ಬುಧವಾರ, ಜನವರಿ 22, 2020
28 °C
‘ಫಿಟ್‌ ಇಂಡಿಯಾ ಸ್ಕೂಲ್‌’ ಸಪ್ತಾಹದಿಂದ ಬಹುತೇಕ ಶಾಲೆಗಳು ಹೊರಗೆ

ಫಿಟ್‌ ಇಲ್ಲದ ಶಾಲೆಗಳೇ ಹೆಚ್ಚು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಲ್ಲಾ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗುವಂತೆ ಮಾಡುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ ಫಿಟ್‌ ಇಂಡಿಯಾ ಸ್ಕೂಲ್‌ ಸಪ್ತಾಹ ಆಚರಿಸುತ್ತಿದೆ. ಆದರೆ ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಹಾಗಾಗಿ ಈ ಸಪ್ತಾಹ ಆಚರಿಸಲು ಶಾಲೆಗಳೇ ಫಿಟ್‌ ಆಗಿಲ್ಲ.

ಫಿಟ್‌ ಇಂಡಿಯಾ ಸ್ಕೂಲ್‌ಗಳಾಗಿ ಗುರುತಿಸಿಕೊಳ್ಳಬೇಕಿದ್ದರೆ ಆ ಶಾಲೆಯಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು. ಕ್ರೀಡೆ ಬಗ್ಗೆ ಆಸಕ್ತಿ ಇರುವ ಮತ್ತೊಬ್ಬ ಶಿಕ್ಷಕರಿರಬೇಕು. ಶಾಲೆಯು ಆಟದ ಮೈದಾನ ಹೊಂದಿರಬೇಕು. ಅದು 2ಕ್ಕಿಂತ ಹೆಚ್ಚು ಕ್ರೀಡೆಗಳನ್ನು ಏಕಕಾಲದಲ್ಲಿ ಆಡಿಸುವಷ್ಟು ವಿಶಾಲವಾಗಿರಬೇಕು ಎಂಬ ನಿಯಮಗಳಿವೆ. ಈ ನಿಯಮಗಳೇ ನಮ್ಮ ಶಾಲೆಗಳು ‘ಫಿಟ್‌’ ಆಗಿಲ್ಲ ಎಂಬುದನ್ನು ಜಾಹೀರು ಪಡಿಸಿವೆ.

ಜಿಲ್ಲೆಯಲ್ಲಿ 1195 ಸರ್ಕಾರಿ, 65 ಅನುದಾನಿತ, 225 ಅನುದಾನ ರಹಿತ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳಿವೆ. ಸುಮಾರು 170 ಸರ್ಕಾರಿ ಶಾಲೆಗಳಲ್ಲಿಯಷ್ಟೇ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಉಳಿದ ಸರ್ಕಾರಿ ಶಾಲೆಗಳಲ್ಲಿ ಇಲ್ಲ. ಇದೇ ಪ್ರಮಾಣ ಅನುದಾನ ಮತ್ತು ಅನುದಾನ ರಹಿತ ಶಾಲೆಗಳಿಗೂ ಅನ್ವಯವಾಗುತ್ತದೆ. ಅಂದರೆ ಜಿಲ್ಲೆಯಲ್ಲಿ ಶೇ 85ರಷ್ಟು ಶಾಲೆಗಳು ಫಿಟ್‌ ಇಂಡಿಯಾ ಸ್ಕೂಲ್‌ ಎಂದು ನಮೂದಿಸಿಕೊಳ್ಳುವ ಅರ್ಹತೆ ಪಡೆದಿಲ್ಲ ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸರ್ಕಾರಿ ಶಾಲೆಗಳಲ್ಲಿ ಮೈದಾನವಾದರೂ ಇದೆ. ಹಲವು ಖಾಸಗಿ ಶಾಲೆಗಳಲ್ಲಿ ಮೈದಾನ ಕೂಡ ಇಲ್ಲ. ಮಕ್ಕಳು ರಸ್ತೆ ಬದಿಯಲ್ಲಿ ನಿಂತು ಪ್ರಾರ್ಥನೆ ಮಾಡಬೇಕು. ಆದರೂ ಅವರಿಗೆ ಅನುಮತಿ ನೀಡಲಾಗಿದೆ’ ಎನ್ನುವುದು ಅವರ ಆರೋಪ.

‘ಪ್ರೌಢಶಾಲೆಗಳಲ್ಲಿ ಈ ಸಮಸ್ಯೆ ಇಲ್ಲ. ಬೆರಳೆಣಿಕೆ ಪ್ರೌಢಶಾಲೆಗಳನ್ನು ಹೊರತುಪಡಿಸಿ ಮತ್ತೆಲ್ಲ ಕಡೆ ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ. ಹಾಗಾಗಿ ಪ್ರೌಢಶಾಲೆಗಳಲ್ಲಿ ಫಿಟ್‌ ಇಂಡಿಯಾ ಸ್ಕೂಲ್‌ ಸಪ್ತಾಹ ಯಶಸ್ವಿಯಾಗಿ ನಡೆಯುತ್ತಿದೆ.  ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಆದರೂ ಈ ಸಪ್ತಾಹ ಮಾಡಿ ಎಂದು ಸೂಚನೆ ನೀಡಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು