ಭಾನುವಾರ, ಮೇ 22, 2022
26 °C
ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮ

ಫೆಬ್ರುವರಿಯಲ್ಲಿ ಕೊರೊನಾ ಸಂಖ್ಯೆ ಏರಿ, ಇಳಿಯಲಿದೆ: ಡಾ. ನಾಗರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಮೂರನೇ ಅಲೆಯು ದಾವಣಗೆರೆಯಲ್ಲಿ ತಡವಾಗಿ ಆರಂಭವಾಗಿದೆ. ಈಗ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದೆ. ಫೆಬ್ರುವರಿ ಮೊದಲ ಮೂರು ವಾರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡು, ನಾಲ್ಕನೇ ವಾರಕ್ಕೆ ಇಳಿಕೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ತಿಳಿಸಿದರು.

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಅವರು ಕೋವಿಡ್‌ ಬಗ್ಗೆ ಮಾಹಿತಿ ನೀಡಿದರು.

ಸದ್ಯ ದಿನಕ್ಕೆ 400–500 ಪ್ರಕರಣಗಳು ಬರುತ್ತಿವೆ. ಫೆಬ್ರುವರಿ ಮೊದಲ ವಾರದಲ್ಲಿ 1,800ರ ವರೆಗೆ ಹೋಗುವ ಸಾಧ್ಯತೆ ಇದೆ. ಎರಡನೇ ವಾರ 3,500 ಹಾಗೂ ಮೂರನೇ ವಾರಕ್ಕೆ 5,500ರಷ್ಟು ಪ್ರಕರಣಗಳು ಬರುವ ಸಂಭವವಿದೆ. ಬಳಿಕ ಇಳಿಕೆಯಾಗಲಿದೆ. ಕೊರೊನಾ ನಿರೋಧಕ ಲಸಿಕೆಯ ಮೊದಲ ಡೋಸ್‌ ಅನ್ನು 18 ವರ್ಷದ ಮೇಲಿನ ಎಲ್ಲರೂ ಹಾಕಿಸಿಕೊಂಡಿದ್ದಾರೆ. ಗುರಿ ಮೀರಿ ಸಾಧನೆಯಾಗಿದೆ. ಎರಡನೇ ಡೋಸ್‌ ಅನ್ನು ಶೇ 87ರಷ್ಟು ಮಂದಿ ಹಾಕಿಸಿಕೊಂಡಿದ್ದಾರೆ. 15ರಿಂದ 18 ವರ್ಷದೊಳಗಿನವರಲ್ಲಿ ಶೇ 97ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗಾಗಿ ಕೊರೊನಾ ಸೋಂಕು ಬಂದರೂ ತೀವ್ರ ತರಹದ ಅಪಾಯ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಕೊರೊನಾ ಮೊದಲ ಅಲೆ ಬಂದಾಗ ಸೋಂಕು ಹೊಸತಾಗಿತ್ತು. ಅದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದವು. ಮೊದಲ ಅಲೆಯಲ್ಲಿ ಮೂಲ ವೈರಸ್‌ನಿಂದ ಸೋಂಕು ಬಂದಿತ್ತು. ಶೀತ, ಜ್ವರ, ಗಂಟಲು ಕೆರೆತ, ಉಸಿರಾಟದ ಸಮಸ್ಯೆ ಹೀಗೆ ಕೆಲವಷ್ಟೇ ಅದರ ಲಕ್ಷಣಗಳಾಗಿದ್ದವು. ಎರಡನೇ ಅಲೆಯು ರೂಪಾಂತರಿ ಸೋಂಕಿನಿಂದ ಬಂದಿತ್ತು. ಆಲ್ಫಾ, ಬೀಟಾ, ಡೆಲ್ಟಾಗಳೆಲ್ಲ ಬಂದವು. ಆಗ ಮೊದಲು ನಿಗದಿ ಪಡಿಸಿದ ಲಕ್ಷಣಗಳಲ್ಲದೇ ವಾಂತಿ, ಹೊಟ್ಟೆನೋವು, ಮೈಕೈ ನೋವು ಹೀಗೆ ಅನೇಕ ಲಕ್ಷಣಗಳು ಸೇರಿಕೊಂಡವು. ಅಲ್ಲದೇ ಉಸಿರಾಟದ ಸಮಸ್ಯೆ ತೀವ್ರಗೊಂಡಿತು. ಕೋವಿಡ್‌ ಪಾಸಿಟಿವ್‌ ಇಲ್ಲದೇ ಇದ್ದರೂ ಅದೇ ರೋಗ ಲಕ್ಷಣಗಳಿಂದ ಬಳಲುವವರನ್ನು ‘ಕೋವಿಡ್‌ ಲೈಕ್‌ ಇಲ್‌ನೆಸ್‌’ ಎಂದು ಗುರುತಿಸಲಾಯಿತು. ಬೇಡಿಕೆ ಜಾಸ್ತಿಯಾಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿತ್ತು. ಇದೀಗ ಮೂರನೇ ಅಲೆ ವೇಗವಾಗಿ ಹಬ್ಬುತ್ತಿದೆಯಾದರೂ ಮೊದಲ ಎರಡು ಅಲೆಗಳಷ್ಟು ತೀವ್ರವಾಗಿ ಬಾಧಿಸುತ್ತಿಲ್ಲ. ಹಾಗಾಗಿ ಸೋಂಕು ಬಂದವರಲ್ಲಿ ಶೇ 95ರಷ್ಟು ಮಂದಿ ಹೋಂ ಐಸೋಲೇಶನ್‌ನಲ್ಲೇ ಇದ್ದಾರೆ. ಕೇವಲ 65 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ 15 ಮಂದಿಗಷ್ಟೇ ಆಮ್ಲಜನಕದ ಅವಶ್ಯಕತೆ ಬಿದ್ದಿದೆ ಎಂದು ವಿವರಿಸಿದರು.

1960ರಿಂದಲೂ ವಿವಿಧ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಲೇ ಇವೆ. ಅದರಲ್ಲಿ ಮೆರ್ಸ್‌, ಸಾರ್ಸ್‌ ಮತ್ತು ಕೋವಿಡ್ ಪ್ರಮುಖವಾದವು. ದೇಶಗಳ ಗಡಿ ದಾಟಿ ಹೋಗುವ ಸೋಂಕನ್ನು ಪ್ಯಾಂಡಮಿಕ್‌ ಎಂದು ಕರೆಯಲಾಗುತ್ತದೆ. ಒಂದೇ ಸ್ಥಳದಲ್ಲಿ ಬಹಳ ಸಮಯ, ಬಹಳ ಮಂದಿಗೆ ಬರುವುದನ್ನು ಎಪಿಡಮಿಕ್‌ ಎಂದು ಕರೆಯಲಾಗುತ್ತದೆ. ನಿಗದಿತ ಸ್ಥಳದಲ್ಲಿ ಕೆಲವು ಮಂದಿಗೆ ಆಗಾಗ ಸೋಂಕು ಕಾಣಿಸಿಕೊಳ್ಳುವುದನ್ನು ಎಂಡಮಿಕ್‌ ಎಂದು ಕರೆಯಲಾಗುತ್ತದೆ. ಪ್ಯಾಂಡಮಿಕ್‌ ಆಗಿರುವ ಕೋವಿಡ್‌ ಅನ್ನು ಮುಂದಿನ ಜೂನ್‌–ಜುಲೈ ಹೊತ್ತಿಗೆ ಎಂಡಮಿಕ್‌ ಹಂತಕ್ಕೆ ಇಳಿಸುವ ಸವಾಲು ಇದೆ ಎಂದರು.

ಸಿಸಿಸಿ ಗುರುತು: ಸದ್ಯ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಬಹಳ ಕಡಿಮೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ 500 ಬೆಡ್‌, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 60–70 ಬೆಡ್‌ಗಳು ಇವೆ. ಇದನ್ನು ಮೀರಿ ಕೊರೊನಾ ಸೋಂಕಿತರು ಆಸ್ಪತ್ರೆಗೆ ಬರಲಿಕ್ಕಿಲ್ಲ. ಒಂದು ವೇಳೆ ಬಂದರೂ ಎದುರಿಸುವುದಕ್ಕಾಗಿ 25 ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಗುರುತಿಸಲಾಗಿದೆ. ಅಗತ್ಯ ಬಂದಾಗ ಬಳಸಿಕೊಳ್ಳಲಾಗುವುದು. ಸದ್ಯ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ಇರುವ ಎಎನ್‌ಎಂ ತರಬೇತಿ ಕೇಂದ್ರದಲ್ಲೇ ಕೇರ್‌ ಸೆಂಟರ್ ತಯಾರು ಮಾಡಿಟ್ಟುಕೊಳ್ಳಲಾಗಿದೆ. ಸ್ಟೆಪ್‌ಡೌನ್‌ ಆಸ್ಪತ್ರೆಯಾಗಿ ಇಎಸ್‌ಐ ಆಸ್ಪತ್ರೆಯನ್ನು ಬಳಸಿಕೊಳ್ಳಲಾಗುವುದು. ಸ್ಟೆಪ್‌ಡೌನ್‌ ಅಂದರೆ ಕೊರೊನಾ ತೀವ್ರತರಹ ಲಕ್ಷಣಗಳಿದ್ದಾಗ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಸ್ವಲ್ಪ ಗುಣಮುಖರಾದ ಮೇಲೆ ಅವರನ್ನು ಇಎಸ್‌ಐ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ವಿವರಿಸಿದರು.

ಬೆಡ್‌ಗಳ ಕೊರತೆ ಉಂಟಾದರೆ ಎಬಿಕೆಆರ್‌ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೂ ಶಿಫಾರಸು ಮಾಡಲಾಗುವುದು. ಸದ್ಯ ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳಿವೆ. ಹಾಗಾಗಿ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ ಎಂದರು.

ಕೊರೊನಾ ಇದ್ದರಷ್ಟೇ ಪತ್ತೆ
ಮಾಮೂಲಿ ಶೀತಜ್ವರ ಇದ್ದರೂ ಕೊರೊನಾ ಪತ್ತೆಯಾಗುತ್ತದೆ ಎಂಬುದು ಸರಿಯಲ್ಲ. ಕೊರೊನಾ ಟೆಸ್ಟ್‌ ಮಾಡುವಾಗ ವೈರಸ್‌ ಅನ್ನು ನೇರವಾಗಿ ನೋಡುವುದಿಲ್ಲ. ವೈರಸ್‌ನ ಡಿಎನ್‌ಎಯನ್ನು ನೋಡಲಾಗುತ್ತದೆ. ಬ್ಯಾಕ್ಟೀರಿಯಾದಿಂದ ಬರುವ ರೋಗವಾದರೆ, ಪರೀಕ್ಷೆ ಮಾಡುವಾಗ ನೇರವಾಗಿ ಬ್ಯಾಕ್ಟೀರಿಯಾವನ್ನು ನೋಡಲಾಗುತ್ತದೆ. ವೈರಸ್‌ನಲ್ಲಿ ಹಾಗಲ್ಲ ಎಂದು ಡಾ. ನಾಗರಾಜ್‌ ಮತ್ತು ಡಾ. ರಾಘವನ್‌ ಸ್ಪಷ್ಟಪಡಿಸಿದರು.

ಕೊರೊನಾ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳದೆ ಅರ್ಧ ಮಾಹಿತಿ ಇರುವವರೇ ಈ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಅನಗತ್ಯ ಅಲಕ್ಷ್ಯ, ಹೆದರಿಕೆ ಬೇಡ
ಕೊರೊನಾ ಲಕ್ಷಣ ಸಣ್ಣದಾಗಿ ಕಾಣಿಸಿಕೊಂಡರೂ ಕೆಲವರು ಹೆದರಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗುತ್ತಾರೆ. ‘ನೀವು ಹುಷಾರಾಗಿದ್ದೀರಿ, ಮನೆಗೆ ಹೋಗಿ’ ಅಂದರೂ ‘ಇನ್ನೂ ಸ್ವಲ್ಪ ದಿನ ಇರುತ್ತೇವೆ’ ಎನ್ನುತ್ತಾರೆ. ಎರಡನೇ ಅಲೆಯಲ್ಲಿ ಇಂಥವರ ಸಂಖ್ಯೆ ಜಾಸ್ತಿ ಇತ್ತು. ದುಡ್ಡಿದ್ದವರು ಅಗತ್ಯ ಇಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಬೆಡ್‌ ಅಗತ್ಯ ಇರುವವರಿಗೆ ಸ್ವಲ್ಪ ಸಮಯ ಸಮಸ್ಯೆಯಾಯಿತು. ಇದು ಮಾಮೂಲು ಶೀತ, ಜ್ವರ ಎಂದು ಅಲಕ್ಷಿಸುವ ಎರಡನೇ ವರ್ಗವೂ ಇದೆ. ಯಾವುದೇ ಲಕ್ಷಣ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಿ. ಕೊರೊನಾ ಬಂದಿದ್ದರೆ ಅದಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು ಒಂದು ವಾರದಲ್ಲಿ ಗುಣಮುಖರಾಗುತ್ತೀರಿ. ನಿರ್ಲಕ್ಷ್ಯ ಮಾಡಿ ಶ್ವಾಸಕೋಶಕ್ಕೆ ತೊಂದರೆ ತಂದುಕೊಳ್ಳಬೇಡಿ. ಕೊರೊನಾ ಅಲ್ಲದೇ ಹೋದರೂ ಎಚ್‌1ಎನ್‌1 ನಂಥ ಗಂಭೀರ ಕಾಯಿಲೆಯೂ ಇರಬಹುದು. ಎಲ್ಲವೂ ಪರೀಕ್ಷೆ ಮಾಡಿದಾಗ ಗೊತ್ತಾಗುತ್ತದೆ. ಹಾಗಾಗಿ ಅತಿ ಹೆದರಿಕೆಯೂ ಬೇಡ. ನಿರ್ಲಕ್ಷ್ಯವೂ ಬೇಡ. ರೋಗ ಲಕ್ಷಣ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳುವಷ್ಟು ಕಾಳಜಿ ಇರಬೇಕು ಎಂದು ಡಾ. ನಾಗರಾಜ ಹಾಗೂ ಡಾ.ರಾಘವನ್‌ ಸಲಹೆ ನೀಡಿದರು.

ಹೋಂ ಐಸೊಲೇಶನ್‌ಗೆ ಕಿಟ್‌
ಕೊರೊನಾ ಪಾಸಿಟಿವ್‌ ಬಂದಿದ್ದರೂ ರೋಗ ಲಕ್ಷಣ ಇಲ್ಲದೇ ಹೋಂ ಐಸೊಲೇಶನ್‌ನಲ್ಲಿ ಇರುವವರಿಗೆ ಆರೋಗ್ಯ ಇಲಾಖೆಯ ಬೆಂಗಳೂರು ಆಯುಕ್ತ ಕಚೇರಿಯ ಆದೇಶದಂತೆ ಆರೋಗ್ಯ ಕಿಟ್‌ ವಿತರಿಸಲಾಗುವುದು. ಆರು ಬಗೆಯ ಔಷಧಗಳು, ಸ್ಯಾನಿಟೈಸರ್‌, ಮೂರು ಲೇಯರ್‌ನ ಮಾಸ್ಕ್‌ ಪ್ಯಾಕೆಟ್‌ ಅದರಲ್ಲಿ ಇರಲಿದೆ ಎಂದು ವೈದ್ಯರು ವಿವರಿಸಿದರು.

ಶಾಲೆಗಳಲ್ಲಿ ನಿಗಾ ವಹಿಸಲಿ
‘ಬಹುತೇಕ ಶಾಲೆಗಳಲ್ಲಿ ಕೇವಲ ದೇಹದ ಉಷ್ಣತೆಯನ್ನಷ್ಟೇ ಪರೀಕ್ಷಿಸಿ ವಿದ್ಯಾರ್ಥಿಗಳನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದಾರೆ. ಉಳಿದ ರೋಗ ಲಕ್ಷಣವುಳ್ಳ ಮಕ್ಕಳೂ ಬರುತ್ತಿರುವುದರಿಂದ ವಿದ್ಯಾರ್ಥಿಗಳಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಹೇಳಿದರು.

‘ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರು ಅಥವಾ ಇನ್ಯಾವುದೋ ಒಬ್ಬ ಶಿಕ್ಷಕರನ್ನು ಕೋವಿಡ್‌ ರೋಗ ರಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪತ್ತೆ ಮಾಡುವ ಸಲುವಾಗಿ ನಿಯೋಜಿಸಬೇಕು. ಕೆಮ್ಮು, ನೆಗಡಿಯಂತಹ ರೋಗಲಕ್ಷಣ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಮನೆಯಲ್ಲೇ ಉಳಿಯುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸದೇ ಇದ್ದರೆ ಶಾಲೆಗಳಲ್ಲಿ ಕೋವಿಡ್‌ ಪ್ರಕರಣಗಳು ಇನ್ನಷ್ಟು ಹೆಚ್ಚಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ರೋಗಲಕ್ಷಣವಿದ್ದರೆ ಕೋವಿಡ್‌ ಪರೀಕ್ಷಿಸಿಕೊಳ್ಳಿ
ಕೋವಿಡ್‌ 3ನೇ ಅಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ. ಹೀಗಾಗಿ ಯಾರಲ್ಲಿ ಕೋವಿಡ್‌ ರೋಗ ಲಕ್ಷಣಗಳು ಕಂಡುಬರುತ್ತಿವೆಯೋ ಅಂಥವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜೊತೆಗೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರೂ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ರೋಗಕ್ಕೆ ನಿರ್ದಿಷ್ಟವಾಗಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಡಿಎಚ್‌ಒ ಡಾ. ನಾಗರಾಜ ಹೇಳಿದರು.

‘ಮಾರ್ಚ್‌ನಲ್ಲಿ 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ?’
ದಾವಣಗೆರೆ: 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮಾರ್ಚ್‌ ತಿಂಗಳಲ್ಲಿ ಲಸಿಕೆ ನೀಡುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಅದಕ್ಕಾಗಿ ತಾಂತ್ರಿಕ ಸಮಿತಿ ಕೆಲಸ ಮಾಡುತ್ತಿದೆ.

ಸೋಮವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್’ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅವರು ಕೋವಿಡ್ ಕುರಿತು ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಈ ಮಾಹಿತಿ ನೀಡಿದರು. ಕೋವಿಡ್ ಕುರಿತ ಹಲವು ಅನುಮಾನಗಳನ್ನು ಅವರು ನಿವಾರಿಸಿದರು.

ತಾಂತ್ರಿಕ ಸಮಿತಿಯು ಲಸಿಕೆಯ ಬಗ್ಗೆ ಪರೀಕ್ಷೆ ನಡೆಸಿದ ಬಳಿಕ ಅದು ಯಶಸ್ವಿಯಾದರೆ ಅನುಮೋದನೆ ಸಿಗುತ್ತದೆ. ಆ ಬಳಿಕ ಹಂತಹಂತವಾಗಿ ಲಸಿಕೆಯನ್ನು ನೀಡಲಾಗುತ್ತದೆ. ಕೆಲವೊಂದು ಕಡೆ ಅಧ್ಯಯನ ನಡೆಯುತ್ತಿದೆ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು