ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಬಾಡಿಗೆ, ಸಂಬಂಧಿ ಮನೆಗಳಲ್ಲಿ ವಾಸ... ಬದುಕು ಅತಂತ್ರ...

Published : 30 ಸೆಪ್ಟೆಂಬರ್ 2024, 7:30 IST
Last Updated : 30 ಸೆಪ್ಟೆಂಬರ್ 2024, 7:30 IST
ಫಾಲೋ ಮಾಡಿ
Comments

ದಾವಣಗೆರೆ: ಭಾರಿ ಗಾಳಿ–ಮಳೆಗೆ ಹಾರಿ ಹೋದ ತಾಡಪಾಲುಗಳು, ತಗಡಿನ ಶೀಟ್‌ಗಳು, ಮುರಿದು ಬಿದ್ದಿರುವ ವಿದ್ಯುತ್‌ ಕಂಬಗಳು, ಅಳಿದುಳಿದ ಮರದ ಗಳಗಳು...

ಕೊಳೆಗೇರಿಯಾಗಿದ್ದ ಹೆಗಡೆ ನಗರದ ನಿವಾಸಿಗಳನ್ನು ಸ್ಥಳಾಂತರಿಸಿದ್ದ ನಗರ ಹೊರವಲಯದ ದೊಡ್ಡಬಾತಿ ಸಮೀಪದ ಆಯುರ್ವೇದ ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿರುವ ನಿರಾಶ್ರಿತರ ಜಾಗದ ಚಿತ್ರಣವಿದು.

ನಗರದ ಪಿ.ಬಿ. ರಸ್ತೆಯಿಂದ ಮಾಗಾನಹಳ್ಳಿ ರಸ್ತೆಯವರೆಗೆ ರಿಂಗ್‌ ರಸ್ತೆ ನಿರ್ಮಿಸಲು ರಾಮಕೃಷ್ಣ ಹೆಗಡೆ ನಗರ ಹಾಗೂ ಚಂದ್ರೋದಯ ನಗರದ ನಿವಾಸಿಗಳನ್ನು ದೊಡ್ಡಬಾತಿ ಸಮೀಪದ ಖಾಲಿ ಜಾಗಕ್ಕೆ ಕಳೆದ ಡಿಸೆಂಬರ್‌ 2ರಂದು ಏಕಾಏಕಿ ಸ್ಥಳಾಂತರಿಸಲಾಗಿತ್ತು. ಚಳಿಗಾಲ ಮತ್ತು ಬೇಸಿಗೆಯನ್ನು ಅಲ್ಲಿಯೇ ಕಳೆದಿದ್ದರು. ಆದರೆ, ಜುಲೈ ನಂತರ ಭಾರಿ ಮಳೆ, ಗಾಳಿಗೆ ಗುಡಿಸಲುಗಳ ಶೀಟ್‌, ತಾಡಪಾಲುಗಳು ಹಾರಿಹೋದ ಕಾರಣ ಜೀವವನ್ನು ಉಳಿಸಿಕೊಳ್ಳಲು ನಗರಕ್ಕೆ ಮರಳಿರುವ ಎಲ್ಲರೂ ಈಗ ಬಾಡಿಗೆಮನೆಗಳಲ್ಲಿ, ಬಾಡಿಗೆ ಹಣ ಕಟ್ಟಲೂ ಸಾಧ್ಯವಿಲ್ಲದವರು ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದಾರೆ.

‘ಚಾವಣಿಯೇ ಇಲ್ಲದ ಗುಡಿಸಲುಗಳಿಗೆ ನಮ್ಮನ್ನು ಸ್ಥಳಾಂತರಿಸಿದ್ದರೂ ಚಳಿ, ಬಿಸಿಲನ್ನು ತಡೆದುಕೊಂಡು ಹೇಗೋ ಬದುಕಿದೆವು. ಮಳೆ ಆರಂಭವಾದ ನಂತರ ಗುಡಿಸಲುಗಳ ಮೇಲೆಯೇ ವಿದ್ಯುತ್‌ ಕಂಬಗಳು ಉರುಳಿಬಿದ್ದವು. ತಾಡಪಾಲು, ಶೀಟುಗಳು ಹಾರಿಹೋದವು. ಮಕ್ಕಳು, ವಯಸ್ಸಾದವರು, ಹೆಣ್ಣುಮಕ್ಕಳ ಪಾಡು ಹೇಳತೀರದಾಗಿತ್ತು. ಜೀವ ಭಯದಿಂದಾಗಿ ಎಲ್ಲರೂ ನಗರಕ್ಕೆ ವಾಪಸ್‌ ಬಂದಿದ್ದೇವೆ’ ಎಂದು ಸ್ಥಳಾಂತರಗೊಂಡಿದ್ದ ನಿರಾಶ್ರಿತ ನಿವಾಸಿ ಮುಬಾರಕ್‌ ತಿಳಿಸಿದರು.

ದಾವಣಗೆರೆ ಸಮೀಪದ ದೊಡ್ಡಬಾತಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ಹೆಗಡೆ ನಗರ ನಿವಾಸಿಗಳಿಗೆ ನಿರ್ಮಿಸಿಕೊಟ್ಟಿದ್ದ ಶೆಡ್‌ಗಳು ಮುರಿದು ಬಿದ್ದಿರುವುದು
ದಾವಣಗೆರೆ ಸಮೀಪದ ದೊಡ್ಡಬಾತಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ಹೆಗಡೆ ನಗರ ನಿವಾಸಿಗಳಿಗೆ ನಿರ್ಮಿಸಿಕೊಟ್ಟಿದ್ದ ಶೆಡ್‌ಗಳು ಮುರಿದು ಬಿದ್ದಿರುವುದು

‘ದೊಡ್ಡಬಾತಿ ಖಾಲಿ ಸ್ಥಳಕ್ಕೆ ಸ್ಥಳಾಂತರಿಸಿದಾಗಿನಿಂದ ಎಲ್ಲರ ಬದುಕು ಅತಂತ್ರವಾಗಿದೆ. ಅಲ್ಲಿದ್ದ 6 ತಿಂಗಳಲ್ಲಿ ದುಡಿಮೆ ಇಲ್ಲದೆ ಅರೆಹೊಟ್ಟೆ ಜೀವನ ನಡೆಸಿದವು. ಯಾರಾದರೂ ತಂದು ಕೊಟ್ಟಿದ್ದನ್ನು ತಿಂದು ನಮಗೆ ನೀಡಿದ್ದ ಜಾಗವನ್ನು ಕಾದುಕೊಂಡು ಅಲ್ಲಿಯೇ ಇದ್ದೆವು. ಆಗ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. ನೆಪಮಾತ್ರಕ್ಕೆ ಟೆಂಟ್‌ ಶಾಲೆ ಆರಂಭಿಸಲಾಯಿತು. ಮಳೆಯ ಕಾರಣ ನಗರಕ್ಕೆ ಬಂದೆವು. ಎಲ್ಲಿ ವಾಸಿಸಬೇಕು ಎಂಬುದೇ ಗೊತ್ತಿರದ ಹಲವರು ಮಕ್ಕಳನ್ನು ಶಾಲೆಗೆ ಕಳುಹಿಸಲಾಗಲಿಲ್ಲ. ಕೆಲವರು ಆಗಸ್ಟ್‌ನಿಂದ ಮಕ್ಕಳನ್ನು ಶಾಲೆಗೆ ಹಚ್ಚಿದ್ದಾರೆ. ಕೂಲಿನಾಲಿ ಮಾಡುವ ನಮಗೆ ₹ 3,000 ಬಾಡಿಗೆ ಕಟ್ಟಲೂ ಕಷ್ಟವಾಗುತ್ತಿದೆ. ಮತ್ತೆ ಕೆಲವರು ಸಂಬಂಧಿಕರ ಮನೆಗಳಲ್ಲಿ ಅಸಹನೀಯ ಬದುಕು ನಡೆಸುತ್ತಿದ್ದಾರೆ’ ಎಂದು ಎಸ್‌ಜೆಎಮ್‌ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಾಹಿನಾ ಬಾನು ತಿಳಿಸಿದರು.

‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ಮುಖಂಡರು ಕಾಂಗ್ರೆಸ್‌ಗೆ ಮತ ಹಾಕಿ. ನಿಮಗೆ ಮನೆಗಳನ್ನು ಬೇಗ ನಿರ್ಮಿಸಿಕೊಡಲಾಗುವುದು ಎಂದು ಆಸೆ ತೋರಿಸಿದರು. ಅವರ ಮಾತಿನಂತೆ ನಡೆದುಕೊಂಡೆವು. ಆದರೆ, ಗೆದ್ದ ಬಳಿಕ ಯಾರೂ ಬಂದು ನಮ್ಮ ಕಷ್ಟ ಏನೆಂದು ಕೇಳಲಿಲ್ಲ. ವಿವಿಧ ಗ್ರಾಮಗಳಿಗೆ ಭೇಟಿ ನೀಡುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ನಮ್ಮ ಪರಿಸ್ಥಿತಿ ಕಾಣಿಸುವುದಿಲ್ಲವೇ’ ಎಂದು ಸ್ಥಳೀಯರು ಪ್ರಶ್ನಿಸಿದರು.

ಹೆಗಡೆ ನಗರ ನಿವಾಸಿಗಳಿಗೆ 400 ಮನೆಗಳನ್ನು ನಿರ್ಮಿಸಿಕೊಡುವ ಸಂಬಂಧ ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಯಾವುದೇ ಆದೇಶ ಇದುವರೆಗೆ ಬಂದಿಲ್ಲ.
ರೇಣುಕಾ ಆಯುಕ್ತರು ದಾವಣಗೆರೆ ಮಹಾನಗರ ಪಾಲಿಕೆ
ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸುವುದಕ್ಕೆ ಮುನ್ನ ನಿಗದಿತ ಜಾಗದಲ್ಲಿ ಮನೆ ನಿರ್ಮಿಸಿ ಅಗತ್ಯ  ಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ ಹೆಗಡೆನಗರ ನಿವಾಸಿಗಳ ವಿಚಾರದಲ್ಲಿ ಕಾನೂನನ್ನು ಉಲ್ಲಂಘಿಸಲಾಗಿದೆ. ನಿವಾಸಿಗಳಿಗೆ ಎಲ್ಲಿಯೂ ನಿಲ್ಲಲು ನೆಲೆ ಇಲ್ಲದೆ ಆತಂಕದಲ್ಲಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳ ಅಮಾನವೀಯ ನಡೆ ಖಂಡನೀಯ. ಜಿಲ್ಲಾ ನ್ಯಾಯಾಲಯವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ಮೂಲಕ ನಿವಾಸಿಗಳಿಗೆ ನ್ಯಾಯ ದೊರಕಿಸಬೇಕು.
ನೂರ್‌ ಫಾತಿಮಾ ಸಾಮಾಜಿಕ ಹೋರಾಟಗಾರ್ತಿ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT