ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಡಜ್ಜಿ ಕೆರೆಗೆ ತಹಶೀಲ್ದಾರ್‌ ಭೇಟಿ

ಟ್ಯಾಂಕರ್‌ ಮೂಲಕ ತೋಟಗಳಿಗೆ ಕೆರೆ ನೀರು ಬಳಸುವುದಕ್ಕೆ ತಡೆ
Published 3 ಏಪ್ರಿಲ್ 2024, 5:27 IST
Last Updated 3 ಏಪ್ರಿಲ್ 2024, 5:27 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಗೆ ಹರಿಹರ ತಹಶೀಲ್ದಾರ್‌ ಗುರುಬಸವರಾಜ ಕೆ.ಎಂ. ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಕೆರೆಯು ಸಂಪೂರ್ಣ ಖಾಲಿಯಾಗುವ ಹಂತ ತಲುಪಿದ್ದು, ಅಳಿದುಳಿದಿರುವ ಒಂದಷ್ಟು ನೀರನ್ನೂ ರೈತರು ಟ್ಯಾಂಕರ್‌ಗಳ ಮೂಲಕ ಖಾಲಿ ಮಾಡುತ್ತಿರುವುದನ್ನು ಗಮನಿಸಿದ ತಹಶೀಲ್ದಾರ್‌, ಕೆರೆಯ ನೀರನ್ನು ತೋಟಗಳಿಗೆ ಬಳಸದಂತೆ ರೈತರಿಗೆ ತಾಕೀತು ಮಾಡಿದರು. ಕೆರೆಯ ನೀರನ್ನು ತುಂಬಿಸಿಕೊಳ್ಳಲು ರೈತರು ತಂದಿದ್ದ ಟ್ಯಾಂಕರ್‌ಗಳನ್ನು ವಾಪಸ್‌ ಕಳಿಸಿದರು. 

‘ಪ್ರಾಣಿ– ಪಕ್ಷಿಗಳಿಗೆ ಎಲ್ಲಿಯೂ ನೀರು ಸಿಗದ ಸ್ಥಿತಿಯಿದೆ. ಹೀಗಿರುವಾಗ ಸ್ವಲ್ಪವೇ ಇರುವ ಕೆರೆಯ ನೀರನ್ನು ಜಮೀನು/ ತೋಟಗಳಿಗೆ ಬಳಸಿದರೆ ಪ್ರಾಣಿ – ಪಕ್ಷಿಗಳ ಸಂಕುಲಕ್ಕೆ ಅಪಾಯ ಉಂಟಾಗಲಿದೆ. ವನ್ಯಜೀವಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕೆರೆಯ ನೀರು ಬಳಸುವುದನ್ನು ನಿಲ್ಲಿಸಿ’ ಎಂದು ರೈತರಿಗೆ ತಿಳಿಹೇಳಿದರು.

ರೈತರ ವಾದ:

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೋಟದ ಬೆಳೆಗಳನ್ನು ಕಾಪಾಡಿಕೊಂಡಿದ್ದೇವೆ. ಇದೀಗ ಮಳೆಯಿಲ್ಲದೇ ಬೆಳೆ ಹಾಳಾಗುವ ಸ್ಥಿತಿಯಿದೆ. ಹೇಗೋ ಕೆರೆಯ ನೀರನ್ನು ಬಳಸಿಕೊಂಡು ಬೆಳೆಗಳನ್ನು ಉಳಿಸಿಕೊಳ್ಳುತ್ತಿದ್ದೇವೆ. ಇದೀಗ ಕೆರೆ ನೀರನ್ನೂ ಬಳಸಬೇಡಿ ಎಂದರೆ ಹೇಗೆ? ನಮಗಾಗುವ ನಷ್ಟವನ್ನು ಸರ್ಕಾರ ಭರಿಸುತ್ತದೆಯೇ?’ ಎಂದು ಟ್ಯಾಂಕರ್‌ಗಳಲ್ಲಿ ನೀರು ತುಂಬಿಕೊಳ್ಳಲು ಬಂದಿದ್ದ ರೈತರು ಪ್ರಶ್ನಿಸಿದರು.

‘ಬೋರ್‌ವೆಲ್‌ ಅಥವಾ ಇನ್ನಿತರ ಮೂಲಗಳನ್ನು ಬಳಸಿಕೊಂಡು ತೋಟಗಳನ್ನು ಉಳಿಸಿಕೊಳ್ಳಬಹುದು. ಕೆರೆಯ ನೀರನ್ನೇ ಅವಲಂಬಿಸಿರುವ ಪ್ರಾಣಿ –ಪಕ್ಷಿಗಳ ಉಳಿವು ಬಹಳ ಮುಖ್ಯ. ಅವುಗಳ ಸಂರಕ್ಷಣೆಗೆ ರೈತರೂ ಕೈಜೋಡಿಸಬೇಕು’ ಎಂದು ತಹಶೀಲ್ದಾರ್‌ ಗುರುಬಸವರಾಜ ಕೆ.ಎಂ. ರೈತರ ಮನವೊಲಿಸಿದರು.

‘ಪ್ರಜಾವಾಣಿ’ಯ ಮಾರ್ಚ್‌ 30ರ ಸಂಚಿಕೆಯಲ್ಲಿ ‘ಬೆಳೆಗೆ ಕೆರೆ ನೀರು; ಪಶು–ಪಕ್ಷಿಗಳಿಗೆ ಸಂಕಷ್ಟ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT