ಬುಧವಾರ, ಆಗಸ್ಟ್ 10, 2022
25 °C

ಯುಪಿಎಸ್‌ಸಿ: ದಾವಣಗೆರೆಯ ಅವಿನಾಶ್‌ಗೆ ಮೊದಲ ಪ್ರಯತ್ನದಲ್ಲೇ 31ನೇ ರ‍್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ದಾವಣಗೆರೆಯ ಅವಿನಾಶ್‌ ವಿ. ಅವರು ಮೊದಲ ಪ್ರಯತ್ನದಲ್ಲೇ 31ನೇ ರ‍್ಯಾಂಕ್‌ ಗಳಿಸಿದ್ದು, ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಅವಿನಾಶ್‌ ಅವರು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್‌’ ಕೋಚಿಂಗ್‌ ಸೆಂಟರ್‌ನಲ್ಲಿ ಒಂದು ವರ್ಷ ತರಬೇತಿ ಪಡೆದು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಮೊದಲ ಪ್ರಯತ್ನದಲ್ಲೇ 31ನೇ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಜನತಾ ಲಾಡ್ಜ್‌, ಜನತಾ ಡಿಲಕ್ಸ್‌, ಆನಂದ ರೆಸಿಡೆನ್ಸಿ ಮಾಲೀಕರಾದ ವಿಠಲರಾವ್‌ ಅವರ ಮಗನಾಗಿರುವ ಅವಿನಾಶ್‌ ಅವರು ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ, ತೋಳಹುಣಸೆಯ ಪಿಎಸ್‌ಎಸ್‌ಇಎಂಆರ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದರು. ಧವನ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯು ಮುಗಿಸಿದ್ದರು. ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯಲ್ಲಿ 2020ರಲ್ಲಿ ಐದು ವರ್ಷಗಳ ಕಾನೂನು ಪದವಿಯನ್ನು ಪಡೆದಿದ್ದರು.

‘ಕಾನೂನು ಪದವಿ ಪಡೆಯುತ್ತಿದ್ದಾಗ ವಿದೇಶಾಂಗ ಸಚಿವಾಲಯದಲ್ಲಿ ಇಂಟರ್ನಿಯಾಗಿ ಕೆಲಸ ಮಾಡಿದ್ದೆ. ಆಗ ಐಎಫ್‌ಎಸ್‌ ಮಾಡಬೇಕು ಎಂಬ ಕನಸು ಹುಟ್ಟಿತು. ಅದಕ್ಕಾಗಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೇನೆ. 80 ರ‍್ಯಾಂಕ್‌ಗಳ ಒಳಗೆ ಇದ್ದರೆ ಐಎಫ್‌ಎಸ್‌ ಆಯ್ಕೆ ಮಾಡಲು ಅವಕಾಶ ಇದೆ. ಹಾಗಾಗಿ ನನ್ನ ಕನಸು ನನಸಾಗುತ್ತಿದೆ’ ಎಂದು ಅವಿನಾಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: 

‘ಯಾವ ರ‍್ಯಾಂಕ್‌ ಬರಬಹುದು ಎಂಬುದು ಅಂದಾಜು ಇರಲಿಲ್ಲ. ಅದಕ್ಕಾಗಿ ಈ ವರ್ಷವೂ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿದ್ದೆ. ‘ಇನ್‌ಸೈಟ್ಸ್‌ ಐಎಎಸ್‌’ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿಯನ್ನೂ ತೆಗೆದುಕೊಂಡಿದ್ದೆ. ಜೂನ್‌ 5ಕ್ಕೆ ಪ್ರಿಲಿಮಿನರಿ ಪರೀಕ್ಷೆ ಇತ್ತು. ಈಗ 31ನೇ ರ‍್ಯಾಂಕ್‌ ಬಂದಿರುವುದರಿಂದ ಮತ್ತೆ ಪರೀಕ್ಷೆ ಬರೆಯುವ ಪ್ರಶ್ನೆ ಇಲ್ಲ’ ಎಂದು ತಿಳಿಸಿದರು.

ಫಲಿತಾಂಶ ಪ್ರಕಟಗೊಂಡ ಬಳಿಕ ಅವಿನಾಶ್‌ ಅವರ ಅಜ್ಜ ಆನಂದರಾವ್‌, ತಂದೆ, ತಾಯಿ ಸ್ಮಿತಾ, ಅವಿನಾಶ್‌ ಜತೆಗೆ ಅವಳಿಯಾಗಿ ಹುಟ್ಟಿರುವ ಅರ್ಪಿತಾ, ದೊಡ್ಡಪ್ಪ ನಾಗರಾಜ ರಾವ್ ಅವರು ದಾವಣಗೆರೆಯಲ್ಲಿ ಸಂಭ್ರಮಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು