ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳು ಧರ್ಮ ಜಾಗೃತಿಗೆ ಪ್ರೇರಣೆಯಾಗಲಿ: ಆರ್.ಪಿ. ರವಿಶಂಕರ್

ರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್
Published 8 ಜನವರಿ 2024, 6:06 IST
Last Updated 8 ಜನವರಿ 2024, 6:06 IST
ಅಕ್ಷರ ಗಾತ್ರ

ದಾವಣಗೆರೆ: ‘ದೇವಾಲಯಗಳು ಧರ್ಮಜಾಗೃತಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ರಾಜ್ಯದಲ್ಲಿರುವ 232 ವಾಸವಿ ದೇವಾಲಯಗಳು ಏಕರೂಪ ಪೂಜೆ ಮಾಡುವ ಮೂಲಕ ಸೌಹಾರ್ದ ಕಾಪಾಡಬೇಕು’ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದರು.

ಕರ್ನಾಟಕ ಶ್ರೀ ವಾಸವಿ ದೇವಾಲಯಗಳ ಒಕ್ಕೂಟ ಹಾಗೂ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ವಾಸವಿ ದೇವಾಲಯಗಳ ಪ್ರಥಮ ಮಹಾಅಧಿವೇಶನದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

‘ವಾಸವಿ ದೇವಾಲಯಗಳು ಆರ್ಯ ವೈಶ್ಯ ಜಾತಿಗೆ ಸೀಮಿತವಾಗದೇ ಎಲ್ಲಾ ಜಾತಿಯನ್ನು ಒಳಗೊಳ್ಳುವ ಮೂಲಕ, ಧರ್ಮ ಜಾಗೃತಿಗೆ ಪ್ರೇರಣೆ ನೀಡಬೇಕು. ವಾಸವಿ ಜಯಂತಿ, ದಸರಾ ಕಾರ್ಯಕ್ರಮಕ್ಕಷ್ಟೇ ಸೀಮಿವಾಗದೆ ವರ್ಷಕ್ಕೆ ಮೂರು ಸೇವಾ ಕಾರ್ಯಗಳನ್ನು ಮಾಡುವ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಾವು ದೇವಾಲಯಗಳನ್ನು ಅಭಿವೃದ್ಧಿಪಡಿಸಿದ ಮೇಲೆ ಸರ್ಕಾರ ಅವುಗಳ ಮೇಲೆ ಕಣ್ಣಿಟ್ಟರೆ, ಆ ಕಣ್ಣನ್ನು ಚುಚ್ಚಿ ದೇವಾಲಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಲಿಷ್ಠರಾಗಬೇಕು. ರಾಜ್ಯದಲ್ಲಿ 1.30 ಲಕ್ಷ ದೇವಾಲಯಗಳು ಇದ್ದು, ಈ ಪೈಕಿ 34,000 ದೇವಾಲಯಗಳು ಮುಜರಾಯಿ ಇಲಾಖೆಯ ಅಧೀನದಲ್ಲಿವೆ. ಆದರೆ ಯಾವ ದೇವಾಲಯಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದರು. 

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ‘ದೇವಾಲಯಗಳು ಸೇವಾಲಯಗಳು ಆಗಬೇಕು. ಸರ್ಕಾರದ ಯೋಜನೆಗಳನ್ನು ದೇವಾಲಯಗಳಿಗೆ ತಲುಪಿಸಬೇಕು. ನಮ್ಮ ಸಮಾಜವು ತೆರಿಗೆ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದು, ಅನುದಾನ ಪಡೆಯುವಲ್ಲಿ ಹಿಂದೆ ಬೀಳಬಾರದು. ದೇವಸ್ಥಾನಗಳಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಅನುದಾನ ತರಲು ಪ್ರಯತ್ನಿಸುತ್ತೇನೆ’ಎಂದರು.

‘ಹುಂಡಿಗಳಿಂದ ನಿರ್ವಹಣೆಗೆ ಹಣ ಬರುವುದು ಕಷ್ಟವಾಗಿದ್ದು, ದೇವಾಲಯಕ್ಕೆ ಶಾಶ್ವತ ಆದಾಯದ ಮೂಲವನ್ನು ಕಂಡುಕೊಳ್ಳಬೇಕು. ದೇವಾಲಯಕ್ಕೆ ಬರುವ ಭಕ್ತರಿಗೆ ಪೂರಕ ವಾತಾವರಣ ಕಲ್ಪಿಸುವುದರ ಜೊತೆಗೆ ಯುವಕರನ್ನು ಪ್ರೇರೇಪಿಸಬೇಕು. ಸಂಸ್ಕೃತಿ ಹೇಳಿಕೊಡುವ ಕೆಲಸವನ್ನು ಯುವಕರು ಮಾಡಬೇಕು. ನಮ್ಮ ಗುರಿ ಹಿಂದೂ ಸಮಾಜ ನಿರ್ಮಾಣವಾದರೂ ಏಸುಕ್ರಿಸ್ತ, ಅಲ್ಲಾಹು ದೇವರೆಂದು ನಂಬುತ್ತೇವೆ’ ಎಂದರು.   

 ಭಾರತದ ಸನಾತನ ಧರ್ಮದ ಬಗ್ಗೆ ವಿಶ್ವವೇ ಈಗ ಆಸಕ್ತಿಯಿಂದ ಗಮನಿಸುತ್ತಿದ್ದು, ಅನುಷ್ಠಾನಕ್ಕೆ ಹಾತೊರೆಯುತ್ತಿದೆ. ಇಂತಹ ಸನಾತನ ಧರ್ಮದ ಮತ್ತಷ್ಟು ಜಾಗೃತಿಯಲ್ಲಿ ದೇವಾಲಯಗಳ ಪಾತ್ರ ಮಹತ್ತರವಾಗಿದೆ’ ಎಂದು ‘ಧರ್ಮ ಜಾಗೃತಿಯಲ್ಲಿ ದೇವಾಲಯಗಳ ಪಾತ್ರ’ ಕುರಿತ ಉಪನ್ಯಾಸದಲ್ಲಿ ಪತ್ರಕರ್ತ ಎಚ್.ಬಿ.ಮಂಜುನಾಥ್ ತಿಳಿಸಿದರು.

‘ನಿತ್ಯಪೂಜಾ ವಿಧಿಗಳು, ಹೋಮ, ಯಾಗಗಳು ಅದರ ಪರಿಣಾಮ’ ಕುರಿತು ಚಿಂತಕ ಹಿರೇಮಗಳೂರು ಕಣ್ಣನ್, ‘ದೇವಾಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು’ ಕುರಿತು ಪ್ರಚಾರಕ ಮನೋಹರ ಮಠದ್ ಉಪನ್ಯಾಸ ನೀಡಿದರು.

ವಾಸವಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಆರ್.ಎಲ್.ಪ್ರಭಾಕರ್, ನಾಗೇಶ್ ಬಾಬು ಪಿ., ಟಿ.ಟಿ.ಸತ್ಯನಾರಾಯಣ, ವಿಷ್ಣು, ಎನ್.ಮುರುಳಿ ಕೃಷ್ಣಕುಮಾರ್, ರಮೇಶ್ ಗುಪ್ತಾ, ಡಾ.ಸುರೇಂದ್ರನಾಥ್, ಆನಂದ್ ಜಿ.ಎಸ್., ಗಾದಂ ಗೋಪಾಲಕೃಷ್ಣ, ವಾಸುಕಿ ಜಿ.ಎಸ್., ಶ್ರೀನಿವಾಸ ಬಾಬು ಇದ್ದರು.

ರಾಮ ಮಂದಿರ:

₹50 ಸಾವಿರ ಕೋಟಿ ವಹಿವಾಟು ನಿರೀಕ್ಷೆ ‘ಜ.22ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ವೇಳೆ ₹50 ಸಾವಿರ ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದ್ದು ಅಷ್ಟು ದೊಡ್ಡ ಮಟ್ಟದ ತಯಾರಿ ನಡೆಯುತ್ತಿದೆ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ‘ಒಂದು ಮಂದಿರ ನಿರ್ಮಾಣವಾದರೆ ಕೇವಲ ಭಿಕ್ಷುಕರು ಕೂರುವುದಲ್ಲ. ಹೂವು ತೆಂಗಿನ ಕಾಯಿ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುವುದು ಸೇರಿದಂತೆ ಅನೇಕ ಆರ್ಥಿಕ ಚಟುವಟಿಕೆ ನಡೆಯುತ್ತದೆ. ರಾಮಮಂದಿರ ನಿರ್ಮಾಣ ವೇಳೆ ನಡೆಯುವ ವಹಿವಾಟಿನಲ್ಲಿ ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ಕೊಡಬಹುದು’ ಎಂದು ವ್ಯಂಗ್ಯವಾಡಿದರು. ‘ದೇವಾಲಯಗಳು ಸ್ವಾಸ್ಥ್ಯದ ಸಂಕೇತವಾಗಿದ್ದು ಅವುಗಳು ಕೊಡುವ ಜಾಗಗಳಾಗಬೇಕೆ ಹೊರತು ಕಿತ್ತುಕೊಳ್ಳುವ ಜಾಗವಾಗಬಾರದು. ಈಗ ಟೆಂಪಲ್ ಟೂರಿಸಂ ಆರಂಭವಾಗಿದ್ದು 9 ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ ಬಂದು ಹೋಗಿರುವವರ ಸಂಖ್ಯೆ 30 ಕೋಟಿ ದಾಟುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT