ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆಯಿಂದ ನಿತ್ಯವೂ ಕಿರಿಕಿರಿ

ತುಮ್ಮಿನಕಟ್ಟೆ ರಸ್ತೆ ವಿಸ್ತರಣೆಗೆ ಸ್ಥಳೀಯರ ಆಗ್ರಹ
Last Updated 4 ಆಗಸ್ಟ್ 2021, 5:06 IST
ಅಕ್ಷರ ಗಾತ್ರ

ಎನ್.ಕೆ. ಆಂಜನೇಯ

ಹೊನ್ನಾಳಿ: ಹೊನ್ನಾಳಿ ನಗರ ದಿನೇ ದಿನೇ ಬೆಳೆಯುತ್ತಿದ್ದು, ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪ್ರಮುಖ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ವಾಹನಗಳ ದಟ್ಟಣೆಯಿಂದಾಗಿ ಸಂಚಾರ ದುಸ್ತರವಾಗಿದೆ.

ನಗರಕ್ಕೆ ನಿತ್ಯವೂ ಸಾವಿರಾರು ಜನರು ಬರುವುದರಿಂದ ತುಮ್ಮಿನಕಟ್ಟೆ ರಸ್ತೆ (ರಾಜ್ಯ ಹೆದ್ದಾರಿ) ತುಂಬಿ ತುಳುಕುತ್ತದೆ. ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ 50 ಅಡಿಯಿರುವ ರಸ್ತೆ ತುಂಬಿ ಹೋಗುತ್ತದೆ.

ರಸ್ತೆಯ ಇಕ್ಕೆಲಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಾರುಗಳನ್ನು, ಹಳೇ ಸರ್ಕಾರಿ ಆಸ್ಪತ್ರೆಯಲ್ಲಿ ತ್ರಿಚಕ್ರ ವಾಹನಗಳನ್ನು, ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಎಲ್ಲಾ ರೀತಿಯ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈ ಎಲ್ಲವೂ ತುಮ್ಮಿನಕಟ್ಟೆ ರಸ್ತೆಯಲ್ಲಿಯೇ ಬರುವುದರಿಂದ ಹತ್ತು ಹಲವು ಸರ್ಕಾರಿ ಕಚೇರಿಗಳೂ ಇರುವುದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಈ ರಸ್ತೆಯನ್ನು ಅವಲಂಬಿಸುವುದು ಅನಿವಾರ್ಯವಾಗಿರುವುದರಿಂದ ಸಂಚಾರದಟ್ಟಣೆ ಮಾಮೂಲಿ ಎನ್ನುವಂತಾಗಿದೆ.

ಗದಗ– ಹೊನ್ನಾಳಿ ರಸ್ತೆ ವಿಸ್ತರಣೆ ಕಾಮಗಾರಿ ಗಡಿಯ ಎ.ಕೆ. ಕಾಲೊನಿವರೆಗೂ ಬಂದು ಸ್ಥಗಿತಗೊಂಡಿದೆ. ಈಗಾಗಲೇ ರಸ್ತೆಯ ಪಕ್ಕದ ರೈತರ ಜಮೀನುಗಳನ್ನು ಪಡೆದುಕೊಂಡು ಅವರಿಗೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಹೊನ್ನಾಳಿ ಗಡಿ ಪ್ರವೇಶದಿಂದ ಊರೊಳಗೆ ರಸ್ತೆ ವಿಸ್ತರಣೆಗೆ ರಸ್ತೆಯ ಪಕ್ಕದಲ್ಲಿ ಆಸ್ತಿ ಹೊಂದಿರುವ ಮಾಲೀಕರು ಒಪ್ಪಿಗೆ ಕೊಡುತ್ತಿಲ್ಲವಾದ್ದರಿಂದ ರಸ್ತೆ ವಿಸ್ತರಣೆ ಕಾರ್ಯ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ತುಮ್ಮಿನಕಟ್ಟೆ ರಸ್ತೆ ವಿಸ್ತರಣೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಈ ಬಗ್ಗೆ ಮಾಜಿ ಶಾಸಕರು ಮತ್ತು ಹಾಲಿ ಶಾಸಕರು ಸಾಕಷ್ಟು ಕಸರತ್ತು ನಡೆಸಿದ್ದರು. ಶಾಸಕ ರೇಣುಕಾಚಾರ್ಯ ಅವರು ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾದರೆ ಮಾತ್ರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಂಚಾರ ದಟ್ಟಣೆಯಿಂದಾಗಿ ನಿತ್ಯ ಗಲಾಟೆ, ಗದ್ದಲ, ಹೊಡೆದಾಟ, ಅಪಘಾತಗಳನ್ನು ನೋಡಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT