ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ಘಟಕಗಳ ನಿರ್ಮಾಣಕ್ಕೆ ‘ಜಾಗ’ವಿಲ್ಲ

Last Updated 8 ಫೆಬ್ರುವರಿ 2021, 1:10 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಚ್ಛ ವಾತಾವರಣದ ಮೂಲಕ ಗ್ರಾಮೀಣ ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ಘಟಕಗಳನ್ನು ನಿರ್ಮಾಣ ಮಾಡಲು ಜಿಲ್ಲೆಯ 30 ಗ್ರಾಮ ಪಂಚಾಯಿತಿಗಳಿಗೆ ಜಾಗದ ಕೊರತೆ ಎದುರಾಗಿದೆ.

ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಮಾಡಬೇಕು ಎಂಬುದು ಸರ್ಕಾರದ ಆಶಯ. ಆದರೆ ಜಾಗದ ಕೊರತೆಯಿಂದಾಗಿ ಈ ಯೋಜನೆಗೆ ತಡೆಯಾಗಿದೆ. 124 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಆದರೆ ಜಾಗದ ಕೊರತೆಯಿಂದ ಡಿಪಿಆರ್ ಬಾಕಿ ಇದೆ.

‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲಿ ಈ ಪಂಚಾಯಿತಿಗಳ ಕಡತಗಳು ಬಾಕಿ ಇದ್ದು, ಈ ಯೋಜನೆಗೆ ಹಿನ್ನಡೆಯಾಗಿದೆ. ಜಾಗ ಅನುಮೋದನೆಯಾದ ನಂತರ ಹಣ ಬಿಡುಗಡೆಯಾಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಸರ್ಕಾರಿ ಜಾಗ ಸಿಗದ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಸಂಗ್ರಹಕ್ಕೆ ಪಾಳುಬಿದ್ದ ಕಟ್ಟಡಗಳನ್ನು ಬಳಸಿಕೊಳ್ಳಲಾಗುವುದು. ಇಲ್ಲವೇ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳ ಜೊತೆಗೆ ಕ್ಲಸ್ಟರ್ ಮಾಡಿಕೊಳ್ಳುವ ಆಲೋಚನೆ ಇದೆ. ಎರಡು ಗ್ರಾಮಗಳು ಸಮ್ಮತಿ ಸೂಚಿಸಿದರೆ ಇದು ಸುಲಭವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ 16 ಗ್ರಾಮ ಪಂಚಾಯಿತಿಗಳಲ್ಲಿ ವಾಹನ ಖರೀದಿ ಮಾಡಲಾಗಿದೆ. ಉಳಿದ 56 ಗ್ರಾಮ ಪಂಚಾಯಿತಿಗಳಿಗೆ ವಾಹನ ಖರೀದಿಸಲು ಟೆಂಡರ್ ಕರೆಯಬೇಕಿದೆ. ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಸ್ಕರಣಾ ಘಟಕಗಳ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ’ ಎಂದು ಹೇಳುತ್ತಾರೆ.

ಒಣ ಕಸ ಸಂಗ್ರಹಕ್ಕೆ ಜಿಲ್ಲೆಗೆ ಒಂದೇ ಘಟಕ

‘ಗ್ರಾಮೀಣ ಭಾಗಗಳಲ್ಲಿ ಬರೀ ಒಣ ಕಸ ಮಾತ್ರ ಸಂಗ್ರಹವಾಗುತ್ತಿದ್ದು, ಹಸಿ ಕಸವನ್ನು ಗೊಬ್ಬರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಣ ಕಸವನ್ನು ಸಂಗ್ರಹಿಸಿ ಅದನ್ನು ಬೇರ್ಪಡಿಸಿ ಮರು ಬಳಕೆಗೆ ನೀಡಲು ಪುಣೆಯ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸಂಗ್ರಹವಾದ ಕಸವನ್ನು ಒಂದು ಕಡೆ ಶೇಖರಿಸಲು ಒಂದು ಘಟಕ ನಿರ್ಮಿಸಲಾಗುವುದು. 6 ತಿಂಗಳಿಗೊಮ್ಮೆ ಗ್ರಾಮಗಳಿಗೆ ಹೋಗಿ ಸಂಗ್ರಹಿಸಿದ ಒಣ ಕಸವನ್ನು ಇದರಲ್ಲಿ ಸಂಗ್ರಹಿಸಿ ಮಾರಾಟ ಮಾಡಲಾಗುವುದು’ ಎನ್ನುತ್ತಾರೆ ಪದ್ಮ ಬಸವಂತಪ್ಪ.

ನಮ್ಮ ನಡಿಗೆ ಕಸಮುಕ್ತದೆಡೆಗೆ

ಎಲ್ಲಾ ಗ್ರಾಮಗಳನ್ನು ಕಸಮುಕ್ತ ಗ್ರಾಮಗಳನ್ನಾಗಿ ಮಾಡುವ ಉದ್ದೇಶದಿಂದ ‘ನಮ್ಮ ನಡಿಗೆ ಕಸಮುಕ್ತದೆಡೆಗೆ’ ಕಾರ್ಯಕ್ರಮ ಆರಂಭವಾಗಿದ್ದು, ಮಾರ್ಚ್ 31ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ಮನೆಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಶುಚಿತ್ವದ ಪಾಠ ಹೇಳುತ್ತಿದ್ದಾರೆ.

ಕಸವನ್ನು ಡಬ್ಬದಲ್ಲಿಯೇ ಹಾಕುವುದು, ಬೀದಿಯಲ್ಲಿ ಬಿಸಾಡುವುದರಿಂದ ಆಗುವ ಅಪಾಯಗಳು, ಹಸಿ ಕಸದ ಸಂಸ್ಕರಣೆ, ಮನೆಯಲ್ಲಿಯೇ ಕಾಂಪೋಸ್ಟ್ ಮಾಡುವುದು, ಅಪಾಯಕಾರಿ ತ್ಯಾಜ್ಯವನ್ನು ಬೇರ್ಪಡಿಸುವುದು, ಪ‍್ಲಾಸ್ಟಿಕ್ ಅನ್ನು ಸುಟ್ಟರೆ ಆಗುವ ಅನಾಹುತಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಜನರಿಗೆ ಮನವರಿಕೆ ಮಾಡಿಸುತ್ತಿದ್ದಾರೆ.

11 ಕಡೆಗಳ ಕಟ್ಟಡ ನಿರ್ಮಾಣ ಪೂರ್ಣ

‘ದಾವಣಗೆರೆ ತಾಲ್ಲೂಕಿನ ಕೈದಾಳೆಯಲ್ಲಿ ಘನತ್ಯಾಜ್ಯ ಘಟಕ ಈಗಾಗಲೇ ಆರಂಭವಾಗಿದ್ದು, ಐಗೂರು, ಆವರಗೊಳ್ಳ ಹಾಗೂ ನ್ಯಾಮತಿ ತಾಲ್ಲೂಕಿನ ಚೀಲೂರು, ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ, ಜಗಳೂರು ತಾಲ್ಲೂಕಿನ ಬಿಳಿಚೋಡು ಸೇರಿ 11 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಘಟಕಗಳು ನಿರ್ಮಾಣಗೊಂಡಿವೆ. ಹೊಸ ಗ್ರಾಮಾಡಳಿತ ಬಂದ ಮೇಲೆ ಕಾರ್ಯ ಆರಂಭಿಸಲಿವೆ’ ಎಂದು ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

ಚೀಲೂರಿನಲ್ಲಿ ಶೀಘ್ರ ಆರಂಭ

ನ್ಯಾಮತಿ: ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಸಂಕೀರ್ಣ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ನಿರ್ಮಾಣವಾಗಿದ್ದು, ನೂತನ ಗ್ರಾಮಾಡಳಿತ ಅಧಿಕಾರಕ್ಕೆ ಬಂದ ನಂತರ ಕಾರ್ಯ ನಿರ್ವಹಿಸಲಿದೆ.

ಕಸದಿಂದ ಕಾಸು

ದಾವಣಗೆರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಘನ, ದ್ರವ ಸಂಪನ್ಮೂಲ ನಿರ್ವಹಣೆ ಘಟಕಗಳನ್ನು ಆರಂಭಿಸಿದ್ದು, ನಿರ್ವಹಣೆಯ ಹೊಣೆಯನ್ನು ಸ್ವಸಹಾಯ ಸಂಘಗಳಿಗೆ ವಹಿಸುವ ಆಲೋಚನೆಯಲ್ಲಿವೆ. ದಾವಣಗೆರೆ ತಾಲ್ಲೂಕಿನ ಕೈದಾಳೆ ಗ್ರಾಮ ಪಂಚಾಯಿತಿಯಲ್ಲಿ ಮಾರಾಟ ಪ್ರಕ್ರಿಯೆ ಶುರುವಾಗಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಕಾಸು ಕಂಡುಕೊಳ್ಳಲು ಮುಂದಾಗಿವೆ. ಹೊಸ ಗ್ರಾಮಾಡಳಿತ ಅಸ್ತಿತ್ವಕ್ಕೆ ಬಂದ ಮೇಲೆ ಸ್ತ್ರೀಶಕ್ತಿ ಸಂಘಗಳಿಗೆ ತರಬೇತಿ ನೀಡಿ ಅವರಿಗೆ ನಿರ್ವಹಣೆ ಹೊಣೆ ನೀಡುವುದು ಮುಖ್ಯ ಉದ್ದೇಶ.

‘₹4.70 ಲಕ್ಷ ವೆಚ್ಚದಲ್ಲಿ ಕೈದಾಳೆಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗಿದೆ. ಪಂಚಾಯಿತಿ ವ್ಯಾಪ್ತಿಗೆ 8 ಹಳ್ಳಿಗಳು ಬರಲಿದ್ದು, ಒಂದು ಇಲೆಕ್ಟ್ರಿಕಲ್ ವಾಹನದಲ್ಲಿ ಪ್ರತಿ ದಿನಕ್ಕೆ 50ಕ್ಕೆ ಕೆಜಿ ಕಸ ಸಂಗ್ರಹಿಸಲಾಗುತ್ತಿದೆ. ಹಸಿ ಕಸವನ್ನು ಗ್ರಾಮದ ಜನರೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಒಣ ಕಸ ಸಂಗ್ರಹವಾಗಿದ್ದು, ಮಾರಾಟ ಮಾಡಬೇಕಿದೆ’ ಎನ್ನುತ್ತಾರೆ ಪಿಡಿಒ ವಿದ್ಯಾವತಿ ಐ.ಸಿ.

ಕಸ ಕರಗಿಸಲು ಬಯೋ ಮೈನಿಂಗ್

ದಾವಣಗೆರೆ ನಗರದಲ್ಲಿ ಪ್ರತಿದಿನ 170 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 30 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಹಲವು ವರ್ಷಗಳಿಂದ ಸಂಗ್ರಹವಾಗಿರುವ2.30 ಲಕ್ಷ ಟನ್ ತ್ಯಾಜ್ಯ ಆವರಗೊಳ್ಳದಲ್ಲಿ ಬೆಟ್ಟದಂತೆ ನಿಂತಿದೆ. ಈತ್ಯಾಜ್ಯವನ್ನು ಕರಗಿಸಲು ಮಹಾನಗರ ಪಾಲಿಕೆ ಬಯೋ ಮೈನಿಂಗ್ ಮೊರೆಹೋಗಲು ‍ಸಜ್ಜಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

‘ಬಯೊ ಮೈನಿಂಗ್ ಮೂಲಕ ಪ್ರತಿ ದಿನ 1000 ಟನ್ ಕಸ ಸಂಸ್ಕರಣೆಯಾಗಲಿದ್ದು, ಒಂದು ವರ್ಷವಾದ ಮೇಲೆ ಅಲ್ಲಿ ಕಸ ಇರುವುದಿಲ್ಲ. ಇರುವ ಕಸವೂ ಕರಗುತ್ತದೆ. ಹಸಿ ಕಸ ಗೊಬ್ಬರವಾಗುತ್ತದೆ. ಅಲ್ಲಿಯೇ ಪ್ಲಾಸ್ಟಿಕ್ ಕಾರ್ಖಾನೆಗಳಿಗೆ ಹೋಗುತ್ತದೆ’ ಎಂದುಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ತಿಳಿಸಿದರು.

‘ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್, ರಬ್ಬರ್ ಹಾಗೂ ಟೈರ್‌ಗಳನ್ನು ಇಂಧನಗಳ ಬಳಕೆಗೆ ನೀಡಲಾಗುವುದು. ಗೊಬ್ಬರವನ್ನು ರಸ್ತೆಯ ಡಿವೈಡರ್‌ಗಳಲ್ಲಿ ಬೆಳೆಸಿರುವ ಗಾರ್ಡನಿಂಗ್‌ಗೆ ಬಳಸಬಹುದು. ಉಳಿದಿದ್ದನ್ನು ಭೂಮಿಯಲ್ಲೇ ಮಣ್ಣು (ಬಯೊ ಅರ್ಥ್) ಮಾಡಬಹುದು. ಈಗಾಗಲೇ ಟೆಂಡರ್ ಕರೆಯಲಾಗಿದ್ದು, 10 ಮಂದಿ ಮುಂದೆ ಬಂದಿದ್ದಾರೆ’ ಎಂದು ಅವರು ತಿಳಿಸಿದರು.

‘ಯಾವುದೇ ಹಾನಿಯಾಗದಂತೆ ಪರಿಸರಸ್ನೇಹಿಯಾಗಿ ಕಸವನ್ನು ಕರಗಿಸಲಾಗುವುದು ಎಂದು ಹೇಳುತ್ತಾರೆ’ ಮಹಾನಗರ ಪಾಲಿಕೆಯ ಎಇಇ ಜಗದೀಶ್.

500 ಟನ್ ಕಸ ಸಂಸ್ಕರಣೆಗೆ ಸಿದ್ಧತೆ

‘ಪ್ರಸ್ತುತ ಒಂದು ದಿನಕ್ಕೆ 160–170 ಟನ್ ಕಸ ಸಂಗ್ರಹವಾಗುತ್ತಿದ್ದು, ಈ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಅದಕ್ಕಾಗಿಯೇ 500 ಟನ್ ಕಸವನ್ನು ಸಂಸ್ಕರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಸ ಸಂಸ್ಕರಣೆ ಯಂತ್ರ, ಕಟ್ಟಡ ಇನ್ನಿತರೆ ಸಲಕರಣೆಗಳು ಸೇರಿ ₹25 ಕೋಟಿ ವೆಚ್ಚದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿದೆ’ ಎಂದು ವಿಶ್ವನಾಥ್ ಮುದಜ್ಜಿ ತಿಳಿಸಿದರು.

‘ಆವರಗೊಳ್ಳದಲ್ಲಿ 33 ಎಕರೆ ಜಾಗವೂ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಈ ವರ್ಷದ ಕೊನೆಯ ವೇಳೆಗೆ ಕಾಮಗಾರಿ ಮುಗಿಯುತ್ತದೆ. ಈ ಸಂಸ್ಕರಣ ಘಟಕ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಕೈಜೋಡಿಸಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹಣವೂ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು’ ಎಂದರು.

ಕಾಯಕಲ್ಪಕ್ಕೆ ಕಾದಿರುವ ಕಸದ ರಾಶಿ

ಆರ್.ರಾಘವೇಂದ್ರ

ಹರಿಹರ: ನಗರದ ಕಸ ಸಂಗ್ರಹ ಹಾಗೂ ವಿಲೇವಾರಿಯ ಸಮಸ್ಯೆ ಪರಿಹಾರವಾಗುವ ಬದಲು ಬೆಳೆಯುವ ಲಕ್ಷಣಗಳು ಗೋಚರಿಸುತ್ತಿವೆ. ಸಮಸ್ಯೆ ಕಬ್ಬಿಣದ ಕಡಲೆಯಾಗುವ ಮುನ್ನ ಅಧಿಕಾರಿಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅನಿರ್ವಾಯತೆ ಎದುರಾಗಿದೆ.

ನಗರದಲ್ಲಿ ನಿತ್ಯ ಒಣ ಕಸ 12 ಟನ್‍ ಹಾಗೂ ಹಸಿ ಕಸ 18 ಟನ್‍ ಸೇರಿ 30 ಟನ್‍ ಸಂಗ್ರವಾಗುತ್ತಿದ್ದು, ಇದರಲ್ಲಿ ಅಂಗಡಿ ಹಾಗೂ ಮಾರುಕಟ್ಟೆಯ ಪಾಲು ದೊಡ್ಡದು. ಸಂತೆ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದಾಗ ಕಸದ ಸಂಗ್ರಹದ ಪ್ರಮಾಣ 50 ಟನ್‍ಗೂ ಹೆಚ್ಚಾಗುತ್ತದೆ.

ಸಂಗ್ರಹವಾದ ಕಸವನ್ನು ವಿಲೇವಾರಿ ಮಾಡಲು ಶಿವಮೊಗ್ಗ ರಸ್ತೆಯಲ್ಲಿ ನಗರಸಭೆ ಒಡೆತನ 14 ಎಕರೆ ಜಮೀನು ಮೀಸಲಿಡಲಾಗಿದೆ. ಪ್ರಸ್ತುತ ವಿಲೇವಾರಿ ಘಟಕದಲ್ಲಿ 1.20 ಲಕ್ಷ ಟನ್‍ಗಿಂತ ಹೆಚ್ಚು ಕಸದ ಸಂಗ್ರಹವಿದೆ.

ಕಸ ಸಂಸ್ಕರಣೆ ಹಾಗೂ ವಿಲೇವಾರಿಗೆ ಸಂಸ್ಕರಣ ಘಟಕ, ಸ್ಕ್ರೀನಿಂಗ್‍ ಹಾಗೂ ಬೇಲಿಂಗ್‍ ಯಂತ್ರ, ಸಾವಯವ ಗೊಬ್ಬರ ತಯಾರಿಸಲು ಎರೆಹುಳ ಘಟಕವನ್ನು ಸ್ಥಾಪಿಸಲಾಗಿದ್ದರೂ, ಘಟಕಗಳು ಕಾರ್ಯನಿರ್ವಹಿಸದ ಕಾರಣ ಕಸದ ರಾಶಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕದ ಸಂಗತಿ.

‘ಮನೆಯಲ್ಲಿ ಒಣ ಹಾಗೂ ಹಸಿ ಕಸವನ್ನು ವಿಂಗಡಿಸಿ ನೀಡುವದರಿಂದ ಕಸದ ಸಂಸ್ಕರಣೆ ಹಾಗೂ ಪರಿಷ್ಕರಣೆ ಸುಲಭವಾಗುತ್ತದೆ. ಹಸಿ ಕಸವನ್ನು ಗೊಬ್ಬರ ತಯಾರಿಕೆಗೆ ಬಳಸುವ ಮೂಲಕ ಕಸ ಸಂಗ್ರಹಣೆ ತಡೆಗಟ್ಟಬಹುದು’ ಎಂಬುದು ಪರಿಸರ ಎಂಜಿನಿಯರ್ ಮಹೇಶ್‍ ಕೋಡಬಾಳ್‍ ಅವರ ಅಭಿಪ್ರಾಯ.

ಪೌರಾಯುಕ್ತ ಬಿ.ಟಿ. ಉದಯಕುಮಾರ್ ಮಾತನಾಡಿ, ‘ಕಸ ವಿಲೇವಾರಿ ಘಟಕದಲ್ಲಿ ಸಂಸ್ಕರಣೆ ಹಾಗೂ ವಿಂಗಡಿಸಲು ಮಾನವ ಶಕ್ತಿಯ ಕೊರತೆ ಇದೆ. ಕಸ ವಿಲೇವಾರಿಗೆ ನೂತನ ತಂತ್ರಜ್ಞಾನದ ಯೋಜನೆ ರೂಪಿಸಿದ್ದು, ಮಾನವ ಸಂಪನ್ಮೂಲ ಸೇರಿ ಡಿಪಿಆರ್‍ ಸಿದ್ದಗೊಳ್ಳುತ್ತಿದೆ. ಶೀಘ್ರದಲ್ಲಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಕಾರ್ಯಾರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಕಸ ಸಂಗ್ರಹ ಹಾಗೂ ನಿರ್ವಹಣೆ ಸಮಸ್ಯೆ ಜಟಿಲವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು, ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT