ಸೋಮವಾರ, ಜೂಲೈ 13, 2020
25 °C

ದಾವಣಗೆರೆ: ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು

ದಾವಣಗೆರೆ: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಸೋಮವಾರದಿಂದ ಬಾಗಿಲು ತೆರೆದು, ಭಕ್ತರಿಗೆ ಷರತ್ತು ಬದ್ಧ ದರ್ಶನ ವ್ಯವಸ್ಥೆ ಕಲ್ಪಿಸಿವೆ.

ನಗರ ದೇವತೆ ದುರ್ಗಾಂಬಿಕಾ ದೇವಾಲಯ, ಗ್ರಾಮದೇವತೆ ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯ, ಹರಿಹರದ ಹರಿಹೇಶ್ವರ ದೇವಾಲಯ, ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಾಲಯಗಳಲ್ಲಿ ಬೆಳ್ಳಿಗ್ಗೆ ಕಡಿಮೆ ಸಂಖ್ಯೆಯ ಭಕ್ತರು ಧಾವಿಸಿ ದರ್ಶನ ಪಡೆಯುತ್ತಿದ್ದಾರೆ.

ನಗರದೇವತೆ ದುರ್ಗಾಂಬಿಕಾ ದೇವಾಲಯ, ಉಚ್ಚೆಂಗಮ್ಮ ದೇವಾಲಯಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಬಿಡಲಾಗುತ್ತಿದೆ. ದುರ್ಗಾಂಬಿಕಾ ದೇವಾಲಯದಲ್ಲಿ ಹೊರಗಡೆ ಕಾಳು ತೊಳೆದುಕೊಂಡು ಹೋಗಲು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವ ದೇವಾಲಯಗಳಲ್ಲೂ ಹಣ್ಣು, ತೆಂಗಿನಕಾಯಿ ಒಯ್ಯುವಂತಿಲ್ಲ. ತೀರ್ಥ, ಪ್ರಸಾದ ನೀಡುತ್ತಿಲ್ಲ. ನಿಟುವಳ್ಳಿಯ ದುರ್ಗಾಂಬಿಕಾ ದೇವಾಲಯದಲ್ಲಿ ಕಾಯಿ ತರುವ ಭಕ್ತರು ಅವರೇ ಒಡೆದು ಪೂಜೆ ಮಾಡಿ ತೆರಳುತ್ತಿದ್ದಾರೆ.

ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ ದೇವಾಲಯದ ಹೊರಗಡೆ ಸ್ಯಾನಿಟೈಸರ್ ನೀಡಿ ಕಳುಹಿಸಲಾಗುತ್ತಿದೆ. ಈವರೆಗೆ 150 ಮಂದಿ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ರಾಣೆಬೆನ್ನೂರಿನ ಉಕ್ಕಡಗಾತ್ರಿ ದೇವಾಲಯದಲ್ಲೂ ಕಡಿಮೆ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು.

ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ದರ್ಶನಕ್ಕೆ ಬಂದಿದ್ದರು. ಬಾಗಿಲಿನಿಂದ ದೇವಸ್ಥಾನದವರೆಗೆ ಮೆಟ್ಟಿಲುಗಳ ಮೇಲೆ ಗುರುತಿಸಲಾಗಿದ್ದ ಜಾಗದಲ್ಲಿ ಅಂತರ ಕಾಯ್ದುಕೊಂಡು ದರ್ಶನ ಪಡೆದರು.

ದೇವಸ್ಥಾನದಲ್ಲಿ ಕುಳಿತು ಪೂಜೆ ಸಲ್ಲಿಸಲು ಅವಕಾಶ ನೀಡದ ಹಿನ್ನಲೆಯಲ್ಲಿ ಭಕ್ತರು ಹಣ್ಣು, ಕಾಯಿಗಳನ್ನು ಬೆಟ್ಟದ ಅಲ್ಲಲ್ಲಿ ಒಡೆದು ಪೂಜೆ ಸಲ್ಲಿಸಿದರು.

'ಉಚ್ಚೆಂಗೆಮ್ಮ ದೇವಿ ದರ್ಶನಕ್ಕೆ ಬಹುತೇಕ ಮಂದಿ ಭಕ್ತರು ಮಂಗಳವಾರ, ಶುಕ್ರವಾರ ಹಾಗೂ ವಿಶೇಷದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಸೋಮವಾರವಾಗಿದ್ದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ ಎಂದು ಮುಜಾರಾಯಿ ಇಲಾಖೆ ಸಿಬ್ಬಂದಿ ಟಿ. ರಮೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು