ಶನಿವಾರ, ಸೆಪ್ಟೆಂಬರ್ 18, 2021
30 °C
ಮೂಲ ಸೌಲಭ್ಯಗಳ ನಡುವೆ ಶೈಕ್ಷಣಿಕವಾಗಿ ಮಕ್ಕಳನ್ನು ಸಜ್ಜುಗೊಳಿಸಲು ಶಿಕ್ಷಕರ ಪ್ರಯತ್ನ

ಆರಂಭವಾದ ಶಾಲೆಗಳು ಹತ್ತಾರು ಸವಾಲುಗಳು

ಚಂದ್ರಶೇಖರ ಆರ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಾಲೆಗಳಲ್ಲೀಗ 6ರಿಂದ 10ನೇ ತರಗತಿಗಳೂ ಆರಂಭವಾಗಿವೆ. ಮಕ್ಕಳು ಉತ್ಸಾಹದಿಂದ ಬರುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆ, ಶಿಕ್ಷಕರು, ಪೋಷಕರ ಮುಂದೆ ಹಲವು ಸವಾಲುಗಳು ಇವೆ.

ಕೊರೊನಾದಿಂದ ಎರಡು ವರ್ಷಗಳಿಂದ ಶಾಲೆಯತ್ತ ಬಾರದ ಮಕ್ಕಳನ್ನು ಮತ್ತೆ ಪಾಠದತ್ತ ಸೆಳೆಯುವ ಸವಾಲು ಶಿಕ್ಷಕರ ಮುಂದಿದೆ. ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವುದು, ಶಿಥಿಲಗೊಂಡ ಶಾಲೆಗಳ ದುರಸ್ತಿ ಸೇರಿ ಶಾಲೆಗಳ ಅಭಿವೃದ್ಧಿಯ ಅಗತ್ಯ ಇದೆ.

ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಇನ್ನೂ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಹಲವು ಗ್ರಾಮಗಳಿಗೆ ಮೊದಲು ಇದ್ದ ಬಸ್‌ ಸೌಲಭ್ಯ ಕೊರೊನಾದ ಬಳಿಕ ಸ್ಥಗಿತಗೊಂಡಿದೆ. ಹೀಗಾಗಿ ದೂರದ ಶಾಲೆಗಳಿಗೆ ಮಕ್ಕಳನ್ನು ಹೇಗೆ ಕಳುಹಿಸುವುದು ಎಂಬ ಚಿಂತೆ ಬಹುತೇಕ ಪೋಷಕರನ್ನು ಕಾಡುತ್ತಿದೆ. 

ಬಸ್‌ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯ ಇದೆ. ಅಂತಹ ಕಡೆ ಬೈಕ್‌ ಅಥವಾ ಕಾಲುನಡಿಗೆಯಲ್ಲಿ ಹೋಗಬೇಕಾದ ಸ್ಥಿತಿ ಇದೆ. ಬಹುತೇಕ ಪೋಷಕರು ಕೃಷಿ ಚಟುವಟಿಕೆ ಅವಲಂಬಿಸಿರುವ ಕಾರಣ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾದ ಅನಿವಾರ್ಯವೂ ಇದೆ.

ಎರಡು ವರ್ಷಗಳಿಂದ ನಿರ್ವಹಣೆ ಇಲ್ಲದೇ ಹಲವು ಶಾಲೆಗಳು ಸೊರಗಿವೆ. ಕಟ್ಟಡಗಳು ಶಿಥಿಲಗೊಂಡಿವೆ. ಇವೆಲ್ಲವನ್ನೂ ಸರಿಪಡಿಸಿಕೊಂಡು ಪಾಠ ಮಾಡಬೇಕಾದ ಅನಿವಾರ್ಯ ಶಿಕ್ಷಕರದ್ದು. ಖಾಸಗಿ ಶಾಲೆಗಳಲ್ಲಿ ವಾಹನಗಳಲ್ಲಿ ಶೇ 50ರಷ್ಟು ಮಕ್ಕಳನ್ನು ಮಾತ್ರ ತರಬೇಕಾದ ನಿಯಮ ಇರುವ ಕಾರಣ ಈ ನಿಟ್ಟಿನಲ್ಲಿ ನಿಯಮ ಪಾಲನೆಯ ಸವಾಲೂ ಇದೆ.

ಬಿಸಿಯೂಟ ಸ್ಥಗಿತಗೊಂಡಿದ್ದು, ಕೊರೊನಾ ಕಾರಣ ಈಗ ಮಕ್ಕಳೇ ಮನೆಯಿಂದಲೇ ನೀರು, ಉಪಾಹಾರ ತರಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದು ಕಷ್ಟಸಾಧ್ಯ. ಹೀಗಾಗಿ ಮಕ್ಕಳು ಹಸಿದ ಹೊಟ್ಟೆಯಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

‘ಕೊರೊನಾದಿಂದ ಪಾಠಗಳು ಸ್ಥಗಿತಗೊಂಡ ಕಾರಣ ವಿದ್ಯಾರ್ಥಿಗಳನ್ನು ಶೈಕ್ಷಣಿಕ ವಾತಾವರಣಕ್ಕೆ ಒಗ್ಗಿಸಬೇಕಾದ ಸವಾಲು ಶಿಕ್ಷಕರ ಮುಂದಿದೆ. ಶಿಕ್ಷಕರು ಒಂದೇ ವೇಳೆ ಪಾಠ ಮಾಡುವ ಧಾವಂತಕ್ಕೆ ಹೋಗಬಾರದು. ಮಕ್ಕಳನ್ನು ಮೊದಲು ಪಾಠ ಕೇಳಲು ಸಜ್ಜಗೊಳಿಸಬೇಕು’ ಎಂದು ಸಲಹೆ ನೀಡುತ್ತಾರೆ ಆವರಗೊಳ್ಳ ಸರ್ಕಾರಿ ಪ್ರೌಢಶಾಲೆಯ ಸಂಪನ್ಮೂಲ ಶಿಕ್ಷಕ ವಾಗೀಶ್‌ ಮಲ್ಕಿ ಒಡೆಯರ್‌.

ಕನಿಷ್ಠ ದಾಖಲೆ ಗರಿಷ್ಠ ಕಲಿಕೆ:

‘ಕನಿಷ್ಠ ದಾಖಲೆ ಗರಿಷ್ಠ ಕಲಿಕೆ’ ಈ ವರ್ಷದ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುದು ಕೆಲ ಶಿಕ್ಷಕರ ಅಳಲು.

‘ಶಿಕ್ಷಕರಿಗೆ ದಾಖಲೆ ನಿರ್ವಹಣೆಯೇ ಜವಾಬ್ದಾರಿ ಎಂಬಂತೆ ಇಲಾಖೆಯಲ್ಲಿ ಬಿಂಬಿಸಲಾಗಿದೆ. ಇದು ಹಲವು ಸಮಸ್ಯೆಗಳನ್ನು ತಂದಿದೆ. ಪ್ರಗತಿ ದಾಖಲೆ ನೀಡಿ, ಅದು ಕೊಡಿ. ಇದು ಕೊಡಿ ಎಂದು ಕೇಳದೆ, ಶಿಕ್ಷಕರಿಗೆ ಸ್ವಲ್ಪ ಸಮಯ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಕೆಲ ಶಿಕ್ಷಕರು.

‘ಮಕ್ಕಳ ಮನೆಗೆ ಹೋಗಿ ಕರೆದ ಬಳಿಕ ಈಗೀಗ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ನಮ್ಮ ಶಾಲೆಯಲ್ಲಿ 272 ಮಕ್ಕಳು ಇದ್ದಾರೆ. ಅವರಿಗೆ ತಕ್ಕಂತೆ ಶೌಚಾಲಯ, ಕೊಠಡಿ ಸೌಲಭ್ಯ ಇಲ್ಲ. 1993ರಲ್ಲಿ ಶಾಲೆಯ ಕಟ್ಟಡ ನಿರ್ಮಿಸಿದ್ದು, 5 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಮಕ್ಕಳೇನೋ ಬರುತ್ತಿದ್ದಾರೆ. ಆದರೆ, ಪೋಷಕರಿಗೆ ಮನವರಿಕೆ ಮಾಡುವ ಸವಾಲೂ ಇದೆ’ ಎಂದು ಬೆಳಗುತ್ತಿ–ಮಲ್ಲಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ತೀರ್ಥಲಿಂಗಪ್ಪ ಸಿ. ಹೇಳಿದರು.

ಕಾಲುನಡಿಗೆಯಲ್ಲಿ ಶಾಲೆಗೆ ಹೋಗುವ ಅನಿವಾರ್ಯ

ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಕ್ಕೆ ಇಂದಿಗೂ ಸಮರ್ಪಕ ಬಸ್ ಸೌಲಭ್ಯ ಇಲ್ಲ. ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಹೋಗಬೇಕು. 

‌ನ್ಯಾಮತಿ ತಾಲ್ಲೂಕಿನ ಕುದುರೆಕೊಂಡ ಗ್ರಾಮಕ್ಕೆ ಇದುವರೆಗೂ ಬಸ್‌ ಸೌಲಭ್ಯವೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಗಾಗಿ 3 ಕಿ.ಮೀ. ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

‘ಕುದುರೆಕೊಂಡದಿಂದ ಪ್ರಾಥಮಿಕ ಶಾಲೆಗೆ ಸುರಹೊನ್ನೆಗೆ, ಪ್ರೌಢಶಾಲೆಗೆ ನ್ಯಾಮತಿಗೆ ಮಕ್ಕಳು ಬರಬೇಕು. ಬಸ್‌ ಇಲ್ಲ. ಆಟೊಗಳಿಗೆ ದುಬಾರಿ ವೆಚ್ಚ ತಗುಲುವ ಕಾರಣ ಮಕ್ಕಳು ಅನಿವಾರ್ಯವಾಗಿ ನಡೆದುಕೊಂಡು ಹೋಗಬೇಕಾಗಿದೆ’ ಎನ್ನುತ್ತಾರೆ ಕುದುರೆಕೊಂಡ ಗ್ರಾಮದ ಪರಮೇಶ್ವರಪ್ಪ ಕೆ. 

‘ಶಾಲೆಯ ಸಮಯಕ್ಕೆ ಸಮರ್ಪಕ ಬಸ್‌ ಸೌಲಭ್ಯ ಇಲ್ಲ. ಬೆಳಗುತ್ತಿ–ಯರಗನಾಳ–ರಾಮೇಶ್ವರ– ಸುರಹೊನ್ನೆ ಮಾರ್ಗದಲ್ಲಿ ಬಸ್‌ ಇಲ್ಲ. ಬೆಳಿಗ್ಗೆ ಒಮ್ಮೆ ಬಂದರೆ ಬಸ್‌ ಮತ್ತೆ ಬರುವುದೇ ಇಲ್ಲ. ಈ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮಕ್ಕಳು ನಡೆದುಕೊಂಡು ಹೋಗಲೂ ಹಿಂದೇಟು ಹಾಕುವಂತಾಗಿದೆ. ಕೃಷಿಕರೇ ಹೆಚ್ಚಿರುವ ಕಾರಣ ಎಲ್ಲರಿಗೂ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು ಎಸ್‌ಡಿಎಂಸಿ ಅಧ್ಯಕ್ಷ ಕುಬೇರಪ್ಪ ಬೆಳಗುತ್ತಿ.

ಚನ್ನಗಿರಿ ತಾಲ್ಲೂಕಿನ ಕಾರಿಗನೂರು, ಬೆಳಲಗೆರೆ, ಚಿರಡೋಣಿ, ಕದರನಹಳ್ಳಿ, ನಲ್ಕುದುರೆಗೆ ಸರ್ಕಾರಿ ಬಸ್‌ ಸೌಲಭ್ಯ ಇಲ್ಲ. ಶಾಸಗಿ ಬಸ್‌ ಇದ್ದರೂ ಕಡಿಮೆ. ಹೀಗಾಗಿ ಮಕ್ಕಳು ಬಸವಾಪಟ್ಟಣಕ್ಕೆ ಬಂದು ಬಸ್‌ ಹಿಡಿದು ಹೋಗಬೇಕಿದೆ. 

ಅಗತ್ಯ ಕ್ರಮ:

‘ಸದ್ಯ ಶೇ 70ರಷ್ಟು ಮಕ್ಕಳ ಹಾಜರಾತಿ ಇದೆ. ಗ್ರಾಮೀಣ ಪ್ರದೇಶದಲ್ಲಿ 60ರಷ್ಟು ಇದೆ.  ಈ ಬಾರಿ ಮಕ್ಕಳ ದಾಖಲಾತಿ ಹೆಚ್ಚಿದೆ. ಜಿಲ್ಲೆಯಲ್ಲಿ 8 ಸಾವಿರದಿಂದ 10 ಸಾವಿರ ಮಕ್ಕಳು ಈ ಬಾರಿ ಸರ್ಕಾರಿ ಶಾಲೆಗೆ ನೋಂದಾಯಿಸಿಕೊಂಡಿದ್ದಾರೆ. ಸದ್ಯ ಹಾಜರಾತಿ ಹೆಚ್ಚಿಸಬೇಕಿದೆ. ಎರಡು ವರ್ಷ ಶಾಲೆಗಳು ಸ್ಥಗಿತಗೊಂಡ ಕಾರಣ ಮಕ್ಕಳನ್ನು ಪಾಠಗಳತ್ತ ಕೇಂದ್ರೀಕರಿಸುವ ಸವಾಲು ಶಿಕ್ಷಕರಿಗೆ ಇರುವುದು ಸಹಜ. ಈ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಶಿಕ್ಷಕರಿಗೆ ತರಬೇತಿ ನೀಡಲಾಗುವುದು’ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ಶಾಲೆಗಳಲ್ಲಿ ಒಂದು ಅಥವಾ ಎರಡು ಕಟ್ಟಡಗಳು ಶಿಥಿಲಗೊಂಡಿವೆ. ಆದರೆ, ಬೀಳುವ ಹಂತದಲ್ಲಿ ಯಾವುದೂ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು. 

ಬಸ್‌ ಸೌಲಭ್ಯ ಕೊರತೆ:

ಜಗಳೂರು: ಕೋವಿಡ್ ನಂತರ ಶಾಲೆಗಳು ಆರಂಭವಾಗುತ್ತಿದ್ದು, ಆತಂಕದ ನಡುವೆಯೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. 6ರಿಂದ 10ನೇ ತರಗತಿಯವರೆಗೆ ಶಾಲೆಗಳನ್ನು ಪುನರ್ ಆರಂಭಿಸುವ ಬಗ್ಗೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ದಾರುಕೇಶ್ ತಾಲ್ಲೂಕಿನ 162 ಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಈಚೆಗೆ ಸಭೆ ನಡೆಸಿದ್ದರು. ತಾಲ್ಲೂಕಿನ 60ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ತಾಲ್ಲೂಕು ಕೇಂದ್ರ ಜಗಳೂರು ಸೇರಿ ತಾಲ್ಲೂಕಿನ ಶಾಲೆಗಳು ಎರಡು ವರ್ಷಗಳಿಂದ ಸುಣ್ಣ, ಬಣ್ಣ ಕಾಣದೆ ಭಣಗುಡುತ್ತಿವೆ. ಶಾಲಾ ಅನುದಾನದ ಕೊರತೆಯಿಂದಾಗಿ ಹಣವಿಲ್ಲದೆ ಸಮಸ್ಯೆಯಾಗಿದೆ ಎಂದು ಬಿಇಒ ದಾರುಕೇಶ್ ಈಚೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದರು.

ತಾಲ್ಲೂಕಿನ ಕೆಲವು ಮುಖ್ಯ ರಸ್ತೆ ಮಾರ್ಗಗಳನ್ನು ಹೊರತುಪಡಿಸಿ ಒಳಭಾಗದ ಬಹುತೇಕ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ನೂರಾರು ಹಳ್ಳಿಗಳಿಂದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಮೈಲುಗಟ್ಟಲೇ ನಡೆದು ಸಮೀಪದ ಪ್ರೌಢಶಾಲೆಗಳಿಗೆ ತೆರಳಬೇಕಾದ ಸ್ಥಿತಿ ಇದೆ. ದಶಕಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ತಾಲ್ಲೂಕು ಕೇಂದ್ರದಿಂದ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಭಾರತಿ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ.

ಮಕ್ಕಳನ್ನು ಅಣಿಗೊಳಿಸಲು ಶಿಕ್ಷಣ ಇಲಾಖೆ ಸನ್ನದ್ಧ:

ಹೊನ್ನಾಳಿ: ತಾಲ್ಲೂಕಿನಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳು ಆರಂಭವಾಗಿವೆ. ಭೌತಿಕ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಪರ್ಯಾಯ ಶೈಕ್ಷಣಿಕ ಮಾರ್ಗಗಳಿಂದ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ.

‘ಕೋವಿಡ್ ಮೂರನೇ ಅಲೆಯ ಭೀತಿಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಿ, ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸಲು ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಕಲಿಕೆಯ ಕೊರತೆಯನ್ನು ತುಂಬಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸೌಕರ್ಯಗಳು ಕಡಿಮೆ ಇರುವ ಶಾಲೆಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ’ ಎಂದರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್.

ತಾಲ್ಲೂಕಿನ ಶಾಲೆಗಳಲ್ಲಿ ಶೇ 83.63ರಷ್ಟು ಹಾಜರಾತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲ್ಲೂಕಿನ ನೇರಲಗುಂಡಿಯಿಂದ 8ನೇ ತರಗತಿಗೆ ಹೋಗುವ ವಿದ್ಯಾರ್ಥಿಗಳು ಕುಂದೂರು, ಕೂಲಂಬಿ ಗ್ರಾಮ ಸಮೀಪದ ಪ್ರೌಢಶಾಲೆ ಇಲ್ಲವೇ ತರಗನಹಳ್ಳಿಗೆ ಬರಬೇಕಾಗುತ್ತದೆ. ಅಲ್ಲಿಂದ ಎರಡು ಮೂರು ಕಿ.ಮೀ. ದೂರ ಕ್ರಮಿಸಿ ಬರಬೇಕು. ಹನುಮಸಾಗರ ತಾಂಡಾದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದು, ಹೈಸ್ಕೂಲ್‌ಗೆ ಬರಬೇಕಾದವರು ಹನುಮಸಾಗರಕ್ಕೆ ಬರಬೇಕು. ಅಲ್ಲಿಂದ ಒಂದೂವರೆ ಕಿ.ಮೀ. ನಡೆಯಬೇಕು. ಅದೇ ರೀತಿ ಬಳ್ಳೇಶ್ವರದಿಂದ ಹನುಮಸಾಗರಕ್ಕೆ ಬರುವವರೂ ಒಂದೂವರೆ ಕಿ.ಮೀ. ದೂರ ಕ್ರಮಿಸಬೇಕಿದೆ.

ಕೆಲವು ಕಡೆ ಖಾಸಗಿ ಬಸ್‌ಗಳು ಇದ್ದರೂ ಅವುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನರಗಿನಕೆರೆ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇತ್ತು. ವಿದ್ಯಾರ್ಥಿಗಳ ಕೊರತೆಯಿಂದ ಅದನ್ನು ಬಹಳ ವರ್ಷಗಳ ಹಿಂದೆಯೇ ಮುಚ್ಚಲಾಗಿದೆ. ಹೀಗಾಗಿ ಅಲ್ಲಿಂದ ಹೊಸಕೊಪ್ಪಕ್ಕೆ ಮಕ್ಕಳು 1 ಕಿ.ಮೀ. ನಡೆದು ಬರಬೇಕು. ಪ್ರೌಢಶಾಲೆಗೆ ದೂರದ ಗುಡ್ಡೇಹಳ್ಳಿಗೆ ಬರುವ ಸ್ಥಿತಿ ಇದೆ.

ಶಾಲೆಗಳಲ್ಲಿ ಮಕ್ಕಳ ಕಲರವ

ಚನ್ನಗಿರಿ: ತಾಲ್ಲೂಕಿನಲ್ಲಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ.

9ರಿಂದ 10 ನೇ ತರಗತಿಗಳಿಗೆ ಶೇ80ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇದೆ. 6ರಿಂದ 8ನೇ ತರಗತಿಗಳಿಗೆ ಶೇ 65ರಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ. ತಾಲ್ಲೂಕಿನ ಎಲ್ಲ ಶಾಲೆಗಳು ಸೇರಿ 6ನೇ ತರಗತಿಯಲ್ಲಿ 8,500, 7ನೇ ತರಗತಿಯಲ್ಲಿ 8,950 ಹಾಗೂ 8ನೇ ತರಗತಿಯಲ್ಲಿ 8,050 ವಿದ್ಯಾರ್ಥಿಗಳು ಶಾಲೆಗಳಿಗೆ ದಾಖಲಾಗಿದ್ದಾರೆ ಎಂದು ಬಿಇಒ ಕೆ. ಮಂಜುನಾಥ್ ತಿಳಿಸಿದರು.

‌ಮಕ್ಕಳಿಗೆ ಪಠ್ಯ ಪುಸ್ತಕಗಳ ವಿತರಣೆ ಮಾಡಲಾಗಿದೆ. ಸದ್ಯ ಶಾಲೆಗಳಿಗೆ ಪೋಷಕರೇ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

‘ಒಂದೂವರೆ ವರ್ಷದಿಂದ ಕೊರೊನಾ ಕಾರಣದಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ತುಂಬಾ ತೊಂದರೆಯಾಗಿತ್ತು. ಮನೆಯಲ್ಲಿಯೇ ಕುಳಿತು ಅಭ್ಯಾಸವನ್ನು ಮಾಡಬೇಕಾಗಿತ್ತು. ಹೊರಗಡೆ ಹೋಗಲು ಕೂಡ ಮನೆಯಲ್ಲಿ ಅವಕಾಶ ನೀಡುತ್ತಿರಲಿಲ್ಲ. ಈಗ ಶಾಲೆಗಳನ್ನು ಆರಂಭಿಸಿರುವುದರಿಂದ ತುಂಬಾ ಸಂತೋಷವಾಗಿದೆ. ಖುಷಿಯಿಂದ ಶಾಲೆಗಳಿಗೆ ಬರುತ್ತಿದ್ದೇವೆ’ ಎನ್ನುತ್ತಾಳೆ ಪಟ್ಟಣದ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಂಗೀತಾ.

ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ ಸೌಲಭ್ಯದ ಸಮಸ್ಯೆ ಇದ್ದು, ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು