ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕತೆಯ ಪ್ರಶ್ನೆ ಎತ್ತಿದ ವಿಜ್ಞಾನ: ಡಾ. ಶರತ್‌ ಅನಂತಮೂರ್ತಿ

Last Updated 9 ಫೆಬ್ರುವರಿ 2020, 10:24 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಜ್ಞಾನದಲ್ಲಿನ ಆವಿಷ್ಕಾರಗಳು ನಮ್ಮನ್ನು ಎತ್ತ ಕೊಂಡೊಯ್ಯುತ್ತವೆ ಎಂಬ ಪ್ರಶ್ನೆ ಮೂಡುತ್ತಿದೆ. ವಿಜ್ಞಾನ ಇಂದು ನಾಗರಿಕತೆ ಬಗೆಗಿನ ಪ್ರಶ್ನೆ ಕೇಳುವಂತೆ ಮಾಡಿದೆ’ ಎಂದು ಹೈದರಾಬಾದ್‌ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಶರತ್‌ ಅನಂತಮೂರ್ತಿ ಅಭಿಪ್ರಾಯಪಟ್ಟರು.

ನಗರದ ಡಿಆರ್‌ಎಂ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ರಿಸೆಂಟ್‌ ಅಡ್ವಾನ್ಸಸ್‌ ಇನ್‌ ಸಾಲಿಡ್‌ ಸ್ಕೇಟ್‌ ಫಿಸಿಕ್ಸ್‌ ಅಂಡ್‌ ಇಟ್ಸ್‌ ಅಪ್ಲಿಕೇಷನ್‌’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.

ವಿಜ್ಞಾನ ಜಾಗತಿಕ ವಿಷಯವಾದ ಕಾರಣ ವಿವಿಧ ದೇಶಗಳ ಸಂಸ್ಕೃತಿಯಲ್ಲಿನ ವೈವಿಧ್ಯತೆಯ ಆಳವಾದ ಅಧ್ಯಯನ ಅಗತ್ಯ. ಯಶಸ್ಸು ಪಡೆಯುತ್ತಾ ಹೋದಂತೆಲ್ಲಾ ವಿಜ್ಞಾನ ಅಹಂಕಾರಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ಹೇಳಿದರು.

‘ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಇಂದು ಹೆಚ್ಚಿನ ಕ್ರಾಂತಿ ಮಾಡಿದೆ. ಅಲ್ಲದೇ ಅದು ಕೆಲ ಮಿತಿಯನ್ನೂ ಹೊಂದಿದೆ. ಕಂಪ್ಯೂಟರ್‌ಗಳಿಗೆ ಮಾನವನೇ ನಿರ್ದೇಶನ ನೀಡಬೇಕು. ಭಾವನೆಗಳ ಬಗ್ಗೆ ಕಂಪ್ಯೂಟರ್‌ ಅರಿಯಲು ಸಾಧ್ಯವಿಲ್ಲ. ಕವಿಯೊಬ್ಬನ ಸುಂದರ ವಾಕ್ಯವನ್ನು ನಾವು ಗ್ರಹಿಸಿ, ರೂಪಾಂತರಿಸಿದಂತೆ ಕಂಪ್ಯೂಟರ್‌ಗೆ ಸಾಧ್ಯವಿಲ್ಲ’ ಎಂದರು.

‘ಕರ್ನಾಟಕದಲ್ಲಿ ಶಾಸ್ತ್ರೀಯ ಕನ್ನಡ ಸಾಹಿತ್ಯದ ಬಗ್ಗೆ ಸ್ವಲ್ಪ ಅರಿವು ಇದೆ. ಆದರೆ ಶಾಸ್ತ್ರೀಯವಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿದ ಎಷ್ಟು ಜನ ವಿದ್ವಾಂಸರು ಇದ್ದಾರೆ. ಷೇಕ್ಸ್‌ಪಿಯರ್ ಇನ್ನೂ ಜೀವಂತವಾಗಿರುವುದಕ್ಕೆ ಇಂಗ್ಲೆಂಡ್‌ ಸರ್ಕಾರ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಮಾಡಿದ ಕೆಲ ನೀತಿಗಳು ಕಾರಣ. ಈ ತರಹದ ಕೆಲಸ ನಮ್ಮಲ್ಲಿ ಆಗಲಿಲ್ಲ’ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ, ‘ಅಧ್ಯಯನ, ಅಧ್ಯಾಪನ, ಸಂಶೋಧನೆ ಅಧ್ಯಾಪಕರು ಮಾಡಬೇಕಾದ ಮೂರು ಮುಖ್ಯ ಕೆಲಸ. ಇಂತಹ ವಿಚಾರಸಂಕಿರಣಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಇತರ ವಿಷಯಗಳ ತಿಳಿವಳಿಕೆ ನೀಡುವುದು ಮುಖ್ಯ’ ಎಂದರು.

‘ವಿಜ್ಞಾನದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಯಾದಂತೆಲ್ಲಾ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಹೊಸ ಆವಿಷ್ಕಾರಗಳು ನಮಗೆ ಸಮಸ್ಯೆಯಾಗದಂತಿರಬೇಕು. ವಿಜ್ಞಾನ ವಿವೇಕವನ್ನು ಉಳಿಸುವುದರ ಜೊತೆ ಹೆಚ್ಚು ಸಮಾಜಮುಖಿಯಾಗಬೇಕು’ ಎಂದು ಹೇಳಿದರು.

ಬಿಐಇಟಿ ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಎಚ್‌.ವಿ.,‘ ಹೊಸ ಜೀವನಕ್ಕೆ ವಿಜ್ಞಾನ ಬೇಕು. ಆದರೆ ಅದರಲ್ಲಿ ಮಿತಿ ಇರಬೇಕು. ವಿಜ್ಞಾನ ಹೆಚ್ಚು ಅಡ್ವಾನ್ಸಡ್ ಆದಾಗ ಆತಂಕ ತರುತ್ತಿದೆ. ಸಮಾಜಕ್ಕೆ ಅಗತ್ಯ ಇರುವ ಸಂಶೋಧನೆಗಳು ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಧ್ಯಾಪಕ ಪಿ. ಪರಶುರಾಮ, ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್‌. ನಾಗರತ್ನಮ್ಮ, ಪ್ರಾಧ್ಯಾಪಕರಾದ ಡಾ. ಜಿ. ಉಮೇಶ್‌, ಡಾ. ಆರ್‌. ಸೋಮಶೇಖರ್‌, ಕಮಲಾ ಸೊಪ್ಪಿನ್‌, ಡಾ.ಎಸ್‌. ಆರ್‌. ಗೋಪಾಲಕೃಷ್ಣ ನಾಯಕ್‌, ಎಚ್‌. ಬಸವರಾಜಪ್ಪ ಇದ್ದರು.

ಪ್ರಾಧ್ಯಾಪಕಿ ಶೋಭಾ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಪಿ. ರೂಪಶ್ರೀ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT