ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಚಿಂತಕರ ಪ್ರಮಾಣ ಕಡಿಮೆಯಾಗುತ್ತಿದೆ: ಸುಧೀಂದ್ರ ಕುಲಕರ್ಣಿ

ಮೇ ಸಾಹಿತ್ಯ ಮೇಳ
Last Updated 29 ಮೇ 2022, 4:24 IST
ಅಕ್ಷರ ಗಾತ್ರ

ದಾವಣಗೆರೆ: ಎಡಸಿದ್ಧಾಂತದ, ಪ್ರಗತಿಪರ ಸಿದ್ಧಾಂತರ ಜನರ ಪ್ರಮಾಣ ಕಡಿಮೆಯಾಗಿದೆ. ಬಲ ಸಿದ್ಧಾಂತ ಬಹಳ ಪ್ರಬಲಗೊಂಡಿದೆ ಎಂದು ಅಂಕಣಕಾರ ಸುಧೀಂದ್ರ ಕುಲಕರ್ಣಿ ಹೇಳಿದರು.

ಇಲ್ಲಿನ ತಾಜ್‌ ಪ್ಯಾಲೇಸ್‌ನಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ಅವರು ಬಹುತ್ವ ಭಾರತದ ಬಗ್ಗೆ ಅವರು ಮಾತನಾಡಿದರು.

ಎಲ್ಲ ವೈಚಾರಿಕ ಸಿದ್ಧಾಂತಗಳ ನಡುವೆ ಸಂವಾದ ನಡೆಯಬೇಕು. ಸಮಾನ ಸಿದ್ಧಾಂತಗಳ ಜತೆಗೆ ಮಾತ್ರವಲ್ಲ, ಮೇಲ್ಮೈಯ ವಿರೋಧ ಇರುವ ಸಿದ್ಧಾಂತಗಳ ನಡುವೆ, ತದ್ವಿರುದ್ಧ ಸಿದ್ಧಾಂತಗಳ ನಡುವೆಯೂ ಸಂವಾದ ನಡೆಯಬೇಕು. ಆಗ ಮಾತ್ರ ವೈಚಾರಿಕ ಪ್ರಜ್ಞೆ ಮೂಡಲು ಸಾಧ್ಯ ಎಂದು ತಿಳಿಸಿದರು.

ಜಾತಿಗಳ ಬಹುತ್ವ ಇದೆ. ಜಾತಿ ನಿರ್ಮೂಲನೆ ಆಗಲು ಒಂದು ಹೆಜ್ಜೆಯಾದರೂ ಮುಂದೆ ಹೋಗಿದ್ದೇವೆಯೇ? ಜಾತಿ ನಿರ್ಮೂಲನೆ ಮುಂದೆಯೂ ಸಾಧ್ಯವಾಗದು. ಹಾಗಾಗಿ ಎಲ್ಲ ಜಾತಿಗಳು ಸಮಾನವಾಗಿ ಇರಬೇಕು. ಆಗ ಶೋಷಣೆ ನಿಲ್ಲಿಸಲು ಸಾಧ್ಯ ಎಂದು ಭಾವಿಸಿದ್ದೇನೆ ಎಂದರು.

ಭಾರತ ಹಿಂದೆಯೂ ಹಿಂದೂರಾಷ್ಟ್ರ ಆಗಿರಲಿಲ್ಲ ಮುಂದೆಯೂ ಆಗುವುದಿಲ್ಲ. ಭಾಷೆಯ, ಧರ್ಮದ, ಜಾತಿಯ, ಪಂಥದ ಬಹುತ್ವದ ಜತೆಗೆ ಒಟ್ಟಾಗಿ ಇರಲು ಹೇಗೆ ಸಾಧ್ಯವಾಯಿತು ಎಂದು ಯೋಚಿಸಿದಾಗ ಬಹುತ್ವದ ಜತೆಗೆ ಒಂದು ಒಂದು ಏಕತ್ವ ಕೂಡ ಇತ್ತು. ಅದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಚಂದ್ರಶೇಖರ ಗೋರಬಾಳ ಮಾತನಾಡಿ, ‘ಕೋಮುವಾದಿಗಳು ಮಸೀದಿ ಮೇಲೆ ಮಾತ್ರ ದಾಳಿ ಮಾಡುತ್ತಿರುವುದಲ್ಲ. ನಾವು ಕಟ್ಟಿಕೊಂಡು ಬಂದ ಬಹುತ್ವ ಭಾರತದ ಮೇಲೆ ದಾಳಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಒಂದು ದಶಕದಲ್ಲಿ 7 ಕೋಟಿ ಉದ್ಯೋಗ ಕೃಷಿಯಲ್ಲಿ ಕಳೆದುಕೊಂಡಿದ್ದಾರೆ. ಅವರೆಲ್ಲ ಬೆಂಗಳೂರು, ಮಂಗಳೂರು ಇನ್ನಿತರ ನಗರಗಳಿಗೆ ವಲಸೆ ಹೋಗಿದ್ದಾರೆ. ಈಗ ಅಲ್ಲಿಯೂ ಉದ್ಯೋಗ ಇಲ್ಲದಂತಾಗಿದೆ. ಈ ಬಗ್ಗೆ ನಾವು ಪ್ರಶ್ನೆ ಕೇಳದೇ ಹೋದರೆ ಕೋಮುವಾದವನ್ನು ಎದುರಿಸಲು ಸಾಧ್ಯವಿಲ್ಲ ಎಂದು
ತಿಳಿಸಿದರು.

ಬಂಡವಾಳ ಶಾಹಿಯು ತನ್ನ ಲಾಭಕ್ಕಾಗಿ ಕೂಲಿ ಕಡಿತ ಮಾಡುತ್ತದೆ. ದುಡಿಮೆಯ ಅವಧಿ ಹೆಚ್ಚು ಮಾಡುತ್ತದೆ. ಯಂತ್ರ, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತದೆ ಎಂದು ಕಾರ್ಲ್‌ಮಾರ್ಕ್ಸ್‌ ಹೇಳಿದ್ದರು. ಬಂಡವಾಳವಾದ ಮತ್ತು ಬ್ರಾಹ್ಮಣವಾದ ಈ ದೇಶಕ್ಕೆ ಅಪಾಯ ಎಂದು ಅಂಬೇಡ್ಕರ್‌ ಹೇಳಿದ್ದರು. ಈಗ ಅದು ಸ್ಪಷ್ಟವಾಗಿ ನಿಜವಾಗುತ್ತಿದೆ ಎಂದರು.

ನಸ್ರೀನ್‌ ಮಿಠಾಯಿ ಮಾತನಾಡಿ, ‘ಸಂವಿಧಾನ, ಬಹುತ್ವ ಇದ್ದ ಕಾರಣಕ್ಕಾಗಿ ನಾನು ಅಂತಧರ್ಮಿಯ ಮದುವೆ ಆಗಲು ಸಾಧ್ಯವಾಯಿತು. ಅದಕ್ಕಾಗಿ ಸಂವಿಧಾನಕ್ಕೆ ನಾನು ಗೌರವ ಸಲ್ಲಿಸುತ್ತೇನೆ. ನಾವು ಓದುವಾಗ ಕಾಲೇಜು ಕ್ಯಾಂಪಸ್‌ ಗಳು ಈಗಿನಷ್ಟು ಹಾಳಾಗಿರಲಿಲ್ಲ. ಹಿಜಾಬ್‌ ವಿದ್ಯಾರ್ಥಿ ಸಮುದಾಯದಲ್ಲಿ ಭಯ ಆತಂಕವನ್ನು ಹುಟ್ಟುಹಾಕಿದೆ. ಕ್ಯಾಂಪಸ್‌ ಮಾತ್ರವಲ್ಲ ಸಮಾಜದಲ್ಲಿ ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಯದ ವಾತಾರಣವಿದೆ. ನಬಿಸಾಬ್‌ ಕಿಲ್ಲೇದಾರ ಅವರ ಮೇಲೆ ಹಲ್ಲೆಯಾದಾಗ ಸುತ್ತಲಿನ ಜನರು ಅವರ ಸಹಾಯಕ್ಕೆ ಬರಲಿಲ್ಲ’ ಎಂದು ವಿಷಾದಿಸಿದರು.

ಸರ್ಕಾರ ಏಕರೂಪ ನಾಗರಿಕ ಸಂಹಿತೆ ತರುವ ಬಗ್ಗೆ ಮಾತಾಡುತ್ತಿದೆ. ಬಹುತ್ವದ ಆತ್ಮವನ್ನು ಕೊಲ್ಲುತ್ತಿದೆ. ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದರು. ಇಮ್ತಿಯಾಜ್‌ ಹುಸೇನ್‌, ರಾಜಶೇಖರ ಗುಂಡುಗತ್ತಿ, ಮಹಾಂತೇಶ್‌ ದೊಡ್ಮನಿ, ಚನ್ನಬಸಪ್ಪ ಇದ್ದರು. ಮಿರ್ಜಾ ಬಸೀರ್‌ ಕಾರ್ಯಕ್ರಮ ಸಂಯೋಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT