ಶುಕ್ರವಾರ, ಫೆಬ್ರವರಿ 21, 2020
27 °C
ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಜಿ.ಪಂ. ಸಿಇಒ ಪದ್ಮ ಬಸವಂತಪ್ಪ

ಆರೋಗ್ಯ ಕೆಡಿಸಿಕೊಳ್ಳದೇ ಅಧ್ಯಯನ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪರೀಕ್ಷೆ ಎದುರಿಸಲು ತಯಾರಾಗಬೇಕು. ಆದರೆ ಅದಕ್ಕಾಗಿ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು. ಆರೋಗ್ಯ ಕಾಪಾಡಿಕೊಂಡು ಸಾಧನೆ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಾಧ್ಯಮಿಕ ಶಿಕ್ಷಕರ ಸಂಘ, ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಆಂಗ್ಲಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೋಮವಾರ ವಿಶ್ವಚೇತನ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುವ ಸಮಯ ಇದು. ವಿದ್ಯಾರ್ಥಿಗಳು ಹೆಚ್ಚು ನೀರು ಕುಡಿಯಬೇಕು. ಹೊರಗಿನ ಆಹಾರ ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬಾರದು. ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಬೇಕು ಎಂದು ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 9ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು 5ರೊಳಗೆ ತರುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿ ಮಕ್ಕಳಿಗೆ ಒತ್ತಡ ನಿರ್ವಹಣೆ, ವ್ಯಕ್ತಿತ್ವ ವಿಕಸನ ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಒಬ್ಬರೋ ಇಬ್ಬರೋ ರ‍್ಯಾಂಕ್‌ ಪಡೆಯಬೇಕು ಎಂಬುದು ನಮ್ಮ ಗುರಿಯಲ್ಲ. ಪರೀಕ್ಷೆ ಬರೆದ ಎಲ್ಲರೂ ಉತ್ತೀರ್ಣರಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ’ ಎಂದು ವಿವರಿಸಿದರು.

ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಮಾತನಾಡಿ, ‘ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಪರೀಕ್ಷೆಗೆ 45 ದಿನಗಳಷ್ಟೇ ಉಳಿದಿವೆ. ಎಲ್ಲರೂ ಆತ್ಮಸ್ಥೈರ್ಯದಿಂದ, ಏಕಾಗ್ರತೆಯಿಂದ ದಿನಕ್ಕೆ ಕನಿಷ್ಠ 6 ಗಂಟೆ ಓದಬೇಕು. ಬರೆದು ಕಲಿಯಬೇಕು. ಒಂದು ಬಾರಿ ಬರೆದರೆ, 10 ಬಾರಿ ಓದುವುದಕ್ಕೆ ಸಮಾನ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ‘ರಾತ್ರಿ 7ರಿಂದ 10ರವರೆಗೆ, ಬೆಳಿಗ್ಗೆ 4ರಿಂದ 7ರವರೆಗೆ ಓದಬೇಕು. ರಾತ್ರಿ 10 ಗಂಟೆಯ ನಂತರ ಓದಲು ಹೋಗಬೇಕು. ಬೇಗನೆ ಮಲಗು, ಬೇಗನೆ ಏಳು ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು’ ಎಂದರು.

ವಿಶ್ವಚೇತನ ಎಜುಕೇಶನಲ್‌ ಟ್ರಸ್ಟ್‌ ನಿರ್ದೇಶಕ ಡಾ. ಅನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಾಧ್ಯಮ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಎಸ್‌. ಕೃಷ್ಣಮೂರ್ತಿ ಶ್ರೇಷ್ಠಿ, ಅಧ್ಯಕ್ಷ ಉಮೇಶ್‌, ಸಂಪನ್ಮೂಲ ವ್ಯಕ್ತಿ ಮರುಗೇಂದ್ರಯ್ಯ, ವಿಶೇಷ ಉಪನ್ಯಾಸಕರಾದ ಡಾ.ಅತುಲ್‌, ರಾಜೀವ್‌, ಸತೀಶ್‌ ಉಪಸ್ಥಿತರಿದ್ದರು.

ಉಪಪ್ರಾಚಾರ್ಯ ರೇವಣಸಿದ್ಧಪ್ಪ ಕೆ.ಜಿ. ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಪ್ಪ ಬಿ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಸುಮಾ ಪುರಾಣಿಕಮಠ ವಂದಿಸಿದರು. ಶಿಕ್ಷಣ ನಾಗರಾಜ ಬಿ. ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು