ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ ಬೆಳೆಗೆ ವ್ಯಾಪಕ ಕೀಟಬಾಧೆ: ಆತಂಕದಲ್ಲಿ ರೈತರು

ಜಗಳೂರು ತಾಲ್ಲೂಕಿನಲ್ಲಿ ಒಟ್ಟು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ; ಸೊಕ್ಕೆ ಹೋಬಳಿ ಅತಿಹೆಚ್ಚು
Last Updated 17 ನವೆಂಬರ್ 2021, 2:54 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನ ಪ್ರಮುಖ ಹಿಂಗಾರು ಬೆಳೆಯಾಗಿರುವ ಕಡಲೆ ಬೆಳೆಗೆ ಕೀಟಬಾಧೆ ಎದುರಾಗಿದ್ದು, ರೈತರಲ್ಲಿ ಆತಂಕ ಮೂಡಿದೆ.

ಮಳೆಯಾಶ್ರಿತ ಕಪ್ಪುಭೂಮಿಯಲ್ಲಿ ವ್ಯಾಪಕವಾಗಿ ಹಿಂಗಾರು ಹಂಗಾಮಿನಲ್ಲಿ ಕಡಲೆಯನ್ನು ಬೆಳೆಯಲಾಗುತ್ತದೆ. ಕಸಬಾ ಹೋಬಳಿ ಹಾಗೂ ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಡಲೆ ಬೆಳೆದಿದ್ದು, ತಾಲ್ಲೂಕಿನಲ್ಲಿ ಒಟ್ಟು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಇದೆ.

ಕಡಲೆಗೆ ಮಳೆಯ ಅಗತ್ಯ ಇಲ್ಲ. ಕೇವಲ ಇಬ್ಬನಿ ಮತ್ತು ತೇವಾಂಶದ ಆಧಾರದಲ್ಲಿ ಇದನ್ನು ಬೆಳೆಯಲಾಗುತ್ತದೆ. ಸದಾ ಮಳೆಯ ಕೊರತೆಯಿರುವ ತಾಲ್ಲೂಕಿನಲ್ಲಿ ಸುಲಭವಾಗಿ ಇದು ಬೆಳೆಯುತ್ತದೆ ಎಂಬ ಕಾರಣಕ್ಕೆ ಮಳೆಯಾಶ್ರಿತ ಭೂಮಿ ಹೊಂದಿರುವ ರೈತರು ಹಿಂಗಾರಿನಲ್ಲಿ ಕಡಲೆ ಬೆಳೆಗೆ ಮೊರೆ ಹೋಗುತ್ತಾರೆ.

‘ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಶೇಂಗಾ ಮತ್ತು ಮೆಕ್ಕೆಜೋಳ ಒಣಗಿ ಹಾನಿಯಾಗಿತ್ತು. ಇದೀಗ ಮಳೆಯ ಅಗತ್ಯವಿಲ್ಲದೆ ಬೆಳೆಯುವ ಕಡಲೆಯನ್ನು ನಾಲ್ಕು ಎಕರೆಯಲ್ಲಿ ಹಾಕಿದ್ದೇನೆ. ಆದರೆ ಇದಕ್ಕೂ ಕಿಟಬಾಧೆ ಆರಂಭವಾಗಿದೆ. ಮತ್ತಷ್ಟು ನಷ್ಟವುಂಟಾಗುವ ಆತಂಕ ಹುಟ್ಟಿದೆ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ತಮ್ಮ ಅಳಲು ತೋಡಿಕೊಂಡರು.

‘ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 25 ದಿನಗಳ ಕಡಲೆ ಬೆಳೆ ಇದ್ದು, ಹಲವು ದಿನಗಳಿಂದ ಮೋಡ ಮುಸುಕಿದ ವಾತಾವರಣದಿಂದಾಗಿ ಕಾಯಿಕೊರಕ (ಹೆಲಿಕೊವೆರ್ಪಾ) ಕೀಟಬಾಧೆ ಶುರುವಾಗಿದೆ. ಆರಂಭದಲ್ಲಿ ಗಿಡದ ಎಲೆಗಳನ್ನು ತಿನ್ನುವ ಕೀಟ ನಂತರದಲ್ಲಿ ಮೊಗ್ಗು ಮತ್ತು ಕಾಯಿಯನ್ನು ಕೊರೆದು ತಿನ್ನಲು ಆರಂಭಿಸುತ್ತವೆ. ಸಕಾಲದಲ್ಲಿ ಔಷಧ ಸಿಂಪರಣೆ ಮಾಡದೇ ಇದ್ದಲ್ಲಿ ಶೇ 50ರಷ್ಟು ಬೆಳೆಯನ್ನು ಹುಳುಗಳು ತಿಂದು ಹಾಕುತ್ತವೆ. ಇದರಿಂದ ರೈತರಿಗೆ ತೀವ್ರ ನಷ್ಟ ಉಂಟಾಗಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸುಲು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರೈತ ಸಂಪರ್ಕ ಕೇಂದ್ರಗಳಿಂದ ಮಾಹಿತಿ ಪಡೆಯಿರಿ

ಹೆಣ್ಣು ಕೀಟವು ಹಸಿರು ಎಲೆಗಳ ಮೇಲೆ ಮೊಟ್ಟೆಗಳನ್ನಿಡುತ್ತದೆ. ನಂತರ ಕಾಯಿಕಟ್ಟುವ ಹಂತದಲ್ಲಿ ಕಾಯಿಯನ್ನು ಹಾಗೂ ಎಲೆಗಳನ್ನು ತಿನ್ನುವುದರಿಂದ ಹೂ ಮತ್ತು ಎಳೆಯ ಕಾಯಿಗಳು ಉದುರಿ ಬೀಳುತ್ತವೆ. ಈ ಸಂದರ್ಭದಲ್ಲಿ ಇಂಡಾಕ್ಷಿಕಾರ್ಬ್ ಅಥವಾ ಇಮಾಮೆಕ್ಟಿನ್ ಬೆನ್ಜೊಯೆಟ್ ಅನ್ನು 0.5 ಗ್ರಾಂ ಅಥವಾ ತೈಯೋಡಿಕಾರ್ಬ್ 2 ಗ್ರಾಂ ಅಥವಾ ಕ್ಲೊರೊಪೈರಿಫಾಸ್ 2 ಮಿಲಿ ಅಥವಾ 1 ಗ್ರಾಂ ಅಸಿಫೇಟ್ ಸಿಂಪರಣೆ ಮಾಡಬೇಕು. ಇದರಿಂದ ಕೀಟಬಾಧೆಯನ್ನು ಹತೋಟಿಗೆ ತರಬಹುದು. ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು.

– ಶ್ರೀನಿವಾಸುಲು, ಸಹಾಯಕ ನಿರ್ದೇಶಕ,ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT