ಹರಿಹರ: ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಆದೇಶದಂತೆ ನಗರದ ದೊಡ್ಡಿಬೀದಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಸೇರಿದ ಜಾಗದಲ್ಲಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದರೆನ್ನಲಾದ ವಾಣಿಜ್ಯ ಮಳಿಗೆಗಳನ್ನು ಅಧಿಕಾರಿಗಳು ಮಂಗಳವಾರ ಸ್ವಾಧೀನ ಪಡಿಸಿಕೊಂಡರು.
ಮಂಗಳವಾರ ಬೆಳಿಗ್ಗೆ 9ಕ್ಕೆ ದೊಡ್ಡಿಬೀದಿಯ ಗರಡಿಮನೆಯ ಅಕ್ಕಪಕ್ಕದಲ್ಲಿ ನಿರ್ಮಿಸಿದ್ದ 11 ಮಳಿಗೆಗಳಿಗೆ ಅಧಿಕಾರಿಗಳ ತಂಡ ಬೀಗ ಹಾಕಿ ಆರೋಗ್ಯ ಇಲಾಖೆ ಸುಪರ್ದಿಗೆ ವಹಿಸಿದರು.
ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದನ್ನು ಪ್ರಶ್ನಿಸಿ ಆರೋಗ್ಯ ಇಲಾಖೆ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಕೆಲವು ವರ್ಷಗಳ ಕಾಲ ವಿಚಾರಣೆ ನಡೆದ ನಂತರ 2021ರಲ್ಲಿ ಪ್ರಕರಣವನ್ನು ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಆರೋಗ್ಯ ಇಲಾಖೆಗೆ ಸೇರಿದ 2.25 ಎಕರೆ ಜಮೀನಿನಲ್ಲಿ ಎರಡೂವರೆ ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ದಾವೆ ಹೂಡಲಾಗಿತ್ತು. ಈಗ ಆ ಜಾಗವನ್ನು ಜುಲೈ 18, 2024ರ ನ್ಯಾಯಾಲಯದ ಆದೇಶದ ಪ್ರಕಾರ ಸ್ವಾಧೀನ ಮಾಡಿಕೊಳ್ಳಲಾಯಿತು. ಮುಂಚೆಯೇ ವಿಷಯ ತಿಳಿದಿದ್ದ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಮಳಿಗೆಗಳಿಂದ ಸಾಗಿಸಿದ್ದರು. ಕೆಲವು ಮಳಿಗೆಗಳಲ್ಲಿದ್ದ ವಸ್ತುಗಳನ್ನು ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಹೊರಕ್ಕೆ ಸಾಗಿಸಿದರು.
ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಗುರುಬಸವರಾಜ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಹನುಮನಾಯ್ಕ, ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಟಿ, ನಗರಠಾಣೆ ಪಿಎಸ್‌ಐ ಶ್ರೀಪತಿ ಗಿನ್ನಿ, ಕಂದಾಯ ಅಧಿಕಾರಿ ರಮೇಶ್, ಹಿರಿಯ ಆರೋಗ್ಯಾಧಿಕಾರಿ ಸಂತೋಷ್ ನಾಯ್ಕ ಹಾಗೂ ಸಿಬ್ಬಂದಿ ಇದ್ದರು.