ಮಂಗಳವಾರ, ಮಾರ್ಚ್ 21, 2023
20 °C
ಕೊರೊನಾ ಸಂಕಷ್ಟ: ಅಂಗವಿಕಲರಾದರೂ ಎದೆಗುಂದದ ಹುಸೇನ್‌ ಪೀರ್‌

ಬಟ್ಟೆ ವ್ಯಾಪಾರಕ್ಕಿಳಿದ ತಬಲಾ ವಾದಕ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಅಂಗವಿಕಲರಾಗಿದ್ದರೂ ತಬಲಾ ವಾದನದಲ್ಲಿ ಹೆಸರುಗಳಿಸಿದ್ದ ಸಾಗರ್ ಖ್ಯಾತಿಯ ಹುಸೇನ್ ಪೀರ್ ಅವರು ಈಗ ಕೊರೊನಾ ಸಂಕಷ್ಟದಿಂದ ತಬಲಾ ವಾದನದಿಂದಲೇ ವಿಮುಖಗೊಂಡು ವ್ಯಾಪಾರದತ್ತ ಮುಖ ಮಾಡಿದ್ದಾರೆ.

ಪಟ್ಟಣದ ಬಾಣಗೇರೆ ನಿವಾಸಿ ಮೆಹಬೂಬ್ ಸಾಬ್, ರಷಿದಾಬೀ ದಂಪತಿಯ ಪುತ್ರ ಹುಸೇನ್ ಪೀರ್ (ಸಾಗರ್)  ಅಂಗವಿಕಲರು. 7ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಹಕ್ಕಂಡಿ ವಾಮದೇವಪ್ಪನವರ ಬಳಿ ಜೂನಿಯರ್ ಮತ್ತು ಸೀನಿಯರ್ ಸಂಗೀತಾಭ್ಯಾಸ ಮಾಡಿ, ತಬಲಾ ವಾದನದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಪಟ್ಟಣದಲ್ಲಿ ಯಾವುದೇ ಕಾರ್ಯಕ್ರಮಗಳಾಗಲಿ ಹಾಜರಾಗುತ್ತಿದ್ದ ಅವರು ತಬಲಾ ನುಡಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದರು.

ಕೊರೊನಾ ಮೊದಲ ಅಲೆ ಆರಂಭವಾದಾಗ ಸಮಾರಂಭ, ಮದುವೆ ಸೇರಿ ಇತ್ಯಾದಿ ಕಾರ್ಯಕ್ರಮಗಳು ಇಲ್ಲದೇ  ಕಲಾವಿದರ ಬದುಕು ಬೀದಿಗೆ ಬಂತು. ವಿವಿಧ ಜಿಲ್ಲೆಗಳಲ್ಲಿ ತಬಲಾ ವಾದನಕ್ಕೆ ತೆರಳಿ ಬದುಕು ಕಟ್ಟಿಕೊಂಡಿದ್ದ ಹುಸೇನ್ ಪೀರ್ ಅವರಿಗೆ, ಜೀವನ ನಡೆಸುವುದೇ ದುಸ್ತರವಾಯಿತು. ಆ ಕಲೆಯಿಂದ ದೂರ ಉಳಿದರು. 2020ರ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ತಮ್ಮ ಮನೆಯಲ್ಲಿ ಟಿಫಿನ್, ಟೀ ತಯಾರಿಸಿಕೊಂಡು, ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದರು.

ಎರಡನೇ ಅಲೆ ಬರುತ್ತಲೇ ಆಗತಾನೆ ಆರಂಭಿಸಿದ್ದ ಟೀ, ಟಿಫಿನ್ ಮಾರಾಟಕ್ಕೂ ಕುತ್ತು ಬಂತು. ಹೆಗಲಿಗೆ ಬಿದ್ದ ಕುಟುಂಬ ಸಾಗಿಸುವುದು ಅಸಾಧ್ಯವಾಯಿತು. ಗಾಯದ ಮೇಲೆ ಬರೆ ಬಿದ್ದರೂ ಛಲ ಬಿಡದ ಹುಸೇನ್ ಸ್ವಲ್ಪ ಹಣ ಹೊಂದಿಸಿಕೊಂಡು ಬಟ್ಟೆ ವ್ಯಾಪಾರಕ್ಕೆ ಮುಂದಾದರು. ಪಟ್ಟಣ, ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಮಕ್ಕಳ ಬಟ್ಟೆ ವ್ಯಾಪಾರ ಶುರು ಮಾಡಿದರು. 

‘25 ವರ್ಷಗಳಿಂದ ಕರಗತ ಮಾಡಿಕೊಂಡಿದ್ದ ಸಂಗೀತ ಕಲೆಯನ್ನು ತುಂಬಾ ನೋವಿನಿಂದ ತೊರೆದು. ಚಿಕ್ಕ ಮಕ್ಕಳ ಬಟ್ಟೆ ವ್ಯಾಪಾರ ಶುರು ಮಾಡಿದ್ದೇನೆ’ ಎಂದು ಹುಸೇನ್ ಪೀರ್ ಹೇಳಿದರು.

ಹುಸೇನ್ ಅವರ ಕಾಯಕಕ್ಕೆ ಹೆಂಡತಿ ಜರಿನಾ ಕೈಜೋಡಿಸಿದ್ದಾರೆ. ಅವಳಿ ಮಕ್ಕಳಾದ ಸಾಜಿದಾ, ವಾಜಿದಾ ಹಾಗೂ ಪುತ್ರ ಸುಯೇಲ್ ಅವರಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ದೊಡ್ಡ ನೌಕರಿಗೆ ಕೊಡಿಸುವ ಕನಸು ಕಟ್ಟಿಕೊಂಡಿದ್ದಾರೆ ಕಲಾವಿದ ಹುಸೇನ್ ಪೀರ್‌.

ಸಂಗೀತ ಕಾರ್ಯಕ್ರಮಗಳಿದ್ದರೆ ₹ 500ರಿಂದ ₹ 1 ಸಾವಿರದ ವರೆಗೆ ಸಂಭಾವನೆ ಕೊಡುತ್ತಿದ್ದರು. ಆದರೆ ಈಗ ಕೊರೊನಾ, ಆ್ಯಪ್‌ಗಳು, ಮ್ಯೂಸಿಕ್ ಟ್ರ್ಯಾಕ್‌, ಡಿಜೆಗಳ ಸದ್ದಿಗೆ, ನನ್ನ ತಬಲಾ ಶಬ್ದ ಯಾರಿಗೆ ಕೇಳುತ್ತೆ ಸರ್. ಅದಕ್ಕೆ ನಿಲ್ಲಿಸಿಬಿಟ್ಟೆ. ಮನೆಯಲ್ಲಿದ್ದ ವಾದ್ಯಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಈಗ ಬಟ್ಟೆ ವ್ಯಾಪಾರದಲ್ಲಿ ತಲ್ಲೀನನಾಗಿದ್ದೇನೆ. ನನಗೆ ಯಾವ ಕೆಲಸಕ್ಕೂ ಮುಜುಗರವಿಲ್ಲ. ತಬಲಾ ವಾದನದಿಂದ ದೂರ ಉಳಿದಿದ್ದೂ ಬೇಸರವಿದೆ ಎಂದು ನೋವಿನಿಂದಲೇ ಹೇಳಿದರು ಅವರು.

ಹುಸೇನ್‌, ‌ಸಾಗರ್‌ ಆದ ಪರಿ

‘ವಾಮದೇವಪ್ಪನವರ ಬಳಿ ಸೀನಿಯರ್ ತಬಲಾ ಅಭ್ಯಾಸ ಮಾಡುತ್ತಿದ್ದೆ. ಪೌರಾಣಿಕೆ ಕಾರ್ಯಕ್ರಮವೊಂದಕ್ಕೆ ತಬಲಾ ವಾದನಕ್ಕೆ ನಾನು ಹೋಗಬೇಕಾಗಿತ್ತು. ಆ ಗ್ರಾಮಸ್ಥರಿಗೆ ಹೆಸರು ಗೊತ್ತಾಗದೇ ಆಕಸ್ಮಿಕವಾಗಿ ಕರಪತ್ರದಲ್ಲಿ ತಬಲಾ ಸಾಥ್ ನಲ್ಲಿ ನನ್ನ ಹೆಸರು ಸಾಗರ್ ಎಂದು ಬರೆದಿದ್ದರು. ನಾನು ಅಂದಿನಿಂದ ಸಾಗರ್ ಆಗಿ ವಿವಿಧ ಜಿಲ್ಲೆಗಳಲ್ಲಿ ಚಿರಪರಿಚಿತನಾದೆ’ ಎಂದು ತಮ್ಮ ಹೆಸರು ಬದಲಾದದ್ದನ್ನು ಹುಸೇನ್ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.