ಬುಧವಾರ, ಸೆಪ್ಟೆಂಬರ್ 23, 2020
26 °C

ದಾವಣಗೆರೆ: ಉಪಯೋಗಕ್ಕೆ ಬಾರದ ಸೀಲ್‌ಡೌನ್‌

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೊರೊನಾ ಸೋಂಕು ಪತ್ತೆಯಾದ ಕೂಡಲೇ ಸೀಲ್‌ಡೌನ್‌ ಆಗುತ್ತಿಲ್ಲ. ಸೋಂಕಿತರು ಗುಣಮುಖರಾಗಿ ಹೊರಬರುವ ಹೊತ್ತಿಗೆ ಸೀಲ್‌ಡೌನ್ ಮಾಡಲು ಮುಂದಾಗುತ್ತಿರುವುದರಿಂದ ಅದರ ಉಪಯೋಗವೇ ಆಗುತ್ತಿಲ್ಲ. ಈ ಬಗ್ಗೆ ಜನರು, ಜನಪ್ರತಿನಿಧಿಗಳು ಆಕ್ಷೇಪದ ಧ್ವನಿ ಎತ್ತಿದ್ದಾರೆ.

ಕೆ.ಬಿ. ಬಡಾವಣೆಯಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾಗಿ ಬಂದ ಮರುದಿನ ಸೀಲ್‌ಡೌನ್‌ ಮಾಡಲು ಬಂದಿದ್ದರು. ನಿಟುವಳ್ಳಿಯ ವ್ಯಕ್ತಿಗೆ ಕೊರೊನಾ ಬಂದಿತ್ತು. ಸೋಂಕುಮುಕ್ತರಾಗಿದ್ದರಿಂದ ಆಸ್ಪತ್ರೆ ಯಿಂದ ಬಿಡುಗಡೆ ಆಗುವ ದಿನ ಕರೆ ಬಂದಿತ್ತು. ‘ನಿಮ್ಮ ಮನೆ ಸೀಲ್‌ಡೌನ್‌ ಮಾಡಬೇಕು, ವಿಳಾಸ ತಿಳಿಸಿ’ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದರು. ಈ ಕರೆ ಬರುವ ಹೊತ್ತಿಗೆ ಸೋಂಕು ಬಂದು 10 ದಿನಗಳು ದಾಟಿದ್ದವು.

‘ಸೀಲ್‌ಡೌನ್‌ ಮಾಡುವ ಮೂಲಕ ಜನರಲ್ಲಿ ಭೀತಿ ಉಂಟು ಮಾಡಲಾಗುತ್ತಿದೆ. ಮೊದಲು ಸೀಲ್‌ಡೌನ್‌ ಮಾಡುವುದನ್ನು ನಿಲ್ಲಿಸಬೇಕು. ಸೋಂಕು ಬಂದ ವ್ಯಕ್ತಿಗಳು ವಾರದಲ್ಲಿ ಗುಣಮುಖರಾಗುತ್ತಿದ್ದಾರೆ. ಇವರು ಆನಂತರ ಸೀಲ್‌ಡೌನ್‌ ಮಾಡುವ ಅವಶ್ಯಕತೆ ಇಲ್ಲ’ ಎಂಬುದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಅವರ ಅಭಿಪ್ರಾಯ.

‘ಇನ್ಸಿಡೆಂಟ್‌ ಕಮಾಂಡರ್‌ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಹೋಗುತ್ತಿರುವುದೇ ತಡವಾಗುತ್ತಿದೆ. ಹೀಗಾಗಿ ಗುಣಮುಖ ಆದಮೇಲೆ ಬ್ಯಾರಿಕೇಡ್‌ ಹಾಕಲಾಗುತ್ತಿದೆ. ಸರ್ಕಾರದ ನಿಯಮ ವನ್ನೇ ಪಾಲನೆ ಮಾಡುವುದಾದರೆ ಸೋಂಕು ಖಚಿತವಾದ ದಿನವೇ ಸೀಲ್‌ ಮಾಡಲಿ’ ಎನ್ನುತ್ತಾರೆ ಅವರು.

‘ಜಾಲಿನಗರದ ಹಿರಿಯರೊಬ್ಬರಿಗೆ ಕೊರೊನಾ ಟೆಸ್ಟ್‌ ಮಾಡಿ ಮೂರು ದಿನಗಳ ಬಳಿಕ ಪಾಸಿಟಿವ್‌ ಎಂದು ಗೊತ್ತಾಯಿತು. ಮತ್ತೆ ಮೂರು ದಿನ ಆಸ್ಪತ್ರೆಯಲ್ಲಿದ್ದು ಮೃತ
ಪಟ್ಟರು. ಅಂತ್ಯಕ್ರಿಯೆ ಮುಗಿಸಿದ ಬಳಿಕ ತಿಥಿ ಮಾಡುವ ಹೊತ್ತಿಗೆ ಸೀಲ್‌ಡೌನ್‌ ಮಾಡಲು ಪಾಲಿಕೆ ಸಿಬ್ಬಂದಿ ಬಂದರು. ಕೊರೊನಾ ನಿಯಂತ್ರಣಕ್ಕೆ ಸೀಲ್‌ಡೌನ್‌ ಮಾಡುವ ಬದಲು ಸರ್ಕಾರದ ಆದೇಶ ಇದೆ ಎಂದು ಯಾವಾಗಲೋ ಮಾಡಲಾಗುತ್ತಿದೆ‌‌‌‌’ ಎನ್ನುವುದು ಪಾಲಿಕೆಯ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ಅವರ ಆರೋಪ.

ದೊಡ್ಡ ಬಂಗಲೆ, ಕಾಂಪೌಂಡ್‌ ಇರುವ ಪ್ರತ್ಯೇಕ ಮನೆಗಳನ್ನು ಸೀಲ್‌ಡೌನ್‌ ಮಾಡದಿದ್ದರೂ ನಡೆಯುತ್ತದೆ. ಆದರೆ, ಮನೆಗಳು ಅಕ್ಕಪಕ್ಕದಲ್ಲೇ ಇರುವ, ಮಳಿಗೆ ಮೇಲೆ ಮಳಿಗೆ ಕಟ್ಟಿರುವ ಮನೆಗಳಿರುವ ಪ್ರದೇಶಗಳಲ್ಲಿ, ಸ್ಲಂಗಳಲ್ಲಿ ಸೋಂಕು ಕಂಡರೆ ಸೀಲ್‌ಡೌನ್‌ ಮಾಡಬೇಕು. ಇಲ್ಲದೇ ಇದ್ದರೆ ಜನರ ಓಡಾಟ ನಿಲ್ಲುವುದಿಲ್ಲ. ಆದರೆ, ಈಗಿನ ತರಹ ಮಾಡಿದರೆ ಪ್ರಯೋಜನವಿಲ್ಲ. ಸೋಂಕು ಪತ್ತೆಯಾದಾಗಲೇ ಆ ಮನೆ ಮತ್ತು ಅಕ್ಕ–ಪಕ್ಕ 30 ಅಡಿಯಷ್ಟು ಪ್ರದೇಶವನ್ನು ಸೀಲ್‌ಡೌನ್‌ ಮಾಡಬೇಕು’ ಎನ್ನುವುದು ಅವರ ಸಲಹೆ.

‘ಬುಲೆಟಿನ್‌ನಲ್ಲಿ ಅಧಿಕೃತವಾಗಿ ಘೋಷಣೆಯಾದ ಬಳಿಕ ಜಿಲ್ಲಾಧಿಕಾರಿ ನೋಟಿಫಿಕೇಷನ್‌ ಹೊರಡಿಸುತ್ತಾರೆ. ಆಮೇಲೆ ಪಾಲಿಕೆಗೆ ಮಾಹಿತಿ ಬರುತ್ತದೆ. ಮಾಹಿತಿ ಬಂದ ದಿನ ಅಥವಾ ಮರುದಿನ ಸೀಲ್‌ಡೌನ್‌ ಮಾಡುತ್ತೇವೆ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ವಿವರಿಸಿದರು.

‘ಸೀಲ್‌ಡೌನ್‌ ಬೇಡ ಎಂದು ನಾವು ನಿರ್ಧಾರ ಮಾಡಲಾಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಆಗಬೇಕಾಗದ ತೀರ್ಮಾನ ಅದು. ನಿಯಾಮವಳಿ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ನೋಟಿಫಿಕೇಶನ್‌ ಹೊರಡಿಸಿದ ತಕ್ಷಣ ಆಯ ಸ್ಥಳೀಯಾಡಳಿತಗಳು ಸೀಲ್‌ಡೌನ್‌ ಮಾಡುತ್ತವೆ. ಪ್ರಕರಣಗಳು ಹೆಚ್ಚಿದ್ದರಿಂದ ಕೆಲವು ಕಡೆ ಸ್ವಲ್ಪ ತಡವಾಗಿರಬಹುದು. ಮುಂದೆ ಹಾಗಾಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕಂಟೈನ್‌ಮೆಂಟ್‌ ವಲಯಗಳನ್ನು ಮಾಡ ಲಾಗಿದೆ. 300ಕ್ಕೂ ಅಧಿಕ ಸಕ್ರಿಯ ವಲಯ ಗಳಿವೆ. ಈ ರೋಗವನ್ನು ಸಾಮಾಜಿಕ ಪಿಡುಗು ಎಂದಾಗಲೀ, ರೋಗ ನಿಯಂತ್ರಣಕ್ಕೆ ಕೈಗೊಳ್ಳುವ ಕಾರ್ಯವನ್ನು ಅಸಹ್ಯ ಎಂದಾಗಲೀ ಜನ ತಿಳಿಯಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಬ್ಯಾರಿಕೇಡ್‌ಗೇ ಕೋಟ್ಯಂತರ ವೆಚ್ಚ!

ಸೀಲ್‌ಡೌನ್‌ ಮಾಡಿ ಬ್ಯಾರಿಕೇಡ್‌ ಹಾಕು ವವರಿಗೆ ಈವರೆಗೆ ₹ 3 ಕೋಟಿಗೂ ಅಧಿಕ ಹಣ ಪಾವತಿಯಾಗಿದೆ. ಅದಕ್ಕಿಂತ ಕೆಲವೇ ಲಕ್ಷಗಳಿಗೆ ಜಿಲ್ಲಾಡಳಿತ ಇಲ್ಲವೇ ಪಾಲಿಕೆಯೇ ಬ್ಯಾರಿಕೇಡ್‌ ಖರೀದಿಸಬಹುದಿತ್ತು ಎಂದು ಎ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೀಲ್‌ಡೌನ್‌ಗೆ ಮಾಡುವ ಹಣ ಆಸ್ಪತ್ರೆಗೆ ವೆಚ್ಚ ಮಾಡಿ

‘ಒಂದು ಮನೆಗೆ ಬ್ಯಾರಿಕೇಡ್‌ ಹಾಕಿ 14 ದಿನ ಇಟ್ಟು ತೆಗೆದುಕೊಂಡು ಹೋಗುವ ಹೊತ್ತಿಗೆ ಬ್ಯಾರಿಕೇಡ್‌ ಹಾಕಿದವರಿಗೆ ₹ 60 ಸಾವಿರಕ್ಕೂ ಅಧಿಕ ಹಣ ನೀಡಬೇಕಾಗುತ್ತದೆ. ಈ ರೀತಿ ವ್ಯರ್ಥ ವೆಚ್ಚ ಮಾಡುವ ಬದಲು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಹೆಚ್ಚು ಮಾಡಲು, ಆಕ್ಸಿಜನ್‌ ನೀಡಲು, ಇನ್ನಿತರ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಸಲಹೆ ನೀಡಿದ್ದಾರೆ.

ಕೊರೊನಾ ಇವತ್ತಿಷ್ಟು ಎಂದು ಅಂಕಿ–ಅಂಶ ನೀಡುವುದನ್ನು ನಿಲ್ಲಿಸಬೇಕು. ಮೊಬೈಲ್‌ಗೆ ಕರೆ ಮಾಡಿದಾಗ ಕೊರೊನಾ ರಿಂಗ್‌ಟೋನ್‌ ಕೇಳಿಸುವುದನ್ನು ರದ್ದು ಮಾಡಬೇಕು. ಅಧಿಕಾರಿಗಳು, ಎಲ್ಲ ಪಕ್ಷಗಳ ರಾಜಕಾರಣಿಗಳು ಕೊರೊನಾ ಬಗ್ಗೆ ಹೆದರಿಕೆ ಮೂಡಿಸುವುದನ್ನು ಬಿಡಬೇಕು ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು