ಬುಧವಾರ, ಜೂನ್ 29, 2022
21 °C
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಸ್ಪಷ್ಟನೆ

ವೈದ್ಯಕೀಯ ಉಪಕರಣ ವಿತರಣೆಯಲ್ಲಿ ತಾರತಮ್ಯ ಎಸಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಜಿಲ್ಲೆಯ ಪ್ರತಿ ತಾಲ್ಲೂಕಿಗೂ ಸಮಾನವಾಗಿ ಆರೋಗ್ಯ ಪರಿಕರ ಹಾಗೂ ಸಲಕರಣೆ, ಔಷಧ ಹಾಗೂ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪ ನಿರಾಧಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‍ ಸ್ಪಷ್ಟನೆ ನೀಡಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಸ್ಥಾವರದ ನಿರ್ಮಾಣದ ಸ್ಥಳ, ವಿತರಣಾ ಘಟಕಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಅವರು ಮಾತನಾಡಿದರು.

ನಗರದ ಆಸ್ಪತ್ರೆಗೆ 23 ಆಮ್ಲಜನಕ ಸಾಂದ್ರಕ, ತಜ್ಞ ವೈದ್ಯ ಹಾಗೂ ಶುಶ್ರೂಷಕಿಯರನ್ನು ನೇಮಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ‌ ಶಾಸಕರ ಸ್ವಸಾಮರ್ಥ್ಯದ ಅಗತ್ಯವಿದೆ. ನಿರಾಧಾರವಾದ ಆರೋಪಗಳನ್ನು ಬಿಟ್ಟು, ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.

ಕೋವಿಡ್‍ ಮರಣ ಸಂಖ್ಯೆಯ ವ್ಯತ್ಯಾಸದ ವರದಿಯ ಬಗ್ಗೆ ಶಾಸಕರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ವರದಿಯನ್ನು ಮುಚ್ಚಿಡುವ ಅಗತ್ಯವಿಲ್ಲ. ವಾಸ್ತವ ಸಂಖ್ಯೆಯನ್ನು ಜಿಲ್ಲಾಡಳಿತ ನಿತ್ಯ ಬಿಡುಗಡೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಹನಮಂತರಾಯ, ‘ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಶಾಸಕರು ಯಾವುದೇ ದೂರು ನೀಡಿಲ್ಲ. ರಾಜನಹಳ್ಳಿ ಬಳಿ ಗ್ರಾಮಸ್ಥರು ತಡೆ ಹಿಡಿದ ಲಾರಿಗಳನ್ನು ಬಿಡುವಾಗ ಪೊಲೀಸರಿಗೆ ಮಾಹಿತಿ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಮಾಸಾಶನದ ಅನುದಾನ ಕಳೆದ 4 ತಿಂಗಳಿಂದ ಬಿಡುಗಡೆಯಾಗಿಲ್ಲ. ಸಾಮಾಜಿಕ ಭದ್ರತೆಯ ಮಾಸಾಶನದ ವಿತರಣೆ ಕೋವಿಡ್‍ ಕಾರಣ ವಿಳಂಬವಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಡಿಎಚ್‍ಒ ಡಾ.ನಾಗರಾಜ್, ಪೌರಾಯುಕ್ತೆ ಎಸ್‍. ಲಕ್ಷ್ಮೀ, ಗ್ರಾಮಾಂತರ ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ, ಟಿಎಚ್‍ಒ ಡಾ.ಚಂದ್ರಮೋಹನ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮ ನಾಯಕ್‌, ಸಿಪಿಐ ಸತೀಶ್‍ ಕುಮಾರ್‌, ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು