ಬುಧವಾರ, ಆಗಸ್ಟ್ 4, 2021
26 °C
ವಾರ್‌ ರೂಂ ನೋಡಿಕೊಂಡ ರವೀಂದ್ರ ಮಲ್ಲಾಪುರ ಮತ್ತು ತಂಡ

ದಾವಣಗೆರೆ | ಸಕಾಲದಲ್ಲಿ ಎಲ್ಲ ದೂರುಗಳ ನಿರ್ವಹಣೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಸಾರ್ವಜನಿಕರ ದೂರು, ವಲಸೆ ಕಾರ್ಮಿಕರ ಸಮಸ್ಯೆ, ಪತ್ರಿಕೆ, ಟಿ.ವಿ.ಗಳಲ್ಲಿ ಬರುವ ವರದಿಗಳ ನಿರ್ವಹಣೆ ಹೀಗೆ ಎಲ್ಲ ದೂರುಗಳನ್ನು ಸರಿಯಾದ ಸಮಯಕ್ಕೆ ನಿರ್ವಹಿಸಿ, ಸಮಸ್ಯೆಗಳು ಉಲ್ಭಣಗೊಳ್ಳದಂತೆ ನೋಡಿಕೊಂಡಿದ್ದೇವೆ’.

ಕೊರೊನಾಕ್ಕೆ ಸಂಬಂಧಿಸಿದಂತೆ ವಾರ್‌ರೂಂ ನಿರ್ವಹಿಸಿದ ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ ಮತ್ತು ತಂಡದ ಸದಸ್ಯರ ಮಾತಿದು.

‘ವಾರ್‌ರೂಂನ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ನನಗೆ ವಹಿಸಿದ್ದರು. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವುದು, ವಲಸೆ ಕಾರ್ಮಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು, ಸ್ವಯಂಸೇವಕರಿಗೆ ತರಬೇತಿ ನೀಡಿ ಅಗತ್ಯ ಇರುವಲ್ಲಿಗೆ ನಿಯೋಜನೆ ಮಾಡುವುದು, ಕೊರೊನಾ ಬಗ್ಗೆ ದಿನಪತ್ರಿಕೆಗಳಲ್ಲು ಬರುವ ವರದಿಗಳನ್ನು ನೋಡಿ ಅದಕ್ಕೆ ಸ್ಪಂದಿಸುವುದು, ದೃಶ್ಯ ಮಾಧ್ಯಮಗಳಲ್ಲಿ ಬರುವ ಕೊರೊನಾ ಸಮಸ್ಯೆಗಳಿಗೆ ಸಂಬಂಧಿಸಿದ ವರದಿಗಳಿಗೆ ಸ್ಪಂದಿಸುವುದು. ಈ ಐದು ಜವಾಬ್ದಾರಿಗಳನ್ನು ನಮಗೆ ನೀಡಲಾಗಿತ್ತು’ ಎಂದು ರವೀಂದ್ರ ಮಲ್ಲಾಪುರ ವಿವರಿಸಿದರು.

‘ಎಡಿಎಲ್‌ಆರ್‌ ಸರೋಜ ಅವರಿಗೆ ದೂರು ಸ್ವೀಕರಿಸುವ ಜವಾಬ್ದಾರಿ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್‌ ಅವರಿಗೆ ಕಾರ್ಮಿಕರ ಸಮಸ್ಯೆ ಹಾಗೂ ಎಡಿಎಲ್‌ಆರ್‌ ಭಾವನಾ ಅವರಿಗೆ ಸ್ವಯಂ ಸೇವಕರ ಜವಾಬ್ದಾರಿಯನ್ನು ವಹಿಸಿದೆ. ಉಳಿದ ಎರಡನ್ನು ನಾನೇ ನಿರ್ವಹಿಸಿದೆ. ಜವಾಬ್ದಾರಿ ಒಬ್ಬೊಬ್ಬರಿಗೆ ಇದ್ದರೂ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿದ್ದೇವೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಡಿಸಿ ಪೂಜಾರ ವೀರಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಸಹಿತ ಎಲ್ಲ ಇಲಾಖೆಯವರು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

‘ರಾಜಸ್ಥಾನಕ್ಕೆ ನಾವು ಹೋಗಬೇಕು ಎಂದು ಒಬ್ಬರು ಕರೆ ಮಾಡಿದ್ದರು. ಲಾಕ್‌ಡೌನ್‌ ಇರುವುದರಿಂದ ಹೋಗುವುದು ಕಷ್ಟ. ಊಟ, ವಸತಿಗೆ ಸಮಸ್ಯೆ ಇದ್ದರೆ ಹೇಳಿ ಅಂದೆವು. ಅಂಥದ್ದೇನಿಲ್ಲ ಎಂದು ಹೇಳಿದರು. ಆದರೂ ಸಂಶಯ ಬಂದು ಅವರ ವಿಳಾಸ ಹುಡುಕಿಕೊಂಡು ನಮ್ಮ ತಂಡ ಹೋಯಿತು. ಅಲ್ಲಿ ಅವರು ಸಂಕಷ್ಟದಲ್ಲಿದ್ದರು. ಅದರೂ ಹೇಳಿಕೊಂಡಿಲ್ಲ. ಅವರಿಗೆ ಆಹಾರದ ಕಿಟ್‌ ನೀಡುವ ವ್ಯವಸ್ಥೆ ಮಾಡಿದೆವು. ಲಾಕ್‌ಡೌನ್ ಮುಗಿದ ಬಳಿಕ ಅವರನ್ನು ರೈಲಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದೆವು’ ಎಂದು ರೇಷ್ಮಾ ಹಾನಗಲ್‌ ವಿವರಿಸಿದರು.

‘ಕೊರೊನಾ ವಿರುದ್ಧ ಕಾರ್ಯಾಚರಣೆ ಮಾಡಲು ಆನ್‌ಲೈನ್‌ ಮೂಲಕ ಸ್ವಯಂ ಸೇವಕರನ್ನು ಕರೆಯಲಾಗಿತ್ತು. ಎನ್‌ಸಿಸಿ, ರೆಡ್‌ಕ್ರಾಸ್‌, ವಿವಿಧ ಎನ್‌ಜಿಒಗಳಿಂದ 100ಕ್ಕೂ ಅಧಿಕ ಮಂದಿ ಬಂದಿದ್ದರು. ಅವರಿಗೆ ಸರ್ವಲೆನ್ಸ್‌ ಮತ್ತು ನಾವು ತರಬೇತಿ ನೀಡಿದೆವು. ಊಟ ವಿತರಣೆ, ಆಹಾರ ಕಿಟ್‌ ವಿತರಣೆ, ದಾನಿಗಳ ಸಂಪರ್ಕ, ಜಾಗೃತಿ ಕಾರ್ಯಕ್ರಮ, ಮಾಸ್ಕ್‌ ವಿತರಣೆ ಹೀಗೆ ಹಲವು ಕಾರ್ಯಕ್ಕೆ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಯಿತು. ವಿವಿಧ ಇಲಾಖೆಗಳಲ್ಲಿ ಎರಡು ವರ್ಷಗಳ ಈಚೆಗೆ ನಿವೃತ್ತರಾದವರ ಪಟ್ಟಿ ಮಾಡಿ ಅಗತ್ಯ ಬಿದ್ದರೆ ಸೇವೆಗೆ ನೀವು ಬರಬೇಕು ಎಂದು ತಿಳಿಸಿದೆವು. ಖಾಸಗಿ ವೈದ್ಯರ ಪಟ್ಟಿ ಮಾಡಿ ಸಂಪರ್ಕಿಸಿದೆವು. ಅಗತ್ಯ ಬೇಕೆಂದು ರಕ್ತದಾನಿಗಳ ವಿವರ ಸಂಗ್ರಹಿಸಿದೆವು’ ಎಂದು ಭಾವನ ಮಾಹಿತಿ ನೀಡಿದರು.

‘ಎಲ್ಲ ದೂರುಗಳಿಗೆ ತಕ್ಷಣ ಸ್ಪಂದಿಸಿದ್ದೇವೆ. ಕೆಲವರು ಸಮಸ್ಯೆ ಹೇಳಿಕೊಳ್ಳಲು ಹಿಂಜರಿದವರನ್ನು ಅವರ ಮಾತಿನಿಂದಲೇ ಪತ್ತೆ ಹಚ್ಚಿದ್ದೇವೆ. ವಲಸೆ ಕಾರ್ಮಿಕರಿಗೆ 10 ಚೌಟ್ರಿಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು’ ಎಂದು ಸರೋಜ ವಿವರ ನೀಡಿದರು.

‘ಮನೆಯಲ್ಲಿ ಅಂತರ’
‘ಮಗ ಅಮೆರಿಕದಲ್ಲಿದ್ದಾನೆ. ಮಗಳು ಅವಳ ಪತಿ ಮನೆಯಲ್ಲಿದ್ದಾಳೆ. ನಾನು, ತಾಯಿ ಮತ್ತು ಪತ್ನಿ ಅಷ್ಟೇ ಮನೆಯಲ್ಲಿದ್ದೇವೆ. ಜಿಲ್ಲಾಧಿಕಾರಿ ಜತೆಗೆ ಕಂಟೈನ್‌ಮೆಂಟ್‌ಗ ವಲಯಕ್ಕೆ ಹೋಗಿ ಬಂದಿದ್ದೆ. ಅದು ಮಾಧ್ಯಮಗಳಲ್ಲಿ ಬಂದಿತ್ತು. ಅದನ್ನು ನೋಡಿ ಸ್ನೇಹಿತರು, ಮನೆಯವರೆಲ್ಲ ಕರೆ ಮಾಡಿ 50 ವರ್ಷ ದಾಟಿದೆ ನಿಂಗೆ ಯಾಕೆ ಹೋದೆ ಎಂದು ಪ್ರಶ್ನಿಸಿದ್ದರು’ ಎಂದು ರವೀಂದ್ರ ಮಲ್ಲಾಪುರ ತಿಳಿಸಿದರು.

‘ಮನೆಯಲ್ಲಿ ಸ್ವಚ್ಛತೆ, ಅಂತರ ಕಾ‍ಪಾಡಿಕೊಂಡೆ ಮನೆಯವರು, ಮಕ್ಕಳ ಜತೆ ಇದ್ದೆ’ ಎಂದು ಸರೋಜಮ್ಮ ಹೇಳಿದರು.

‘ಸಣ್ಣ ಮಗಳಿದ್ದಾಳೆ. ಮನೆಯವರು ಪೊಲೀಸ್‌ ಇಲಾಖೆಯಲ್ಲಿದ್ದಾರೆ. ತೊಂದರೆಯಾಗದಂತೆ ಮನೆ ನಿರ್ವಹಣೆ ಮಾಡಿದ್ದೇವೆ’ ಎಂದು ರೇಷ್ಮಾ ಹಾನಗಲ್‌ ಮನೆಯ ವಿವರ ನೀಡಿದರು.

‘ಎರಡು ವರ್ಷದ ಮಗಳನ್ನು ನಮ್ಮೂರು ಹುಬ್ಬಳ್ಳಿಯಲ್ಲೇ ಬಿಟ್ಟಿದ್ದೇವೆ. ಅರಣ್ಯ ಇಲಾಖೆಯ ಅಧಿಕಾರಿ ಆಗಿರುವ ಮನೆಯವರು ಮತ್ತು ನಾನು ಇಬ್ಬರೇ ಇಲ್ಲಿ ಮನೆಯಲ್ಲಿದ್ದೇವೆ’ ಎಂದು ಭಾವನ ಹೇಳಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು