ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ನಾಯಕರು ಪಕ್ಷಮುಖಿ; ಸ್ವಾಮೀಜಿಗಳು ಮಠಮುಖಿ: ದಿಂಗಾಲೇಶ್ವರ ಸ್ವಾಮೀಜಿ

ಶಿರಹಟ್ಟಿ–ಬಾಳೆಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ
Published 25 ಡಿಸೆಂಬರ್ 2023, 7:00 IST
Last Updated 25 ಡಿಸೆಂಬರ್ 2023, 7:00 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ನಾಯಕರು ಪಕ್ಷಮುಖಿಗಳಾಗಿದ್ದಾರೆ. ಸ್ವಾಮೀಜಿಗಳು ಮಠಮುಖಿಗಳಾಗಿದ್ದಾರೆ. ಸಮಾಜಮುಖಿಯಾಗಿ ಯಾರೂ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಶಿರಹಟ್ಟಿ–ಬಾಳೆಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ವ‌್ಯಕ್ತಪಡಿಸಿದರು.

ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಧಿವೇಶನದ ಎರಡನೇ ದಿನದ ಧಾರ್ಮಿಕ ಅಧಿವೇಶನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಹಾನಗಲ್‌ ಕುಮಾರಸ್ವಾಮಿಗಳು ನಮಗೆ ದಾರಿದೀಪವಾಗಬೇಕು. ಅವರು ಮಠಮುಖಿ ಸ್ವಾಮಿ ಆಗಲಿಲ್ಲ. ಸಮಾಜಮುಖಿ ಸ್ವಾಮಿ ಆದರು. ಆದರೆ ಈಗಿನ ಸ್ವಾಮೀಜಿಗಳಿಗೆ ಮಠವನ್ನು ಕಟ್ಟುವ ಕನಸು ಇದೆ. ಆದರೆ ಸಮಾಜ ಕಟ್ಟುವ ಮನಸ್ಸು ಇಲ್ಲ. ರಾಜಕೀಯ ನಾಯಕರಿಗೆ ಸಮುದಾಯ ಬೇಕಾಗಿಲ್ಲ. ಅವರಲ್ಲಿ ಇಚ್ಛಾಶಕ್ತಿ ಇದ್ದಿದ್ದರೆ ಈ ಅಧಿವೇಶನದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದರು’ ಎಂದು ಬೇಸರಿಸಿದರು.

‘ಸಮುದಾಯಕ್ಕೆ ದಿಕ್ಸೂಚಿ ಕೊಡಬೇಕಾದ ಬಗ್ಗೆ ಎಲ್ಲರಿಗೂ ಅರಿವು ಇದೆ. ಆದರೆ ಆಚರಣೆಯಲ್ಲಿ ಇಲ್ಲ. ಆಚರಣೆ ಇಲ್ಲದಾಗ ಸಮಾಜ ದುರ್ಬಲವಾಗುತ್ತದೆ. ಮಕ್ಕಳಿಗೆ ವಿದ್ಯೆ ಕಲಿಸದ ಪಾಲಕರು, ಸಮುದಾಯ ದಿಕ್ಕು ತಪ್ಪಿದಾಗ ದಾರಿ ತೋರದ ಮಠಾಧಿಪತಿಗಳು ಆ ಸಮುದಾಯಕ್ಕೆ ಶತ್ರುಗಳಾಗುತ್ತಾರೆ. ಬಿಚ್ಚಿ ಹೇಳಿದರೆ ತಡೆದುಕೊಳ್ಳುವುದಿಲ್ಲ. ಮುಚ್ಚಿ ಹೇಳಿದರೆ ಗೊತ್ತಾಗುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

‘ಸಮುದಾಯ ಬಲಿಷ್ಠವಾಗಲು ರಾಜಕೀಯ ನಾಯಕರು ಹುಲಿ, ಸಿಂಹ, ಚಿರತೆಯಂತಾಗಬೇಕು. ಸಮುದಾಯದವರು ತಾಕತ್ತು ತೋರುವ ಗಟ್ಟಿತನ ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.

‘ವೀರಶೈವ ಸನಾತನವಾದ ಆದಿ ಧರ್ಮ. ದೇಶದ ಎಲ್ಲೆಡೆ ಸಮುದಾಯದವರು ಇದ್ದಾರೆ. ಸಾವಿರ ವರ್ಷಗಳಿಂದ ಹಿಂದೆಯೇ ಬಸವಣ್ಣನವರು ಒಳಪಂಗಡಗಳನ್ನು ಉಲ್ಲೇಖಿಸಬೇಡಿ ಎಂದು ವಚನದಲ್ಲಿ ಸಾರಿದ್ದರು. ಆಗಲೇ ಜಾತಿ ಕೈಬಿಟ್ಟಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ಈಗಲಾದರೂ ಎಚ್ಚೆತ್ತು ಸಂಘಟಿತರಾಗಿ. ಇಲ್ಲದಿದ್ದರೆ ಸಮಾಜಕ್ಕೆ ಭವಿಷ್ಯ ಇಲ್ಲ’ ಎಂದು ಕಾಶಿಯ ಜ್ಞಾನಸಿಂಹಾಸನ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

‘ಕೇಂದ್ರದ ಒಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸುವ ಸಂಬಂಧ ಹೋರಾಟ ಆರಂಭವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮಹಾಸಭಾಕ್ಕೆ ಎಲ್ಲ ಒಳಪಂಗಡಗಳ ಸ್ವಾಮೀಜಿ, ಮುಖಂಡರು ಶಕ್ತಿ ತುಂಬಬೇಕು’ ಎಂದರು.

‘ಇಂದು ಶಿಕ್ಷಣ ಇದೆ. ಸಂಸ್ಕಾರ ಇಲ್ಲ. ಕುಮಾರಸ್ವಾಮಿಗಳ ದೂರದೃಷ್ಟಿಯಿಂದ ಜನ್ಮತಾಳಿದ ವೀರಶೈವ ಮಹಾಸಭಾ ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕು. ತಾಲ್ಲೂಕು, ಜಿಲ್ಲಾ ಘಟಕಗಳು ರಚನಾತ್ಮಕ ಕೆಲಸಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಕಿವಿಮಾತು ಹೇಳಿದರು.

‘ಸಮುದಾಯದವರ ಮನೆ, ಮಠಗಳಲ್ಲಿ ನಿಷಿದ್ಧವಾಗಿದ್ದ ಆಚರಣೆಗಳು ಇಂದು ಹೆಚ್ಚುತ್ತಿವೆ. ಇದರಿಂದ ವೀರಶೈವ–ಲಿಂಗಾಯತದ ಆಚರಣೆಯನ್ನು ಆಪೋಷನ ತೆಗೆದುಕೊಳ್ಳುತ್ತಿವೆ. ಅಂತಹ ಆಚರಣೆ ಬಿಟ್ಟು ನಿಜ ಅರ್ಥದಲ್ಲಿ ಲಿಂಗಾಯತರಾಗಿ’ ಎಂದು ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಸಲಹೆ ನೀಡಿದರು.  

‘ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ವಿಚಾರವೇ ಇರಬಹುದು ಅಥವಾ ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯೇ ಇರಬಹುದು. ಈ ಕುರಿತು ಗಟ್ಟಿ ನಿರ್ಧಾರ ಕೈಗೊಳ್ಳುವುದು ಅಗತ್ಯ. ಈ ಹೋರಾಟದಲ್ಲಿ ಸಮಾಜ ವಿಘಟನೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದರು.

ಅಧಿವೇಶನದಲ್ಲಿ ಮಾತನಾಡಿದ ಬಹುತೇಕ ಸ್ವಾಮೀಜಿಗಳು, ‘ಒಳಪಂಗಡ ಬಿಟ್ಟು ನಾವೆಲ್ಲರೂ ಒಂದೇ ಎಂಬುದನ್ನು ಸಾರಬೇಕು’ ಎಂದು ಸಲಹೆ ನೀಡಿದರು.

ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಬಸವಲಿಂಗ ಸ್ವಾಮೀಜಿ, ಮುಂಡರಗಿ–ಕೊಟ್ಟೂರು ಸಂಸ್ಥಾನಮಠದ ಅನ್ನದಾನೀಶ್ವರ ಶಿವಯೋಗಿ, ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ವಿಭೂತಿಪುರದ ವೀರಸಿಂಹಾಸನ ಸಂಸ್ಥಾನಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಗೋರ್ಟಾದ ರಾಜಶೇಖರ ಗೋರ್ಟಾ ಸ್ವಾಮೀಜಿ, ಆಂತರಿಕ ಭದ್ರತಾ ವಿಭಾಗದ ಯತೀಶ್ಚಂದ್ರ, ಶಾಸಕಿ ಲತಾ ಮಲ್ಲಿಕಾರ್ಜುನ, ಅಖಿಲ ಭಾರತ ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ, ಅಥಣಿ ವೀರಣ್ಣ, ಅಣಬೇರು ರಾಜಣ್ಣ, ದೇವರಮನೆ ಶಿವಕುಮಾರ್‌, ಶಂಕರ ಬಿದರಿ ಸೇರಿದಂತೆ ವಿವಿಧ ಮಠಾಧೀಶರು, ಮಹಾಸಭಾದ ಪದಾಧಿಕಾರಿಗಳು ಇದ್ದರು.

ಮಹಿಳಾ ಸಮಾವೇಶದಲ್ಲಿ ಮಕ್ಕಳ ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ನಿವೃತ್ತ ಪ್ರಾಧ್ಯಾಪಕಿ ಅನುರಾಧಾ ಬಕ್ಕಪ್ಪ ಮಾತನಾಡಿದರು. ಮಹಾಸಭಾದ ಮಹಿಳಾ ಘಟಕದ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.

