ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ ಮಹಿಳೆಯರ ಶೋಷಣೆ ಹೆಚ್ಚು

ದಸಂಸ ಕಾರ್ಯಕರ್ತರ ಸಮಾವೇಶದಲ್ಲಿ ಶಿಕ್ಷಕಿ ಎಸ್.ಸಿ. ಪುಷ್ಪಾಂಜಲಿ ಹೇಳಿಕೆ
Last Updated 20 ಮಾರ್ಚ್ 2022, 5:51 IST
ಅಕ್ಷರ ಗಾತ್ರ

ದಾವಣಗೆರೆ: ಅಭಿವೃದ್ಧಿ ಮಾನದಂಡದಲ್ಲಿ ಮಹಿಳೆಯರ ಅಭಿವೃದ್ಧಿಯ ಜೊತೆಗೆ ಪರಿಶಿಷ್ಟ ಜಾತಿ ಮಹಿಳೆಯರ ಅಭಿವೃದ್ಧಿಯನ್ನೂ ಅಳತೆಗೋಲಾಗಿ ತೆಗೆದುಕೊಳ್ಳಬೇಕು. ಮಹಿಳೆಯರು ಶಿಕ್ಷಿತರಾಗುವುದರ ಜೊತೆಗೆ ಸಂಘಟಿತರಾಗುವುದು ಮುಖ್ಯ ಎಂದು ದಾವಣಗೆರೆಯ ಶಿಕ್ಷಕಿ ಎಸ್.ಸಿ. ಪುಷ್ಪಾಂಜಲಿ ಹೇಳಿದರು.

ಇಲ್ಲಿನ ಪಾರ್ವತಮ್ಮ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ದಸಂಸ ಕಾರ್ಯಕರ್ತರ ಸಮಾವೇಶದಲ್ಲಿ ‘ದಲಿತ ಮಹಿಳೆಯರ ಸಂಕಟಗಳು ಮತ್ತು ಸಂವೇದನೆ’ ಕುರಿತು ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಮಹಿಳೆಯರ ಬದುಕಿನಲ್ಲಿ ನೋವು, ದುಃಖಗಳೇ ತುಂಬಿಹೋಗಿವೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಕಟ್ಟಕಡೆಯ ಸ್ಥಾನ ದಲಿತ ಮಹಿಳೆಯರಿಗೆ ಇದ್ದು, ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರಕ್ಕೆ ಒಳಗಾಗುವವರು, ಕೊಲೆಯಾಗುವವರು, ಬಹಿಷ್ಕಾರಕ್ಕೆ ಒಳಗಾಗುವರು, ಅಪಮಾನಕ್ಕೆ ಒಳಗಾಗುವವರೇ ಪರಿಶಿಷ್ಟ ಜಾತಿ ಮಹಿಳೆಯರು ಎಂದರು.

‘ಪರಿಶಿಷ್ಟ ಜಾತಿ ಮಹಿಳೆಯರು ಮನೆಯವರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದು, ಮೇಲ್ವರ್ಗದ ಪುರುಷರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ನೀರು ತರಲು ಹೋದಾಗ, ಕೂಲಿಯನ್ನು ಕೇಳಲು ಹೋದಾಗ, ಸರ್ಕಾರದ ಸೌಲಭ್ಯಗಳನ್ನು ಕೇಳಲು ಹೋದಾಗ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗಿದ್ದಾರೆ’ ಎಂದು ಹೇಳಿದರು.

‘ಸಮೀಕ್ಷೆಯೊಂದರ ಪ್ರಕಾರ ಪ್ರತಿ ದಿನ 10 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ಅತ್ಯಾಚಾರ ಪ್ರಕರಣ ಶೇ 56ರಷ್ಟು ಹೆಚ್ಚಾಗಿದ್ದು, 2018–21ರವರೆಗೆ 81 ಪ್ರಕರಣ ಅಧ್ಯಯನ ಮಾಡಿದಾಗ 56 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಿದ್ದು, ಒಂದು ಪ್ರಕರಣಕ್ಕೆ ಮಾತ್ರ ಶಿಕ್ಷೆಯಾಗಿದೆ’ ಎಂದು ವಿವರಿಸಿದರು.

‘ರಾಜಕೀಯವಾಗಿ ಸಂಸತ್ತಿನಲ್ಲಿ 12 ಮಂದಿ ದಲಿತ ಮಹಿಳೆಯರು ಇದ್ದಾರೆ. ಆದರೆ ರಾಜ್ಯಸಭೆಯಲ್ಲಿ ಒಬ್ಬರೂ ಇಲ್ಲ. ವಿಧಾನಸಭೆಯಲ್ಲಿ ಇಬ್ಬರು ಇದ್ದರೆ, ವಿಧಾನಪರಿಷತ್‌ನಲ್ಲಿ ಒಬ್ಬರೂ ಇಲ್ಲ. ಆರ್ಥಿಕವಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ದುಡಿಯುವವರು ಪರಿಶಿಷ್ಟ ಜಾತಿ ಮಹಿಳೆಯರು. ಆದರೆ ಅವರು ಸಂಪಾದಿಸಿರುವ ಆಸ್ತಿ ಶೂನ್ಯ’ ಮಹಿಳೆಯರು ಇದನ್ನು ಸಹಿಸಿಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ಮೇಲ್ವರ್ಗದ ಮಹಿಳೆಯರ ಮೇಲೆ ಅತ್ಯಾಚಾರವಾದರೆ ಭಾರತ್ ಬಂದ್ ಮಾಡುತ್ತಾರೆ. ಆದರೆ ಹತ್ರಾಸ್‌ನಲ್ಲಿ ಪರಿಶಿಷ್ಟ ಜಾತಿ ಮಹಿಳೆಯ ಮೇಲೆ ಅತ್ಯಾಚಾರವಾದರೆ ಸತ್ಯ ಹೇಳದಂತೆ ನಾಲಿಗೆ ಕತ್ತರಿಸುತ್ತಾರೆ’ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಡಾ. ಸಮತಾ ಬಿ.ದೇಶಮಾನೆ, ‘ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು. ಪುಷ್ಪ ಪ್ರತಿಕ್ರಿಯೆ ನೀಡಿದರು.

‘ದಲಿತರು ಮತ್ತು ಭಾರತ ಸಂವಿಧಾನ ವರ್ತಮಾನದ ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತು ಪ್ರೊ.ಬಿ.ಎಲ್‌. ರಾಜು ವಿಷಯ ಮಂಡಿಸಿದರು. ದಾದಾಪೀರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಅಂಜಿನಪ್ಪ ಪ್ರತಿಕ್ರಿಯೆ ನೀಡಿದರು.

‘ದಲಿತರು ಮತ್ತು ಸಾಂಸ್ಕೃತಿಕ ರಾಜಕಾರಣ ದಾರಿ ಮತ್ತು ಗುರಿ’ ಕುರಿತು ಡಾ.ಸಿ.ಜಿ.ಲಕ್ಷ್ಮೀಪತಿ ವಿಷಯ ಮಂಡಿಸಿದರು. ಪ್ರೊ.ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಗುರುಪ್ರಸಾದ್ ಕಂಟಲಗೆರೆ ಪ್ರತಿಕ್ರಿಯೆ ನೀಡಿದರು.

ಪಿ.ಜೆ.ಮಹಾಂತೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT