ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಕೆಸರುಮಯ ರಸ್ತೆಯಲ್ಲಿ ಸಾಗುವ ಸವಾಲು

ದಾವಣಗೆರೆ – ಮಲೇಬೆನ್ನೂರು ಮಾರ್ಗದ ಮಿಟ್ಲಕಟ್ಟೆ ಬಳಿಯ ಜಿಲ್ಲಾ ಹೆದ್ದಾರಿ ರಸ್ತೆಯ ದುಃಸ್ಥಿತಿ
Published 12 ಜೂನ್ 2024, 6:51 IST
Last Updated 12 ಜೂನ್ 2024, 6:51 IST
ಅಕ್ಷರ ಗಾತ್ರ

ದಾವಣಗೆರೆ: ಎಲ್ಲೆಂದರಲ್ಲಿ ಗುಂಡಿಗಳು, ನೋಡೋಣವೆಂದರೂ ಡಾಂಬರು ಸಿಗದಂತಹ ಮಣ್ಣಿನ ಹಾದಿ, ಮಳೆ ಬಂದರೆ ಸಂಪೂರ್ಣ ಕೆಸರು, ಬೇಸಿಗೆಯಲ್ಲಿ ದೂಳೋ ದೂಳು..

ದಾವಣಗೆರೆ – ಮಲೇಬೆನ್ನೂರು ಮಾರ್ಗದ ಮಿಟ್ಲಕಟ್ಟೆ ಬಳಿಯ ಜಿಲ್ಲಾ ಹೆದ್ದಾರಿ ರಸ್ತೆಯ ದುಃಸ್ಥಿತಿ ಇದು. ಇಲ್ಲಿ ವಾಹನ ಚಲಾಯಿಸುವುದೇ ಸವಾರರಿಗೆ ದುಸ್ತರವಾಗಿದೆ. ವಾಹನ ಚಲಾಯಿಸಲು ಭಾರಿ ವಾಹನಗಳ ಚಾಲಕರೇ ಇಲ್ಲಿ ಹರಸಾಹಸ ಪಡುತ್ತಿದ್ದು, ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು.

‘ಅಂದಾಜು ಅರ್ಧ ಕಿ.ಮೀ. ರಸ್ತೆಯಲ್ಲಿ 2–3 ವರ್ಷಗಳ ಹಿಂದೆಯೇ ಡಾಂಬರು ಸಂಪೂರ್ಣವಾಗಿ ಕಿತ್ತು ಹೋಗಿದೆ. ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಪ್ರವಾಹದ ಸ್ಥಿತಿ ಉಂಟಾಗುತ್ತಿದೆ. ಇಲ್ಲಿ ಸಂಚರಿಸಲು ನಿತ್ಯವೂ ಸಂಕಷ್ಟ ಅನುಭವಿಸುತ್ತಿದ್ದೇವೆ. ಆದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಮುಂದಾಗದಿರುವುದು ಬೇಸರ ತರಿಸಿದೆ’ ಎಂದು ವಾಹನ ಸವಾರರು ದೂರುತ್ತಾರೆ.

ದಾವಣಗೆರೆಯಿಂದ ಶಾಮನೂರು ದಾಟಿ ಕಾಲುವೆ ಬರುವವರೆಗೂ ರಸ್ತೆ ಉತ್ತಮವಾಗಿದೆ. ಅರ್ಧ ಕಿ.ಮೀ. ದಾಟಿದ ಬಳಿಕವೂ ರಸ್ತೆ ಸುಸ್ಥಿತಿಯಲ್ಲಿದೆ. ಆದರೆ, ಮಧ್ಯದಲ್ಲಿ ಮಾತ್ರ ರಸ್ತೆ ಪೂರ್ಣವಾಗಿ ಹದಗೆಟ್ಟಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿ ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ, ಅಪಾಯ ಕಟ್ಟಿಟ್ಟಬುತ್ತಿ ಎಂಬ ಸ್ಥಿತಿ ಇದೆ.

ದಾವಣಗೆರೆಯಿಂದ ಮಿಟ್ಲಕಟ್ಟೆ, ಜರೇಕಟ್ಟೆ, ದೇವರಬೆಳಕೆರೆ, ಎರೆ ಬೂದಿಹಾಳ್, ಮಲೇಬೆನ್ನೂರು ಹಾಗೂ ಇನ್ನಿತರ ಗ್ರಾಮಗಳಿಗೆ ತೆರಳಲು ಈ ರಸ್ತೆಯನ್ನೇ ಮುಖ್ಯವಾಗಿ ಅವಲಂಬಿಸಬೇಕಿದೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಆಟೊ, ಕಾರ್‌, ಬೈಕ್‌, ಲಾರಿ ಸೇರಿದಂತೆ ನಿತ್ಯವೂ ಇಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಹಲವು ಅಪಘಾತ:

‘ಬೇಸಿಗೆಯಲ್ಲಿ ದೂಳು ಆವರಿಸುವುದು ಹಾಗೂ ಮಳೆಗಾಲದಲ್ಲಿ ಕೆಸರುಮಯವಾಗುವ ಕಾರಣದಿಂದ ಈ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಬೀಳುವುದು ಇಲ್ಲಿ ಸಹಜವಾಗಿದೆ. ರಸ್ತೆಯಲ್ಲಿ ಮಳೆ ನೀರು ನಿಲ್ಲುವುದರಿಂದ ಎಲ್ಲಿ ತಗ್ಗು ಪ್ರದೇಶ ಇದೆ ಎಂಬುದು ಗೊತ್ತಾಗದೇ ಗುಂಡಿಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇಷ್ಟೆಲ್ಲಾ ಅಪಘಾತಗಳು ಸಂಭವಿಸಿದರೂ, ಯಾರೊಬ್ಬರೂ ಕ್ರಮವಹಿಸಿಲ್ಲ’ ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದರು.

ಈ ರಸ್ತೆಯು ಹರಿಹರ ತಾಲ್ಲೂಕು ವ್ಯಾಪ್ತಿಗೆ ಅರ್ಧ ಹಾಗೂ ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಗೆ ಅರ್ಧ ಮಾರ್ಗ ಬರುತ್ತದೆ. ಇದೇ ಕಾರಣಕ್ಕೆ ಇಲ್ಲಿನ ಹದಗೆಟ್ಟ ರಸ್ತೆಯು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸ್ಥಳೀಯರು ದೂರಿದರು.

ನಿತ್ಯವೂ ದಾವಣಗೆರೆಗೆ ಹೋಗಿ ಬರುತ್ತೇವೆ. ಈ ರಸ್ತೆಯಲ್ಲಿ ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುವುದಕ್ಕೆ ಭಯ ಆಗುತ್ತದೆ. ಯಾವ ಗುಂಡಿಗೆ ಬೈಕ್‌ ಬೀಳುತ್ತದೋ ಎಂಬ ಆತಂಕ ಇದ್ದೇ ಇರುತ್ತದೆ.
ದೇವರಾಜ ನಿಟ್ಟೂರು, ಗ್ರಾಮಸ್ಥ
ಈ ರಸ್ತೆಯಲ್ಲಿ ಸಂಚರಿಸುವುದು ತುಂಬಾ ಅಪಾಯಕಾರಿಯಾಗಿದೆ. ಪೂರ್ತಿ ಹದಗೆಟ್ಟಿರುವ ಅರ್ಧ ಕಿ.ಮೀ. ರಸ್ತೆಯನ್ನು ದಾಟಲು ಹೆಚ್ಚಿನ ಸಮಯ ಹೋಗುತ್ತಿದೆ. ಆದಷ್ಟು ಬೇಗ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು
ಹೇಮಂತ್‌ ಮಲ್ಲನಾಯಕನಹಳ್ಳಿ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT