ಬುಧವಾರ, ಅಕ್ಟೋಬರ್ 21, 2020
22 °C
ಪೊಲೀಸರಿಂದ ಹಲ್ಲೆಯಿಂದ ಸಾವು: ಕುಟುಂಬಸ್ಥರ ಆರೋಪ‍

ಠಾಣೆಗೆ ಕರೆತಂದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೌಟುಂಬಿಕ ಕಲಹದ ಕಾರಣದಿಂದ ಪತ್ನಿಯ ದೂರು ನೀಡಿದ್ದರಿಂದ ವಿಚಾರಣೆಗಾಗಿ ಠಾಣೆಗೆ ಕರೆತಂದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

ಮಾಯಕೊಂಡ ಸಮೀಪದ ವಿಠ್ಠಲಾಪುರ ಗ್ರಾಮದ ಮರುಳಸಿದ್ದಪ್ಪ (46) ಮೃತಪಟ್ಟವರು. ಇವರ ಶವ ಠಾಣೆಗೆ 100 ಮೀಟರ್ ದೂರದಲ್ಲಿ ರೈಲ್ವೆ ಗೇಟಿನ ಬಳಿ ಇರುವ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಮರುಳಸಿದ್ದಪ್ಪ ಅವರಿಗೆ ಮದುವೆಯಾಗಿದ್ದು, ಇಬ್ಬರು ಪುತ್ರಿಯರು ಇದ್ದಾರೆ. ಬೇರೆ ಯುವತಿಯೊಂದಿಗೆ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ಪತ್ನಿ ವೃಂದಮ್ಮ ಮಾಯಕೊಂಡ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಮಾಯಕೊಂಡ ಠಾಣೆಯ ಪೊಲೀಸರು ಸಮೀಪದ ಹುಚ್ಚವ್ವನಹಳ್ಳಿಯಲ್ಲಿ ಇದ್ದ ಈತನನ್ನು ಸೋಮವಾರ ಕರೆತಂದು ಠಾಣೆಯಲ್ಲಿ ಇರಿಸಿದ್ದರು.

ಠಾಣೆಯಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪೊಲೀಸರು ರಾತ್ರಿ ವೇಳೆ ಕರೆ ಮಾಡಿ ಮರುಳಸಿದ್ದಪ್ಪ ಅವರ ಕುಟುಂಬದವರಿಗೆ ಹೇಳಿದ್ದರು. ಆದರೆ ಕುಟುಂಬದವರು ಬೆಳಿಗ್ಗೆ ಬರುವುದಾಗಿ ಹೇಳಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಮರುಳಸಿದ್ದಪ್ಪ ಅವರ ಶವ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ.

‘ರಾತ್ರಿ ವೇಳೆ ಠಾಣೆಯಲ್ಲೇ ಇದ್ದು, ಎದೆನೋವು ಕಾಣಿಸಿಕೊಂಡಿತು ಎಂದಿದ್ದರು. ಹೀಗಾಗಿ ಹೊರಗೆ ಬಿಟ್ಟೆವು. ಹೃದಯಾಘಾತದಿಂದ ಸತ್ತಿದ್ದಾರೆ‘ ಎಂಬುದು ಪೊಲೀಸರ ಹೇಳಿಕೆ.

‘ರಾತ್ರಿ ವೇಳೆ ನಮ್ಮ ಅಣ್ಣ ಊಟ ಮಾಡಿ ಚೆನ್ನಾಗಿಯೇ ಇದ್ದ. ಪೊಲೀಸರೇ ನನ್ನ ಅಣ್ಣನನ್ನು ಹೊಡೆದು ಹಾಕಿ ಶವವನ್ನು ಎಸೆದು ಹೋಗಿದ್ದಾರೆ‘ ಎಂದು ಮೃತನ ಸಹೋದರ ರುದ್ರೇಶಿ ಆರೋಪಿಸಿದ್ದಾರೆ.

ಮೂವರ ಅಮಾನತು

ಘಟನೆಗೆ ಸಂಬಂಧಿಸಿದಂತೆ ಮಾಯಕೊಂಡ ಠಾಣೆಯ ಪಿಎಸ್‌ಐ ಪ್ರಕಾಶ್, ಹೆಡ್‌ ಕಾನ್‌ಸ್ಟೆಬಲ್‌ ನಾಗರಾಜ್ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಶೇರ್ ಅಲಿ ಅವರನ್ನು ಅಮಾನತುಗೊಳಿಸಲಾಗಿದೆ.

‘ಪೊಲೀಸ್‌ ಕಸ್ಟಡಿಯಲ್ಲೇ ಸಾವು ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಮೂವರನ್ನು ಅಮಾನತು ಮಾಡಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

 
ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡಿಸುತ್ತೇವೆ. ಸಿಐಡಿ ತನಿಖೆ ನಡೆಸಲಾಗುವುದು.

– ಎಸ್‌.ರವಿ, ಐಜಿಪಿ, ಪೂರ್ವವಲಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.