ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜನಸ್ಪಂದನದಲ್ಲಿ ಮಹಿಳೆಯಿಂದ ಆತ್ಮಹತ್ಯೆ ಬೆದರಿಕೆ

ಕೆಲಸ ಕೇಳಿ ಬಂದವರನ್ನು ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ
Last Updated 3 ಫೆಬ್ರುವರಿ 2020, 14:35 IST
ಅಕ್ಷರ ಗಾತ್ರ

ದಾವಣಗೆರೆ: ಕೆಲಸ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಆಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಗುಡುಗಿದ ಪ್ರಸಂಗ ‘ಜನಸ್ಪಂದನ’ ಸಭೆಯಲ್ಲಿ ನಡೆಯಿತು.

ಸೋಮವಾರ ನಡೆದ ಜನಸ್ಪಂದನಕ್ಕೆ ಇಬ್ಬರು ಮಕ್ಕಳೊಂದಿಗೆ ಬಂದ ಮಹಿಳೆಯೊಬ್ಬರು, ‘ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸಿ. ಇಲ್ಲದಿದ್ದರೆ ಇಲ್ಲೇ ಸಾಯುತ್ತೇನೆ’ ಎಂದರು. ಇದರಿಂದ ಕೋಪಗೊಂಡು ಆಸನದಿಂದ ಎದ್ದು ನಿಂತ ಜಿಲ್ಲಾಧಿಕಾರಿ, ‘ಪೊಲೀಸರನ್ನು ಕರೆಸಿ. ಇವರ ವಿರುದ್ಧ ಎಫ್‌ಐಆರ್‌ ಮಾಡಿ. ಆತ್ಮಹತ್ಯೆ ಕೊಳ್ಳುತ್ತೇನೆ ಎನ್ನುವ ಎಲ್ಲರಿಗೂ ಪಾಠವಾಗಲಿ’ ಎಂದು ಕಚೇರಿಯ ಸಿಬ್ಬಂದಿಗೆ ಸೂಚಿಸಿದರು.

ತಕ್ಷಣವೇ ಬಂದ ಪೊಲೀಸರು, ಮಹಿಳೆಯನ್ನು ಹೊರಗೆ ಕರೆದುಕೊಂಡು ಹೋದರು. ಇಬ್ಬರು ಮಕ್ಕಳು ಜೊತೆಗೆ ಇದ್ದುದರಿಂದ ಮಹಿಳೆಯನ್ನು ಪೊಲೀಸರು ಸಮಾಧಾನಪಡಿಸಿ ಮನೆಗೆ ಕಳುಹಿಸಿಕೊಟ್ಟರು.

ಪ್ರತಿ ಸೋಮವಾರ ನಡೆಯುವ ಜನಸ್ಪಂದನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬರುವ ಜನ, ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಕೆಲವರು ನೌಕರಿ ಕೊಡಿಸಿ ಎಂದೂ ಮನವಿ ಸಲ್ಲಿಸುತ್ತಿದ್ದರು. ‘ಉದ್ಯೋಗ ಕೇಳಿಕೊಂಡು ಜನಸ್ಪಂದನಕ್ಕೆ ಬರಬೇಡಿ’ ಎಂದು ಜಿಲ್ಲಾಧಿಕಾರಿ ಮೊದಲ ಮೊದಲು ಸಮಾಧಾನದಿಂದಲೇ ವಾಪಸ್‌ ಕಳುಹಿಸುತ್ತಿದ್ದರು.

ಆದರೆ, ಈ ಹಿಂದಿನ ಎರಡು ಸಭೆಗಳಲ್ಲೂ ‘ಕೆಲಸ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಒಡ್ಡಿದ ಪ್ರಸಂಗ ನಡೆದಿತ್ತು. ‘ಹೇಡಿಗಳಾಗಬೇಡಿ, ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ’ ಎಂದು ಜಿಲ್ಲಾಧಿಕಾರಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಈ ಬಾರಿಯೂ ಇದು ಪುನರಾವರ್ತನೆಯಾಗಿದ್ದರಿಂದ ತಾಳ್ಮೆ ಕಳೆದುಕೊಂಡ ಜಿಲ್ಲಾಧಿಕಾರಿ, ಕೆಲಸ ಕೇಳಿಕೊಂಡು ಬಂದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT