ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇರೆ ಮುಕ್ತ ರಾಜ್ಯದ ಕನಸು: ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ

Last Updated 17 ಮಾರ್ಚ್ 2021, 4:52 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಮೂಲ ಸೌಕರ್ಯಗಳಿಲ್ಲದ, ಯಾವುದೇ ಸ್ಥಾನಮಾನ ಪಡೆಯದ ಸಮುದಾಯಗಳಾಗಿರುವ ಅಲೆಮಾರಿ, ಅರೆ ಅಲೆಮಾರಿಗಳು ಇಂದಿಗೂ ಡೇರೆ ಹಾಕಿಕೊಂಡು ಬದುಕುತ್ತಿದ್ದಾರೆ. ಅವರೆಲ್ಲರಿಗೂ ಸೂರು ಕಲ್ಪಿಸುವ ಮೂಲಕ ರಾಜ್ಯವನ್ನು ಡೇರೆ ಮುಕ್ತ ಮಾಡುವ ಕನಸು ಇದೆ ಎಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅಲೆಮಾರಿಗಳ ಅಭಿವೃದ್ಧಿಗಾಗಿ ಇದೇ ಮೊದಲ ಬಾರಿಗೆ ನಿಗಮ ಸ್ಥಾಪಿಸಲಾಗಿದೆ. ಅದರ ಪ್ರಥಮ ಅಧ್ಯಕ್ಷನಾಗಿದ್ದೇನೆ. ಈಗ ಈ ನಿಗಮಕ್ಕೆ ₹ 10 ಕೋಟಿ ಮಾತ್ರ ಅನುದಾನವಿದೆ. ಕನಿಷ್ಠ ₹ 250 ಕೋಟಿ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಲಿದ್ದೇನೆ’ ಎಂದು ತಿಳಿಸಿದರು.

ಗೊಲ್ಲ, ಹೆಳವ, ದೊಂಬಿದಾಸ, ಚೆನ್ನದಾಸ, ಬಯಲು ಪತ್ತಾರ, ಜೋಶಿ, ಬುಡುಬುಡಿಕೆ, ಪಿಚ್ಚಗುಂಟ್ಲ, ಗೋಂದಳಿ, ಬೈರಾಗಿ, ಗಾರುಡಿ ಹೀಗೆ 46 ಸಮುದಾಯಗಳು ಅಲೆಮಾರಿ, ಅಲೆಮಾರಿಗಳಾಗಿವೆ. ರಾಜ್ಯದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಇದೆ. ಶೇ 95ರಷ್ಟು ಮಂದಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆ ಹಾಗೂ ಸರ್ಕಾರದ ನೆರವಿನೊಂದಿಗೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯ ಇದೆ. ಈ ಸಮುದಾಯದ ಜನರಿಗೆ ಸರ್ಕಾರದ ಯೋಜನೆಗಳ ಕುರಿತು ಮಾರ್ಗದರ್ಶನ ನೀಡಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ಜನಪ್ರತಿನಿಧಿಗಳ ಜತೆಗೆ ಅಧಿಕಾರಿಗಳು ಕೂಡ ಈ ಸೌಲಭ್ಯ ವಂಚಿತ ಸಮುದಾಯಗಳ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ನಿಗಮದ ನಿರ್ದೇಶಕ ಕೆ.ಎಚ್.ಲಕ್ಷ್ಮಣ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್‌.ಆರ್‌. ಗಂಗಪ್ಪ, ದೇವರಾಜ ಅರಸು ನಿಗಮದ ವ್ಯವಸ್ಥಾಪಕ ಗುಣ್ಣಯ್ಯ, ದೊಂಬಿದಾಸ ಸಮುದಾಯದ ರಾಜ್ಯಾಧ್ಯಕ್ಷ ಆರ್‌.ರಂಗಪ್ಪ ತಾಲ್ಲೂಕು ಅಧ್ಯಕ್ಷ ಆರ್‌. ಶಿವರಾಜ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT