ಮಂಗಳವಾರ, ನವೆಂಬರ್ 29, 2022
29 °C

ರೈತರು ಹೂಳು ತೆಗೆದಿದ್ದ ಗೊಲ್ಲರಹಳ್ಳಿ ಕೆರೆ ಭರ್ತಿ

ಕೆ.ಎಸ್.ವೀರೇಶ್ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ರೈತರೇ ಹೂಳು ತೆಗೆದು ಕಾಯಕಲ್ಪ ನೀಡಿದ್ದ ಹೋಬಳಿಯ ಗೊಲ್ಲರಹಳ್ಳಿ (ಚಿಕ್ಕಬೆನ್ನೂರು) ಕೆರೆ ಕೋಡಿ ಬಿದ್ದಿದ್ದು, ದಶಕದ ನಂತರ ಕೆರೆ ತುಂಬಿರುವುದು ಈ ಭಾಗದ ರೈತರಿಗೆ ಸಂತಸ ನೀಡಿದೆ.

‘ಮೂರು ವರ್ಷ ಉತ್ತಮವಾಗಿ ಮಳೆ ಬಿದ್ದರೂ ಕೆರೆ ತುಂಬಿರಲಿಲ್ಲ. ಕೆರೆಗೆ ಹರಿವ ನೀರು ಕವಲೊಡೆದು ಬೇರೆಡೆ ಸಾಗುತ್ತಿತ್ತು. ರಾಜ ಕಾಲುವೆ ಮಾರ್ಗ ಗುರುತಿಸಿ ರೈತರು ಜೆಸಿಬಿಯಿಂದ ನೀರು ಬರುವ ಮಾರ್ಗ ಸುಗಮಗೊಳಿಸಿದರು. ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ನೀರು ಸರಾಗವಾಗಿ ಹರಿದುಬಂದು ಕೆರೆ ತುಂಬಿ ತುಳುಕುತ್ತಿದೆ.

‘ಕೆರೆಯಲ್ಲಿ ಹೂಳು ತುಂಬಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಗ್ಗಿತ್ತು. ಕೆರೆ ಸಂಜೀವಿನ ಯೋಜನೆ ಅಡಿಯಲ್ಲಿ ಹೂಳು ತೆಗೆಯಲಾಗಿತ್ತು. ಕಳೆದ ಬೇಸಿಗೆಯಲ್ಲಿ ಸುತ್ತಮುತ್ತಲ ಗ್ರಾಮದ ರೈತರು ನೂರಾರು ಟ್ರ್ಯಾಕ್ಟರ್‌ನಲ್ಲಿ ಕೆರೆಯ ಮಣ್ಣನ್ನು ಹೊಲ, ತೋಟಗಳಿಗೆ ಸಾಗಿಸಿದರು. ನಿತ್ಯ ಜೆಸಿಬಿ ಯಂತ್ರಗಳಿಂದ ಮಣ್ಣು ಅಗೆಯುವ ಕೆಲಸ ನಡೆಯಿತು. ವ್ಯವಸ್ಥಿತವಾಗಿ ಹೂಳು ಎತ್ತಿದ ಪರಿಣಾಮ ಕೆರೆಯ ಆಳ, ಅಗಲ ವಿಸ್ತಾರವಾಯಿತು’ ಎನ್ನುತ್ತಾರೆ ಗೊಲ್ಲರಹಳ್ಳಿ ರುದ್ರಪ್ಪ, ಬಸವರಾಜ್.

‘ಚಿಕ್ಕಬೆನ್ನೂರು ಹಾಗೂ ಕಾಕನೂರು ರಸ್ತೆ ಮೇಲ್ಭಾಗದಿಂದ ಮಳೆ ನೀರಿನ ಕಾಲುವೆ ತೆಗೆಯಲು ರೈತರು ಸ್ವಂತ ಖರ್ಚಿನಲ್ಲಿ ಪ್ರಯತ್ನ ನಡೆಸಿದರು. ಮಳೆ ಬಂದಾಗ ನೀರಿನ ಹರಿವಿನ ದಿಕ್ಕನ್ನು ಗುರುತಿಸಿ ಕೆರೆಗೆ ಹರಿಯುವಂತೆ ಮಾಡಿದ ಪರಿಣಾಮ ಕೆರೆ ಈ ಭಾರಿ ಕೋಡಿ ಬೀಳುವಷ್ಟು ನೀರು ಹರಿದಿದೆ’ ಎನ್ನುತ್ತಾರೆ ಲೋಕೇಶ್.

‘ಕೆರೆಯಲ್ಲಿ ಸುಮಾರು 10 ರಿಂದ 12 ಅಡಿ ಆಳದಲ್ಲಿ ನೀರು ಸಂಗ್ರಹವಾಗಿದೆ. ಸುತ್ತಮುತ್ತಲ ಜಮೀನುಗಳಲ್ಲಿ ಬೇಸಿಗೆಯಲ್ಲಿ ಅಂತರ್ಜಲ ಹೆಚ್ಚಲು ಪ್ರಯತ್ನ ನಡೆಸಿದೆವು. ಕೆರೆ ತುಂಬಿದ್ದರಿಂದ ರೈತರಿಗೆ ನಿರಾತಂಕ ಮೂಡಿದೆ’ ಎನ್ನುತ್ತಾರೆ ರೈತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು