ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂದುಕೊಂಡಂತೆ ಆಗಲು ಶ್ರಮ ಹಾಕಿ

ಚಿತ್ರ ನಟ ಡಾಲಿ ಧನಂಜಯ್ ಸಲಹೆ
Published 1 ಜೂನ್ 2024, 5:51 IST
Last Updated 1 ಜೂನ್ 2024, 5:51 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರತಿಯೊಬ್ಬರು ನೀವು ಏನೇನೆಲ್ಲ ಆಗಬೇಕು ಅಂದುಕೊಂಡಿದ್ದೀರೋ ಅದೆಲ್ಲಾ ಆಗುವ ಶಕ್ತಿ ನಿಮ್ಮೊಳಗೆ ಇದ್ದು, ಅದರಂತೆ ನೀವು ಆಗಬಹುದು. ಆದರೆ ಅದಕ್ಕೆ ಶ್ರಮ ಹಾಕಿ’ ಎಂದು ಚಿತ್ರ ನಟ ಡಾಲಿ ಧನಂಜಯ್ ಸಲಹೆ ನೀಡಿದರು.

ನಗರದ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನಮ್ಮ ದವನ 24’ ಎರಡು ದಿನದ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಿಮ್ಮ ಪ್ರೀತಿ ತುಂಬಾ ದೊಡ್ಡದು. ನನಗೆ ಹುಷಾರಿಲ್ಲ, ಸುಸ್ತಾಗಿದ್ದರೂ ವೇದಿಕೆ ಮೇಲೆ ಬಂದಿದ್ದೇನೆ. ನಿಮ್ಮ ಪ್ರೀತಿಗಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಅದಕ್ಕಿಂತ ಸಾರ್ಥಕತೆ ಬೇರೇನೂ ಇಲ್ಲ. ಇಲ್ಲಿಂದ ಹೋಗುವಾಗ ಸ್ವಲ್ಪ ಹುಷಾರಾಗಿ ಹೋಗುತ್ತೇನೆ’ ಎಂದು ಹೇಳಿದರು.

‘ದಾವಣಗೆರೆಗೆ ನಾನು ಮೂರನೇ ಬಾರಿಗೆ ಬಂದಿದ್ದೇನೆ. ದವನ ಕಾರ್ಯಕ್ರಮಕ್ಕೆ ಬಂದಾಗೆಲ್ಲ ಅದೇ ಜೋಶ್‌ ಇರುತ್ತದೆ. ಎಂಜಿನಿಯರಿಂಗ್ ಕಾಲೇಜಿಗೆ ಬಂದಾಗಲೆಲ್ಲಾ ಇಷ್ಟು ಬೇಗ ವರ್ಷಗಳು ಉರುಳಿದವಾ ಎಂದು ಅನ್ನಿಸುತ್ತದೆ. ನಾನು ನಿಮ್ಮ ಹಾಗೆಯೇ ಇದ್ದೆ’ ಎಂದು ಸ್ಮರಿಸಿದರು.

‘ಜೂ.14ಕ್ಕೆ ನನ್ನ ನಟನೆಯ ಕೋಟಿ ಸಿನಿಮಾ ಬಿಡುಗಡೆಯಾಗಲಿದೆ. ನೀವೆಲ್ಲ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಪ್ರೋತ್ಸಾಹಿಸಿ. ನಾನು ಚಿಕ್ಕವನಾಗಿದ್ದಾಗ ₹ 1ಕೋಟಿ ಹೊಂದಬೇಕೆಂಬ ಆಸೆ ಇತ್ತು. ನಿಮಗೂ ಅಂತಹ ಆಲೋಚನೆ ಇರಬಹುದು. ಕೋಟಿ ಚಿತ್ರ ನೋಡಿದರೆ ನೀವು ಕೋಟಿ ರೂಪಾಯಿ ದುಡಿಯುತ್ತೀರಿ’ ಎಂದು ಹೇಳಿದರು.

ನಟಿ ಮೋಕ್ಷಾ ಕುಶಾಲ್ ಮಾತನಾಡಿ, ‘ನಾನು ಕೂಡ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಓದಿದ್ದೇನೆ. ನಾವು ಇಷ್ಟಪಟ್ಟು ಮತ್ತು ಕಷ್ಟಪಟ್ಟು ಮಾಡಿದ ‘ಕೋಟಿ‘ ಸಿನಿಮಾ ನೋಡಿ. ಜೂ. 5ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಸಿ’ ಎಂದು ಹೇಳಿದರು.

ಧನಂಜಯ್‌ ಟಗರು ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.

ದಾವಣಗೆರೆಯ ನಟ ಪೃಥ್ವಿ ಶಾಮನೂರು, ನಟ ಅಭಿಷೇಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ಡಾ.ಜಿ.ಪಿ. ದೇಸಾಯಿ, ಡಾ.ಎಚ್.ಪಿ. ವಿನುತಾ, ಡಾ.ಪಿ.ಎಂ. ಕಲ್ಲೇಶಪ್ಪ, ಡಾ.ಮಾನವೇಂದ್ರ, ಡಾ. ದೇವೇಂದ್ರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT