ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಭಾಷೆಯೇ ನೆಲದ ಸಾರ್ವಭೌಮ ಭಾಷೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಸರಳ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ
Last Updated 1 ನವೆಂಬರ್ 2020, 14:01 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯಭಾಷೆಯೇ ಈ ನೆಲದ ಸಾರ್ವಭೌಮ ಭಾಷೆಯೇ ಹೊರತು ಬೇರೆ ಭಾಷೆ ಅಲ್ಲ. ಇದನ್ನು ಸಂವಿಧಾನ ಅಂಗೀಕರಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸರಳವಾಗಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ, ಗೌರವವಂದನೆ ಸ್ವೀಕರಿಸಿ, ಧ್ವಜಾರೋಹಣ ಮಾಡಿ ಅವರು ಸಂದೇಶ ನೀಡಿದರು.

‘ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ, ಒಕ್ಕೂಟದ ಭಾವೈಕ್ಯವನ್ನು ಬಲಗೊಳಿಸುವ ಮಾದರಿಯಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಇದಕ್ಕೆ ಅನುಗುಣವಾಗಿಯೇ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದೆ. ಜಗತ್ತಿನ ಜ್ಞಾನ, ವಿಜ್ಞಾನಗಳನ್ನು ಅರಗಿಸಿಕೊಳ್ಳಲು ಆಂಗ್ಲಭಾಷೆ ಒಂದು ಬೆಳಕಿನ ಕಿಂಡಿಯಿದ್ದಂತೆ. ಆದರೆ ಆಂಗ್ಲಭಾಷೆ ಎಲ್ಲಿ ಅವಶ್ಯಕತವೋ ಅಲ್ಲಿ ಮಾತ್ರ ಬಳಸೋಣ. ಅದಕ್ಕೆ ಒಂದು ಪರಿಮಿತಿ ಹಾಕೋಣ’ ಎಂದು ಸಲಹೆ ನೀಡಿದರು.

ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರೆ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಸರಿಯಲ್ಲ. ವಿಶಾಲ ಬಾಹುಳ್ಯ ಇರುವ ಭಾರತದಂಥ ದೇಶದಲ್ಲಿ ರಾಜ್ಯಕ್ಕೊಂದು, ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂವುಗಳ ತೋಟ ಇದು. ಕನ್ನಡದಲ್ಲೇ ಬೆಂಗಳೂರಿನ ಇಂಗ್ಲಿಷ್‌ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡು ಕನ್ನಡ, ದಕ್ಷಿಣ ಕನ್ನಡದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದರಾಬಾದ್‌ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ ಹೀಗೆ ಹತ್ತು ಹಲವು ಇವೆ ಎಂದು ತಿಳಿಸಿದರು.

ಮುಂಬರುವ ಚಳಿಗಾಲದ ದಿನಗಳಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಯಾರೂ ಮೈರೆಯಬಾರದು. ಹೆಚ್ಚು ಜಾಗರೂಕತೆ ವಹಿಸಬೇಕು. ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಬೇಕು. ಮಾಸ್ಕ್‌ ಧರಿಸಲು, ಪದೇ ಪದೇ ಕೈತೊಳೆಯಲು ಮರೆಯಬಾರದು ಎಂದು ಎಚ್ಚರಿಸಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ನಗರಾಭಿವೃದ್ಧಿ ಯೋಜನಾಧಿಕಾರಿ ನಜ್ಮಾ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರೂ ಇದ್ದರು.

ಆರ್‌ಪಿಐ ಎಸ್‌.ಎನ್‌. ಕಿರಣ್‌ಕುಮಾರ್‌ ನೇತೃತ್ವದಲ್ಲಿ ಕವಾಯತು, ಎಆರ್‌ಎಸ್‌ಐ ಹೊನ್ನೂರಪ್ಪ ನೇತೃತ್ವದಲ್ಲಿ ಪೊಲೀಸ್‌ ಬ್ಯಾಂಡ್‌ ವಾದನ ನಡೆಯಿತು. ಗ್ರಾಮಾಂತರ ಪೊಲೀಸ್‌ ಠಾಣೆಯ ಶೈಲಜಾ ಕೆ.ಸಿ. ಮತ್ತು ಸಿಇಎನ್‌ ಪೊಲೀಸ್‌ ಠಾಣೆಯ ದೇವರಾಜ್‌ ಸಂಗೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಕೊರೊನಾ ಕಾರಣದಿಂದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಇದೆ ಎಂದು ಡೋಲು, ಡ್ರಮ್‌ಗಳನ್ನು ಹಿಡಿದುಕೊಂಡು ಬಂದಿದ್ದವರು ನುಡಿಸಿ ಸಂಭ್ರಮಿಸಿದರು.

ಜನಪ್ರತಿನಿಧಿಗಳು ನಾಪತ್ತೆ !
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌.ಎ. ರವೀಂದ್ರನಾಥ್‌ ಒಬ್ಬರೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರಿಂದ ಹಿಡಿದು ಸ್ಥಳೀಯ ಮೇಯರ್‌ವರೆಗೆ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದುದು ಎದ್ದುಕಂಡಿತು.

ಅನಾರೋಗ್ಯದ ಕಾರಣದಿಂದ ಸಚಿವರು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಭಾಷಣದಲ್ಲಿ ತಿಳಿಸಿದ್ದರು. ಅವರನ್ನು ಹೊರತುಪಡಿಸಿಯೂ ಸಂಸದರು, ಉಳಿದ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಧೂಡಾ ಅಧ್ಯಕ್ಷರು ಸೇರಿ 21 ಮಂದಿ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT