ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಜಿಲ್ಲೆಗಾದ ತಾರತಮ್ಯದ ಬಗ್ಗೆ ಸಿಎಂ ಜತೆ ಚರ್ಚೆ

ಕೋವಿಡ್‌ ನಿಯಂತ್ರಣ ಕ್ರಮಗಳ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ
Last Updated 2 ಜೂನ್ 2021, 3:13 IST
ಅಕ್ಷರ ಗಾತ್ರ

ದಾವಣಗೆರೆ: ‘ಚಿತ್ರದುರ್ಗ ಜಿಲ್ಲೆಗೆ ಅಧಿಕ ಲಸಿಕೆ ಬಂದಿದೆ. ದಾವಣಗೆರೆ ಜಿಲ್ಲೆಗೆ ಕಡಿಮೆ ಪೂರೈಕೆಯಾಗಿದೆ ಎಂಬ ಮಾಹಿತಿ ಇದೆ. ಈ ತಾರತಮ್ಯದ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ. ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಪೂರೈಕೆಯನ್ನು ಮಾಡಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿ-ಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.‌

‘ಜಿಲ್ಲೆಗೆ ಇಂದು 9 ಸಾವಿರ ಕೋವಿಶೀಲ್ಡ್‌, 8 ಸಾವಿರ ಕೊವಾಕ್ಸಿನ್‌ ಡೋಸ್‌ಗಳು ಬಂದಿವೆ. ಇದು ಜಿಲ್ಲೆಗೆ ಸಾಕಾಗಲ್ಲ. ಕರ್ನಾಟಕ ಸರ್ಕಾರವು ರಾಜ್ಯಕ್ಕೆ 3 ಕೋಟಿ ಲಸಿಕೆಗಾಗಿ ಕರೆದಿದ್ದ ಟೆಂಡರ್‌ ರದ್ದಾಗಿದೆ. ಕಂಪನಿಗಳಿಂದ ನೇರ ಖರೀದಿ ಮಾಡಲು ಕ್ರಮ ವಹಿಸುವುದಾಗಿ ಉಪ ಮುಖ್ಯಮಂತ್ರಿ ಅಶ್ವಥನಾರಾಯಣ ಅವರು ಹೇಳಿದ್ದಾರೆ. ನಮ್ಮ ಜಿಲ್ಲೆಗೆ ಬೇಕಾಗಿರುವ ಲಸಿಕೆ ಬಗ್ಗೆ ಚರ್ಚಿಸಿ ಲಸಿಕೆ ಒದಗಿಸಲು ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಆಮ್ಲಜನಕ ಬೆಡ್‌ಗಳನ್ನು ಒದಗಿಸಬೇಕು ಎಂದು ಶಾಸಕ ಪ್ರೊ. ಲಿಂಗಣ್ಣ ಮನವಿ ಮಾಡಿದರು. ‘ಆಮ್ಲಜನಕ ಬೆಡ್‌ಗೆ ಕ್ರಮ ವಹಿಸಲಾಗುವುದು. ಮುಂದಿನ ವಾರ ಬರುವಾಗ ನಿಮ್ಮ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯನ್ನು ಉದ್ಘಾಟಿಸಿಯೇ ಬರುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

2068 ಜನ ಹೋಂ ಐಸೋಲೇಷನ್‍ನಲ್ಲಿದ್ದು, 2246 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ ತಿಂಗಳೊಂದರಲ್ಲೇ 16304 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಎರಡನೇ ಅಲೆಯಲ್ಲಿ ಅಂದರೆ ಏಪ್ರಿಲ್‍ನಿಂದ ಈವರೆಗೆ 92 ಮರಣ ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿದರು.

ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು ಎಂದು ಕಳೆದ ಬಾರಿ ಕೈಗೊಂಡ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಮತ್ತೆ ಯಾಕೆ ಹೋಂ ಐಸೊಲೇಶನ್‌ನಲ್ಲಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಎಲ್ಲರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಲಾಗುತ್ತಿದೆ. ಕೋವಿಡ್‌ ಬಂದು ಹೋಂ ಐಸೊಲೇಶನ್‌ನಲ್ಲಿ ಇದ್ದು, ಅವಧಿ ಮುಗಿಯುತ್ತ ಬಂದವರನ್ನು ಕರೆತಂದಿಲ್ಲ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಅಗತ್ಯ ಚಿಕಿತ್ಸೆ ಹಾಗೂ ಗುಣಮಟ್ಟದ ಊಟ ನೀಡಲಾಗುತ್ತಿದೆ. ಅಲ್ಲದೆ ಇಲ್ಲಿಗೆ ದೈಹಿಕ ಶಿಕ್ಷಣ ಹಾಗೂ ಯೋಗ ಶಿಕ್ಷಣ ನೀಡುವುದರ ಜೊತೆಗೆ ಸೌಲಭ್ಯ ಇರುವ ಕಡೆಗಳಲ್ಲಿ ಟಿ.ವಿ. ಸಂಪರ್ಕ ಕಲ್ಪಿಸಿ, ಮನರಂಜನೆಗೂ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟನೆ ನೀಡಿದರು.

ಮನೆಯಲ್ಲಿ ನೀಡುವ ಊಟ, ಉಪಾಹಾರಕ್ಕಿಂತ ಅಧಿಕ ಗುಣಮಟ್ಟದ ಆಹಾರವನ್ನು ಸಿಸಿಸಿಗಳಲ್ಲಿ ಒದಗಿಸಬೇಕು. ಸ್ವಚ್ಛತೆ, ವೈದ್ಯಕೀಯ ನೆರವುಗಳಲ್ಲಿ ಕೊರತೆಯಾಗಬಾರದು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ. ಸೋಂಕಿತ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವುದು, ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕಾರ್ಯಪಡೆಗಳು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ವಾರ 1815 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದರು, ಇದೀಗ 739 ಜನ ಮಾತ್ರ ಇದ್ದಾರೆ, ಉಳಿದವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಸ್ಯಾನಿಟೈಸ್ ಕೂಡ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ಬಿ. ದಾನಮ್ಮನವರ್‌ ವಿವರ ನೀಡಿದರು.

ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರೂ ಇದ್ದರು.

15ರವರೆಗೆ ಲಾಕ್‌ಡೌನ್‌ ವಿಸ್ತರಿಸಲು ಕ್ರಮ

ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ವಿಸ್ತರಣೆ ಮಾಡಬೇಕು ಎಂಬ ಒತ್ತಾಯ ಇದೆ. ಅದಕ್ಕಾಗಿ ಜಿಲ್ಲೆಯಲ್ಲಿ ಜೂನ್‌ 15ರವರೆಗೆ ಲಾಕ್‌ಡೌನ್‌ ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಕಠಿಣ ಲಾಕ್‌ಡೌನ್‌ ಜಾರಿ ಮಾಡಬೇಕು. 3ನೇ ಅಲೆಯನ್ನು ಎದುರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.‍ಪಿ. ರೇಣುಕಾಚಾರ್ಯ, ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷ‍ಪ್ಪ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೂ ಕಠಿಣ ಲಾಕ್‌ಡೌನ್‌ ಜಿಲ್ಲೆಗೆ ಅಗತ್ಯ ಇದೆ. ಯಾರೂ ಅನಗತ್ಯವಾಗಿ ಓಡಾಡಬಾರದು. ಓಡಾಡಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

3 ನೇ ಅಲೆ ತಡೆಗಟ್ಟಲು ಮುಂದಿನ ಸಭೆ

3ನೇ ಅಲೆ ಮಕ್ಕಳಿಗೆ ಹೆಚ್ಚು ತೊಂದರೆಕೊಡಲಿದೆ. ಈ ಬಗ್ಗೆ ಮುಂಜಾಗರೂಕತೆ ಕ್ರಮ ಕೈಗೊಳ್ಳುವಂತೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ಮುಂದಿನವಾರ ಈ ಬಗ್ಗೆಯೇ ಸಭೆ ಮಾಡಲಾಗುವುದು. ಜಿಲ್ಲೆಯಲ್ಲಿರುವ ಮಕ್ಕಳ ತಜ್ಞ ವೈದ್ಯರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕು. ವೈದ್ಯರ ಸಲಹೆ ಮೇರೆಗೆ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಬೈರತಿ ಬಸವರಾಜ ತಿಳಿಸಿದರು.

ರಾಗಿ, ಭತ್ತಕ್ಕೆ ಕ್ರಮ ವಹಿಸಿ: ಸಿದ್ದೇಶ್ವರ

‘ರಾಗಿ ಬೆಳೆಗಾರರಿಗೆ ಹಣ ಪಾವತಿಯಾಗಿಲ್ಲ. ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದರು.

‘ಈ ಬಗ್ಗೆ ಮೇಲಧಿಕಾರಿಗಳ ಜತೆಗೆ ಮಾತನಾಡಿದ್ದೇನೆ. ಕ್ರಮ ವಹಿಸುವುದಾಗಿ ಮೇಲಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT