ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಐಇಟಿಗೆ 14 ರ‍್ಯಾಂಕ್‌: ಎರಡು ಚಿನ್ನದ ಪದಕ

Last Updated 13 ಮಾರ್ಚ್ 2022, 11:41 IST
ಅಕ್ಷರ ಗಾತ್ರ

ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020–21ನೇ ಸಾಲಿನ ಪರೀಕ್ಷೆಯಲ್ಲಿ ಇಲ್ಲಿನ ಬಿಐಇಟಿ ಕಾಲೇಜಿಗೆ 14 ರ‍್ಯಾಂಕ್‌ಗಳು ಬಂದಿವೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ. ಅರವಿಂದ ತಿಳಿಸಿದರು.

ವಿಟಿಯು ನಡೆಸಿದ ಪರೀಕ್ಷೆಯಲ್ಲಿ ಬಿಐಇಟಿ 5ನೇ ಸ್ಥಾನದಲ್ಲಿದ್ದು, ಜವಳಿ ವಿಭಾಗದಲ್ಲಿ ಜಮೀರ್ ಅಸ್ಲಾಮ್ ಬಾರ್ಗಿರ್ ಹಾಗೂ ಎಂ.ಟೆಕ್. ಪರಿಸರ ತಂತ್ರಜ್ಞಾನ ವಿಭಾಗದಲ್ಲಿ ಕೆ.ಸುಚಿತ್ರಾ ಅವರು ಬಂಗಾರದ ಪದಕಗಳನ್ನು ಪಡೆದಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜವಳಿ ವಿಭಾಗದಲ್ಲಿ ಹಿತೇಶ್ ದಾಸ್ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಎಶ್ರಾಜ್ ಪಾಟೀಲ್ ಅವರು ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ, ಚೈತ್ರಾ ಎಸ್. ಅವರು ಜವಳಿ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಪ್ರಮೋದ್ ಪಿ., ಅಕ್ಷತಾ ಎನ್.ಬಿ., ರಂಜಿತಾ ಎಚ್.ಕೆ. ಮತ್ತು ಪ್ರಗತಿ ಜಿ. ಅವರು ಕ್ರಮವಾಗಿ 5, 6, 7 ಮತ್ತು 10ನೇ ರ‍್ಯಾಂಕ್‌ಗಳನ್ನು ಜವಳಿ ವಿಭಾಗದಲ್ಲಿ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ಎಂ.ಟೆಕ್ ಪರಿಸರ ತಂತ್ರಜ್ಞಾನ ವಿಭಾಗದಲ್ಲಿ ಮೋಹನ್ ರಾಜ್ ಬಿ. ಮತ್ತು ಉಮೇಶ್ ಎಚ್.ಎಲ್. ಅವರು 3 ಮತ್ತು 5ನೇ ರ‍್ಯಾಂಕ್‌ ಗಳಿಸಿದ್ದಾರೆ. ಎಂ.ಟೆಕ್. ಸ್ಟ್ರಕ್ಚರ್‌ ವಿಭಾಗದಲ್ಲಿ ಭೂಮಿಕಾ ಕೆ.ವಿ. ಮತ್ತು ಮುಹಮ್ಮದ್ ಮನ್ನಾನ್ ಅವರು ಕ್ರಮವಾಗಿ 6 ಮತ್ತು 10ನೇ ರ‍್ಯಾಂಕ್ ಮತ್ತು ಪಡೆದಿದ್ದಾರೆ. ಎಂ.ಬಿ.ಎನಲ್ಲಿ ಸ್ವಾತಿ ಆರ್.ಕೆ. 9ನೇ ರ‍್ಯಾಂಕ್ ಪಡೆದಿದ್ದಾರೆ ಎಂದರು.

‘ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ ಅವರು ಮತ್ತು ಅಧ್ಯಕ್ಷರಾದ ರಾಜನಹಳ್ಳಿ ರಮಾನಂದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ’ ಎಂದರು.

ಉದ್ಯೋಗ ವಿಭಾಗದ ಡೀನ್ ಡಾ. ನಿರ್ಮಲಾ ಮಾತನಾಡಿ, ‘7ನೇ ಸೆಮಿಸ್ಟರ್‌ನ 500 ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ನೇಮಕಾತಿಯಾಗಿದ್ದು, ವಾರ್ಷಿಕ ₹ 6 ಲಕ್ಷದಿಂದ ₹ 35 ಲಕ್ಷದವರೆಗೆ ಅವರ ವೇತನ ನಿಗದಿಯಾಗಿದೆ. ಏಪ್ರಿಲ್‌ನಲ್ಲಿ 2ನೇ ಹಂತದ ಕ್ಯಾಂಪಸ್ ಸಂದರ್ಶನ ನಡೆಯಲಿದೆ’ ಎಂದು ಹೇಳಿದರು.

ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಶಂಕರಮೂರ್ತಿ ಮಾತನಾಡಿ, ‘ಬಿಐಇಟಿ ರೋವ್ ಲ್ಯಾಬ್ಸ್‌ ಸಹಯೋಗದೊಂದಿಗೆ ಹೈಬ್ರೀಡ್ ಇ-ವಾಹನ ಅಭಿವೃದ್ಧಿಪಡಿಸುತ್ತಿದ್ದು, ಪೆಟ್ರೋಲ್ ಬೆಲೆ ಏರಿಕೆಯಾಗಿರುವ ಇಂದಿನ ದಿನಗಳಲ್ಲಿ ಸೋಲಾರ್‌ನಿಂದಲೇ ವಾಹನ ಚಾಲನೆ ಮಾಡುವ ವಿಧಾನ ಇದಾಗಿದೆ’ ಎಂದು ಹೇಳಿದರು.

‘ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕೊಳಚೆ ನೀರನ್ನು ಸಾವಯವ ಲಿಕ್ವಿಡ್ ನ್ಯಾನೊ ಗೊಬ್ಬರವನ್ನಾಗಿ ಪರಿವರ್ತಿಸಲು ಕಡಿಮೆ ವೆಚ್ಚದ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ’ ಎಂದು ಪ್ರಾಧ್ಯಾಪಕ ಡಾ. ಶರಣ್ ತಿಳಿಸಿದರು.

ಕಾಲೇಜಿನ ಸಾರ್ವಜನಿಕ ಸಂಪರ್ಕ ಡೀನ್ ಡಾ.ಜಿ.ಪಿ. ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT