಮ್ಮಿಕೊಂಡಿರುವ ‘ದೆಹಲಿ ಚಲೋ’ ಏಕಾಂಗಿ ಪಾದಯಾತ್ರೆ ಮಂಗಳವಾರ ದಾವಣಗೆರೆಗೆ ಆಗಮಿಸಿತು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಅವರನ್ನು ವಿವಿಧ ಸಂಘಟನೆಯ ಮುಖಂಡರು ಸ್ವಾಗತಿಸಿದರು.
ನಾಗರಾಜ್ ಕಲಗುಟಕರ್ ಮಾತನಾಡಿ, ‘ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸದೇ ತರಾತುರಿಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ. ಇಂತಹ ಸರ್ವಾಧಿಕಾರಿ ಧೋರಣೆಯ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ’ ಎಂದು ಹೇಳಿದರು.
‘ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ರೈತರ ಸಂಕಷ್ಟವನ್ನು ನೋಡಿದ್ದೇನೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.
‘ಫೆ.12ರಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ಆರಂಭವಾಗಿದ್ದು, ಈವರೆಗೆ 700 ಕಿ.ಮೀ. ಕ್ರಮಿಸಿದ್ದು, 17 ಜಿಲ್ಲೆ ಇದಾಗಿದೆ. ನವೆಂಬರ್ 26ಕ್ಕೆ ನವದೆಹಲಿ ತಲುಪಲಿದ್ದು, 7 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ’ ಎಂದು ನಾಗರಾಜ್ ಮಾಹಿತಿ ನೀಡಿದರು.
ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ‘7 ತಿಂಗಳಿನಿಂದ ರೈತರು ಹೋರಾಟ ಮಾಡುತ್ತಿದ್ದರೂ ಇದನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಆಳುವ ಸರ್ಕಾರ ಈ ಹೋರಾಟಕ್ಕೆ ಮನ್ನಣೆ ನೀಡಿಲ್ಲ. ಈ ಹಠಮಾರಿ ಧೋರಣೆಯಿಂದಾಗಿ ಮೂಲಭೂತವಾದಿಗಳಿಗೆ ಅನುಕೂಲ
ವಾಗಿದ್ದು, ಕೃಷಿಕರ ಜೀವನ ನಾಶವಾಗಿದೆ’ ಎಂದು ಆರೋಪಿಸಿದರು.
ವಕೀಲ ಅನೀಸ್ ಪಾಷ, ಮುಖಂಡರಾದ ಕರಿಬಸಪ್ಪ, ಆವರಗೆರೆ ಚಂದ್ರು, ಶ್ರೀನಿವಾಸ್, ಆನಂದರಾಜ್, ಗುಡ್ಡಪ್ಪ, ಸುರೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.