‘ಗುರು–ವಿರಕ್ತರು ಒಂದಾಗಲಿ’

ಧಾರ್ಮಿಕ ಸಮಾವೇಶ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ‘ಗುರು–ವಿರಕ್ತರು ಒಂದಾಗಬೇಕು. ಅವರು ಒಂದಾದರೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು. ‘ಸಮಾಜ ವಿಘಟನೆಯಾಗುತ್ತಿದ್ದ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಗಟ್ಟಿ ನಿಲುವು ತಾಳಿದರು. ಅಂತಹ ಗಟ್ಟಿತನ ಎಲ್ಲರಲ್ಲೂ ಬರಬೇಕು. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ–ಲಿಂಗಾಯತ ಸೇರ್ಪಡೆ ಸಂಬಂಧ ಹೋರಾಟ ಮಾಡಬೇಕು. ಆದರೆ ಈ ಬಗ್ಗೆ ವಿಘಟನೆ ಬೇಡ. ಒಳಪಂಗಡಗಳಿಂದಾಗಿ ವೀರಶೈವ–ಲಿಂಗಾಯತ ಸಮುದಾಯ ದುರ್ಬಲವಾಗಿದೆ’ ಎಂದು ಸಲಹೆ ನೀಡಿದರು. ಯುವಜನತೆ ಧ್ವನಿ ಎತ್ತಲಿ: ವಿಜಯೇಂದ್ರ ಯುವ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ‌್ಯಕ್ಷ ಬಿ.ವೈ. ವಿಜಯೇಂದ್ರ ‘ಈಚೆಗೆ ವೀರಶೈವ–ಲಿಂಗಾಯತ ಸಮಾಜವನ್ನು ಒಡೆಯುವ ಯತ್ನ ಕೆಲವರಿಂದ ನಡೆಯಿತು. ರಾಜಕೀಯಕ್ಕಿಂತ ಸಮಾಜ ಮುಖ್ಯವಾಗಿದ್ದು ಈ ಬಗ್ಗೆ ಸಮಾಜದ ಯುವಜನರು ಒಗ್ಗಟ್ಟಾಗಿ ಧ್ವನಿ ಎತ್ತದಿದ್ದರೆ ಸಮುದಾಯವು ಇತಿಹಾಸದ ಪುಟ ಸೇರಲಿದೆ’ ಎಂದು ಎಚ್ಚರಿಸಿದರು. ‘ಸಮುದಾಯದ ಜಗದ್ಗುರುಗಳು ಸ್ವಾಮೀಜಿಗಳು ಅನ್ನ ಹಾಗೂ ಶಿಕ್ಷಣ ದಾಸೋಹದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಸಮಾಜದ ಒಳಿತಿನಲ್ಲಿ ನಾಡಿನ ಒಳಿತು ಅಡಗಿದೆ. ತಂದೆ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ರಾಜಕೀಯ ಪಿತೂರಿ ಷಡ್ಯಂತ್ರ ನಡೆದರೂ ಅವರು ಎದೆಗುಂದದೇ ಎದುರಿಸಿ ನಿಂತು ಬೆಳೆದಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತೇನೆ. ಸಮುದಾಯಕ್ಕೆ ಶಕ್ತಿ ತುಂಬುವ ಕಾರ್ಯ ಮಾಡುತ್ತೇನೆ’ ಎಂದರು.

‘ಮೀಸಲಾತಿ: ಭಿನ್ನ ನಿಲುವು ಸರಿಯಲ್ಲ’

ಮೀಸಲಾತಿಯ ಕಾರಣಕ್ಕೆ ಸಮುದಾಯದಲ್ಲಿ ಒಳಪಂಗಡಗಳು ಭಿನ್ನ ರೀತಿಯ ನಿಲುವು ತಳೆದಿರುವುದು ಸರಿಯಲ್ಲ. ಪಾದಯಾತ್ರೆ ಹೋರಾಟ ಮಾಡುತ್ತಿರುವುದರಿಂದ ಗೊಂದಲ ಮೂಡಿದೆ. ಹಿರಿಯ ಸ್ವಾಮೀಜಿಗಳು ಹಿರಿಯ ನಾಯಕರ ಸಮ್ಮುಖದಲ್ಲಿ ಚರ್ಚೆ ಮಾಡಿ ಈ ಬಗ್ಗೆ ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರಬೇಕು. ನಿಜವಾಗಿ ಬೇಕಾದ ಮೀಸಲಾತಿ ಯಾವುದು ಎಂಬ ಬಗ್ಗೆ ಚರ್ಚೆಯಾಗುವ ಅನಿವಾರ್ಯತೆ ಇದೆ. ಈ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಬಸವತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಒತ್ತಾಯಿಸಿದರು.  ‘ಲಿಂಗಾಯತದಲ್ಲಿ ಉಪ ಜಾತಿ ಇಲ್ಲ. ಉಪ ಪಂಗಡಗಳು ಇವೆ. ಜಾತಿ ಇದ್ದಾಗ ಸಿಗುವ ಮೀಸಲಾತಿ ಒಳಪಂಗಡದಲ್ಲಿದ್ದಾಗಲೂ ಸಿಗುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯ’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT