ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ವೇಗ ಪಡೆಕೊಂಡಿದೆ ಸ್ಮಾರ್ಟ್‌ಸಿಟಿ: ಸಂಸದ ಜಿ.ಎಂ. ಸಿದ್ದೇಶ್ವರ

Last Updated 29 ಜನವರಿ 2020, 13:45 IST
ಅಕ್ಷರ ಗಾತ್ರ

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳಿಗೆ ₹ 396 ಕೋಟಿ ಬಿಡುಗಡೆಯಾಗಿ ಮೂರು ವರ್ಷಗಳಾಗುತ್ತಾ ಬಂತು. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಸ್ಮಾರ್ಟ್‌ಸಿಟಿಗೆ ಹೊಸ ಎಂಡಿಯಾಗಿ ರವೀಂದ್ರ ಮಲ್ಲಾಪುರ್‌ ಬಂದ ಮೇಲೆ ಕೆಲಸ ಸ್ವಲ್ಪ ವೇಗ ಪಡೆದುಕೊಂಡಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸ್ಮಾರ್ಟ್‌ಸಿಟಿಯ ವಿವಿಧ ಕಾಮಗಾರಿಗಳನ್ನು ಬುಧವಾರ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ಕಟ್ಟಡದ ಕಾಮಗಾರಿ 2018ರಲ್ಲಿ ₹ 12.60 ಕೋಟಿ ವೆಚ್ಚದಲ್ಲಿ ಆರಂಭವಾಗಿತ್ತು. 2019ರಲ್ಲಿ ಮುಗಿಯಬೇಕಿತ್ತು. ಈ ವರ್ಷ ಮುಗಿಸಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಎಸ್‌ಪಿ ಕಚೇರಿ ಬಳಿ ₹ 19 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಯಾಟಲೈಟ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌, ಆಮಿನಿಟಿ ಸೆಂಟರ್‌, ಹೊಂಡ ಸರ್ಕಲ್‌ ಬಳಿಯ ಕಲ್ಯಾಣಿ ಹೊಂಡ, ಕ್ಲಾಕ್‌ ಟವರ್‌ ಎಲ್ಲವೂ ಕಳೆದ ವರ್ಷ ಆಗಬೇಕಿತ್ತು. ಈ ವರ್ಷದ ಜೂನ್‌ನಲ್ಲಿ ಸಂಪೂರ್ಣಗೊಳ್ಳಲಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಆಶ್ರಯ ಲೇಔಟ್‌, ಎಸ್‌ಪಿಎಸ್‌ ನಗರದ ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಸ್ಕ್ರೂ ಬಿಡ್ಜ್‌, 7 ಸ್ಮಾರ್ಟ್‌ ರಸ್ತೆಗಳು, ಮಂಡಕ್ಕಿ ಭಟ್ಟಿ ರಸ್ತೆ ಮತ್ತು ಚರಂಡಿ, ಫಿಶ್‌ ಮಾರುಕಟ್ಟೆ, ಕೆಒಎಫ್‌, ಭಗೀರಥ ವೃತ್ತ, ವಿದ್ಯಾನಗರಗಳಲ್ಲಿ ಮಳೆ ನೀರು ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಆಂಜನೇಯ ಬಡಾವಣೆಯಲ್ಲಿ ಇ ಲರ್ನಿಂಗ್‌ ಸೆಂಟರ್‌ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು.

‘ಅಧಿವೇಶನ ಮುಗಿದ ಬಳಿಕ ಮುಂದಿನ ಫೆ.13 ಅಥವಾ 14ರಂದು ಉಳಿದ ಕಾಮಗಾರಿ ವೀಕ್ಷಣೆ ಮಾಡಲಾಗುವುದು. ಕಳಪೆ ಕಾಮಗಾರಿ ಆಗದಂತೆ ಕಾಮಗಾರಿ ಮಾಡಲು ಸೂಚಿಸಿದ್ದೇನೆ. ಕಾಮಗಾರಿ ನಿಧಾನ ಮಾಡುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಸಿದರು.

‘ಔಟರ್‌ ರಿಂಗ್‌ ರೋಡು ಮಾಡಬೇಕು ಎಂಬ ಚಿಂತನೆ ಇದೆ. ದೂಡಾ ಅಧ್ಯಕ್ಷರು, ಕಮಿಷನರ್‌, ಪಾಲಿಕೆ, ಹೀಗೆ ಸಂಬಂಧಪಟ್ಟವರು ಸಮೀಕ್ಷೆ, ನೀಲನಕ್ಷೆ ತಯಾರಿಸಿ ನೀಡಿದರೆ ಅದಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ ಇದ್ದರು.

‘ಜಿಲ್ಲೆಗೆ ಮಂತ್ರಿಸ್ಥಾನ ನೀಡಲು ಒತ್ತಾಯ’
‘ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಮಂದಿ ಶಾಸಕರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಅದರಲ್ಲಿ ಒಬ್ಬರಿಗಾದರೂ ಮಂತ್ರಿಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಜತೆಗೆ ಮುಖ್ಯಮಂತ್ರಿಗಳ ಕಷ್ಟವನ್ನೂ ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌, ಜೆಡಿಎಸ್‌ನಿಂದ 17 ಮಂದಿ ಶಾಸಕರು ಬಿಜೆಪಿಗೆ ಬಾರದೆ ಇರುತ್ತಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಅವರಿಗೂ ಸಚಿವ ಸ್ಥಾನ ನೀಡಬೇಕಾಗುತ್ತದೆ. ಯಾರಿಗೆ ನೀಡಬೇಕು ಎಂಬ ಪರಮಾಧಿಕಾರ ಮುಖ್ಯಮಂತ್ರಿಯವರದ್ದೇ ಆಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT