ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಸಬ್ ರಿಜಿಸ್ಟ್ರಾರ್, ರೈತರ ಮಧ್ಯೆ ಜಟಾಪಟಿ

ವಿಂಡ್ ಮಿಲ್ ಕಂಪನಿಗಳ ಪರ ಅಧಿಕಾರಿ ಲಾಬಿ ಆರೋಪ
Last Updated 23 ಅಕ್ಟೋಬರ್ 2021, 3:53 IST
ಅಕ್ಷರ ಗಾತ್ರ

ಜಗಳೂರು: ವಿಂಡ್ ಮಿಲ್ ಹಾಗೂ ಸೋಲಾರ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಾ ರೈತರು ಮತ್ತು ಜನಸಾಮಾನ್ಯರ ಆಸ್ತಿ ನೋಂದಣಿ ಮಾಡಿಕೊಡಲು ಸತಾಯಿಸುತ್ತಿದ್ದಾರೆ ಎಂಬ ಆರೋಪ ಸಂಬಂಧ ಇಲ್ಲಿನ ಸಬ್ ರಿಜಿಸ್ಟ್ರಾರ್ ಹೇಮೇಶ್ ಹಾಗೂ ರೈತರು ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ಶುಕ್ರವಾರ ನಡೆಯಿತು.

ಹೊರ ರಾಜ್ಯದ ವಿಂಡ್ ಮಿಲ್ ಹಾಗೂ ಸೋಲಾರ್ ಕಂಪನಿಗಳು ತಾಲ್ಲೂಕಿನ ರೈತರ ಜಮೀನುಗಳನ್ನು ಖರೀದಿಸುತ್ತಿದ್ದು, ಪ್ರತಿದಿನ ಹತ್ತಕ್ಕೂ ಹೆಚ್ಚು ಜಮೀನು ಖರೀದಿ ಪ್ರಕ್ರಿಯೆಗಳು ನಡೆಯುತ್ತಿವೆ. ಪಟ್ಟಣದ ಮಿನಿ ವಿಧಾಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕಂಪನಿಗಳ ದಲ್ಲಾಳಿಗಳೇ ತುಂಬಿಕೊಂಡಿದ್ದು, ಸ್ಥಳೀಯ ರೈತರ ಪಾಲು ವಿಭಾಗ ಪತ್ರ, ದಾನ ಪತ್ರ ಹಾಗೂ ಇತರೆ ಪತ್ರಗಳ ನೋಂದಣಿಗಾಗಿ ವಾರಗಟ್ಟಲೆ ಅಲೆದಾಡಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಖಾಸಗಿ ಕಂಪನಿಗಳ ಪರವಾಗಿ ಲಾಬಿ ನಡೆಸುತ್ತಾ ಬಡ ರೈತರನ್ನು ಅಲೆದಾಡಿಸುತ್ತಿದ್ದಾರೆ. ಕಾರ್ಯವೈಖರಿ ಸರಿ ಇಲ್ಲ ಎಂದು ಪತ್ರ ಬರಹಗಾರ ಜಿ.ಎಚ್. ಹಜರತ್ ಅಲಿ ಹಾಗೂ ರಂಗಾಪುರದ ರೈತ ಬಾಬುರೆಡ್ಡಿ ಅವರು ಸಬ್ ರಿಜಿಸ್ಟ್ರಾರ್ ಹೇಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪೋದ್ರಿಕ್ತರಾದ ಸಬ್ ರಿಜಿಸ್ಟ್ರಾರ್ ಅವರು ತಮ್ಮ ಆಸನ ಬಿಟ್ಟು ಮೇಲೆದ್ದು ಜೋರುಧ್ವನಿಯಲ್ಲಿ ಕೂಗಾಡಿದರು.

‘ನಮಗೆ ಕಂಪನಿಯವರು ಮತ್ತು ರೈತರು ಎಲ್ಲಾ ಒಂದೇ. ಕಂಪನಿಯವರು ಸಹ ಸರ್ಕಾರಕ್ಕೆ ಹೆಚ್ಚು ಶುಲ್ಕ ಪಾವತಿ ಮಾಡುತ್ತಾರೆ. ತಪ್ಪೇನು?’ ಎಂದು ಸಮಜಾಯಿಷಿ ನೀಡಿದರು. ಅಧಿಕಾರಿ ಹಾಗೂ ರೈತರು ಜಗಳ ತೀವ್ರಗೊಂಡಂತೆ ಸಾರ್ವಜನಿಕರು ಗುಂಪಾಗಿ ಜಮಾಯಿಸಿದ್ದರು.

‘ನಮ್ಮ ಕುಟುಂಬದ ಪಾಲುವಿಭಾಗ ಪತ್ರ ನೋಂದಣಿಗಾಗಿ ಶುಲ್ಕ ಕಟ್ಟಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಲೆದಾಡುತ್ತಿದ್ದೇನೆ. ಆದರೆ, ಅಧಿಕಾರಿ ಹೇಮೇಶ್ ಅವರು ಕಂಪನಿಗಳ ಪರ ಜಮೀನು ಖರೀದಿ ನೋಂದಣಿಗೆ ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ದಬಾಯಿಸುತ್ತಾರೆ’ ಎಂದು ರಂಗಾಪುರ ಗ್ರಾಮದ ರೈತ ಹಾಗೂ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬುರೆಡ್ಡಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT