ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದು ಆಳುವ ನೀತಿ: ಬ್ರಿಟಿಷರಿಗಿಂತ ಅಪಾಯಕಾರಿ ಬಿಜೆಪಿ

ಹಿಂದೂ ಮಹಾಸಭಾದ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಆರೋಪ
Last Updated 19 ನವೆಂಬರ್ 2020, 11:52 IST
ಅಕ್ಷರ ಗಾತ್ರ

ದಾವಣಗೆರೆ: ಜಾತಿಗೊಂದು ನಿಗಮ ಸ್ಥಾಪಿಸುವ ಮೂಲಕ ಹಿಂದೂ ಧರ್ಮವನ್ನು ಬಿಜೆಪಿ ಒಡೆದು ಆಳುತ್ತಿದೆ. ಒಡೆದು ಆಳುವ ನೀತಿಯಲ್ಲಿ ಬಿಜೆಪಿ ಬ್ರಿಟಿಷರು, ಮೊಘಲರಿಗಿಂತ ಅಪಾಯಕಾರಿ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸದೀಯ ಕಾರ್ಯದರ್ಶಿ ಧರ್ಮೇಂದ್ರ ಆರೋಪಿಸಿದರು.

‘ಭ್ರಷ್ಟಾಚಾರ ಮುಕ್ತ ದೇಶ, ಹಿಂದೂ ರಾಷ್ಟ್ರದ ಕಲ್ಪನೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಮೂಲ ಉದ್ದೇಶ ಬಿಟ್ಟು, ಓಲೈಕೆ ರಾಜಕಾರಣ ಮಾಡುತ್ತಿದೆ. ಧರ್ಮವನ್ನು ಜಾತಿ ಆಧಾರದಲ್ಲಿ ಒಡೆಯುತ್ತಿದೆ. ಇದು ಮುಂದುವರಿದರೆ ಬಿಜೆಪಿಯನ್ನು ಜನ ತಿರಸ್ಕರಿಸುವ ದಿನ ದೂರವಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ.ಕೊರೊನಾ ಹೆಸರಲ್ಲಿ ಲೂಟಿ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ ಈಗ ಅಭಿವೃದ್ಧಿ ಹೆಸರಲ್ಲಿ ಒಡೆದು ಆಳಲು ಮುಂದಾಗಿದೆ ಎಂದು ದೂರಿದರು.

ದೇಶದ ಅಭಿವೃದ್ಧಿಗಾಗಿ ಮುಂದಿನ ಚುನಾವಣೆಯಲ್ಲಿ ಹಿಂದೂ ಮಹಾಸಭಾ ಸ್ಪರ್ಧಿಸಲಿದೆ. ಇದಕ್ಕೆ ಸಿದ್ಧತೆ ನಡೆದಿದೆ ಎಂದರು.

ದೇಶದಲ್ಲಿ ಬ್ರಿಟಿಷರು, ಮೊಘಲರ ಹೆಸರಿನಲ್ಲಿ ವೃತ್ತ, ನಗರಗಳು ಇವೆ. ಅದೇ ರೀತಿ ನಾಥೂರಾಮ್‌ ಗೋಡ್ಸೆ ಅವರ ಹೆಸರನ್ನು ಯಾವುದಾದರೂ ನಗರಕ್ಕೆ, ಜಿಲ್ಲೆಯಲ್ಲಿನ ವೃತ್ತಕ್ಕೆ ಇಡಬೇಕು. ಅವರ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಗಾಂಧೀಜಿ ‘ರಾಷ್ಟ್ರಪಿತ’ ಎನ್ನುವ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಶಿಕ್ಷಣ ನೀತಿಯಲ್ಲಿ ಸುಳ್ಳು ಹೇಳುತ್ತಾ ಮಕ್ಕಳನ್ನು ದಾರಿ ತಪ್ಪಿಸುತ್ತಿವೆ.‘ರಾಷ್ಟ್ರಪಿತ’ ಎನ್ನುವ ಬಿರುದಿಗೆ ಸಂವಿಧಾನದ ಮಾನ್ಯತೆ ಇಲ್ಲ ಎಂದರು.

ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್‌ ಪವಿತ್ರನ್‌, ‘ನಾಥೂರಾಮ್‌ ಗೋಡ್ಸೆ ಅವರ ಪುಣ್ಯತಿಥಿಯನ್ನು ಅಖಂಡ ಭಾರತ ಸಂಕಲ್ಪ ದಿನವನ್ನಾಗಿ ಆಚರಿಸಲಾಗುವುದು’ ಎಂದರು.

ಜಾತಿ ರಾಜಕಾರಣದ ಮೂಲಕ ಬಿಜೆಪಿ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದು ಅದಕ್ಕೆ ಹೊಸತಲ್ಲ. ಮರಾಠಾ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್‌ 5ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ಹಿಂದೂ ಮಹಾಸಭಾ ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು.

ಬಿಜೆಪಿ ರಾಜ್ಯವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟಿದೆ. ಓಲೈಕೆ ರಾಜಕಾರಣ ಮಾಡುವ ಅದು ಭಾರತೀಯ ಜನತಾ ಪಾರ್ಟಿ ಬದಲು ‘ಭಾರತೀಯ ಜಿನ್ನಾ ಪಾರ್ಟಿ’ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಮಹಾಸಭಾದ ಅರುಣ್‌, ಬಾಲರಾಜ್‌, ನವೀನ್‌ಕುಮಾರ್‌, ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT