ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ| ನಿರ್ಲಕ್ಷ್ಯಕ್ಕೆ ಒಳಗಾಗಿರುವ ಉರ್ದು ಶಾಲೆ

ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗುವ ಶಾಲೆಯ ಆವರಣ
Last Updated 7 ಫೆಬ್ರುವರಿ 2023, 3:04 IST
ಅಕ್ಷರ ಗಾತ್ರ

ಬಸವಾಪಟ್ಟಣ: 109 ವರ್ಷಗಳ ಹಿಂದೆ (1913) ಆರಂಭವಾಗಿರುವ ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯು ಸರ್ಕಾರ ಹಾಗೂ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಮುಸ್ಲಿಂ ಸಮುದಾಯದವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಪ್ರೇಮಿಗಳು, ಬುದ್ಧಿಜೀವಿಗಳು ಇಲ್ಲಿನ ಮುಖ್ಯರಸ್ತೆಯ ಪಕ್ಕದ ವಿಶಾಲವಾದ ನಿವೇಶನದಲ್ಲಿ ನಿರ್ಮಿಸಿದ ಈ ಹಿರಿಯ ಪ್ರಾಥಮಿಕ ಶಾಲೆಇದುವರೆಗೆ ಬಸವಾಪಟ್ಟಣ ಹಾಗೂ ಸುತ್ತಲಿನ ಹಲವಾರು ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದೆ.

‘ನಾವು ಖಾಸಗಿ ಶಾಲೆಗಳ ಪ್ರಬಲ ಪೈಪೋಟಿ ನಡುವೆಯೂ ಮನೆಮನೆಗೆ ಭೇಟಿ ನೀಡಿ ಮಕ್ಕಳನ್ನು ಕರೆ ತಂದಿದ್ದೇವೆ. ಯಾವ ಮಕ್ಕಳೂ ಶಾಲೆ ಬಿಡದಂತೆ ನೋಡಿ ಕೊಂಡಿದ್ದೇವೆ. 117 ವಿದ್ಯಾರ್ಥಿಗಳಲ್ಲಿ 60 ಜನ ವಿದ್ಯಾರ್ಥಿನಿಯರೇ ಇದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್‌, ಕುಡಿಯುವ ನೀರು ಬಿಟ್ಟರೆ ಯಾವುದೇ ಮೂಲಸೌಲಭ್ಯಗಳಿಲ್ಲ. ಇರುವ ಆರು ಕೊಠಡಿಗಳಲ್ಲಿ ಮೂರು ಮಾತ್ರ ಸುಸ್ಥಿತಿಯಲ್ಲಿವೆ. ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಇಲ್ಲಿರುವ ಒಂದೇ ಶೌಚಾಲಯ ಬಳಸಲು ಬಾರದಂತಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮನ್ಸೂರ್‌ ದೂರಿದ್ದಾರೆ.

‘ಶಾಲೆಯ ಆವರಣದ ವಿಶಾಲವಾದ ಆಟದ ಮೈದಾನದಲ್ಲಿ 15 ವರ್ಷಗಳ ಹಿಂದೆ ಉರ್ದು ಪ್ರೌಢಶಾಲೆ ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಜಾಗವೇ ಇಲ್ಲದಂತಾಗಿದೆ. ಅಲ್ಲದೆ, ಶಾಲೆಯ ಆವರಣ ಕಲ್ಲು ಮಣ್ಣಿನಿಂದ ಕೂಡಿದ್ದು, ವಿದ್ಯಾರ್ಥಿಗಳು ಸಹಜವಾಗಿ ಓಡಾಡುವಂತಿಲ್ಲ. ಶಾಲೆಗೆ ಕಾಂಪೌಂಡ್‌ ಇಲ್ಲದ ಕಾರಣ ಸಾರ್ವಜನಿಕರು ಹಗಲು, ರಾತ್ರಿ ಶಾಲೆಯ ಆವರಣದಲ್ಲಿ ಓಡಾಡುವುದರಿಂದ ಪಾಠ ಪ್ರವಚನಕ್ಕೆ ಅಡ್ಡಿಯಾಗಿದೆ. ಮಳೆಗಾಲದಲ್ಲಿ ಶಾಲೆಯ ಆವರಣದ ಕೆಸರಿನ ಗದ್ದೆಯಾಗುತ್ತದೆ. ಕೊಠಡಿಗಳಿಗೂ ಮಳೆ ನೀರು ನುಗ್ಗುತ್ತದೆ’ ಎಂದು ಅವರು ವಿವರಿಸಿದರು.

‘ಈಗ ಏಳು ತರಗತಿಗಳಿಗೆ ಕೇವಲ ನಾಲ್ವರು ಶಿಕ್ಷಕರಿದ್ದಾರೆ. ಅವರಲ್ಲಿ ಬಹುದಿನಗಳಿಂದ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಹೆಚ್ಚುವರಿ ಎಂದು ಗುರುತಿಸಿ ಬೇರೆಡೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಮುಖ್ಯ ಶಿಕ್ಷಕರು ಮತ್ತು ಒಬ್ಬ ಸಹ ಶಿಕ್ಷಕರ ಹುದ್ದೆ ಖಾಲಿ ಇದೆ. ಶಾಲೆಗೆ ಇಬ್ಬರು ಶಿಕ್ಷಕರು, ವಿಜ್ಞಾನ ಉಪಕರಣಗಳು, ಭೂಪಟಗಳು, ಗ್ಲೋಬ್‌, ಕಂಪ್ಯೂಟರ್‌, ಆಟದ ಪರಿಕರಗಳು, ಗ್ರಂಥಾಲಯಕ್ಕೆ ಕನ್ನಡ, ಉರ್ದು ಮತ್ತು ಇಂಗ್ಲಿಷ್‌ ಪುಸ್ತಕಗಳು, ನಲಿ– ಕಲಿ ಕೊಠಡಿಗೆ ಪೀಠೋಪಕರಣಗಳು, ಕಾಂಪೌಂಡ್‌, ಗೇಟ್‌ ಅಗತ್ಯವಾಗಿವೆ. ಶಿಕ್ಷಣ ಇಲಾಖೆ ಇವುಗಳನ್ನು ಪೂರೈಸಬೇಕು. ಎಸ್‌ಡಿಎಂಸಿ ಹಾಗೂ ಪಾಲಕರು ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಅಗತ್ಯ ಸೌಲಭ್ಯ ಪಡೆಯಲು ಶ್ರಮಿಸುವಂತೆ ಕೇಳುತ್ತಿದ್ದೇವೆ. ಹಲವರು ದೇಣಿಗೆ ನೀಡಿದ್ದಾರೆ. ಇಲ್ಲೂ ಕೆಲವು ಸೌಲಭ್ಯಗಳ ಅವಶ್ಯಕತೆ ಇದೆ. ಶತಮಾನ ಕಂಡ ಶಾಲೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

.....

ಖಾಸಗಿ ಶಾಲೆಗಳಲ್ಲಿರುವಂತೆ ಸೌಲಭ್ಯ ಒದಗಿಸಿದರೆ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಾರೆ.

-ಹಬೀಬಾ ನುಸ್ರತ್‌ ಬಾನು, ಪ್ರಭಾರ ಮುಖ್ಯಶಿಕ್ಷಕಿ

...............

ಗ್ರಾಮದಲ್ಲಿ ಶತಮಾನ ಕಂಡ ಶಾಲೆ ಇರುವುದು ನಮಗೆ ಹೆಮ್ಮೆ. ಗ್ರಾಮ ಪಂಚಾಯಿತಿಯಿಂದ ಶಾಲೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

-ಸೈಯದ್‌ ರಫೀಕ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT