ಬುಧವಾರ, ಮೇ 25, 2022
23 °C
ಮಳೆಯಿಂದಾಗಿ ಕೆಲಸ ಸ್ಥಗಿತ; ಕಾಮಗಾರಿ ವಿಳಂಬವಾಗುವ ಆತಂಕ

ಕುಂದವಾಡ ಕೆರೆಗೆ ‘ಸ್ಮಾರ್ಟ್‌ ಸಿಟಿ’ ಉಣಿಸೀತೆ ಅಭಿವೃದ್ಧಿಯ ಅಮೃತ?

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಜೀವನಾಡಿಯಂತಿರುವ ಕುಂದವಾಡ ಕೆರೆಯ ಬಳಿ ಹೋದರೆ ಈಗ ಕಾಣುವುದು ಎಲ್ಲೆಲ್ಲೂ ಜೆಸಿಬಿ, ಟ್ರ್ಯಾಕ್ಟರ್‌, ಲಾರಿಗಳ ಓಡಾಟ. ಕೆರೆಯಂಗಳದಲ್ಲಿ ಮಣ್ಣು ಅಗೆದು ಹಾಕಿರುವುದು, ಕೆರೆ ಏರಿಯನ್ನು ಕಲ್ಲು ಹಾಕಿ ಗಟ್ಟಿ ಮಾಡುತ್ತಿರುವುದು ಕಂಡುಬರುತ್ತಿದೆ. ಈಚೆಗೆ ನಿರಂತರ ಮಳೆಯಿಂದಾಗಿ ಅಗೆದು ಹಾಕಿರುವ ಜಾಗಗಳಲ್ಲಿ ಮಳೆ ನೀರು ನಿಂತು ಸದ್ಯಕ್ಕೆ ಕಾಮಗಾರಿ ಸ್ಥಗಿತವಾಗಿದೆ.

2021ರ ಜನವರಿಯಿಂದ ಇಲ್ಲಿ ‘ಸ್ಮಾರ್ಟ್‌ ಸಿಟಿ’ ವತಿಯಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಆಗಾಗ ಅಡ್ಡಿಗಳು ಎದುರಾಗುತ್ತಲೇ ಇವೆ. ಆರಂಭದಲ್ಲೇ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ಎದುರಿಸಬೇಕಾಯಿತು. 20 ವರ್ಷಗಳ ಹಿಂದೆಯೇ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆದಿದ್ದ ಕಾರಣ ಮತ್ತೆ ಅಭಿವೃದ್ಧಿ ಅಗತ್ಯವಿರಲಿಲ್ಲ ಎಂಬ ಹಲವರ ವಾದಗಳಿಗೆ ಮನ್ನಣೆ ಲಭಿಸಲಿಲ್ಲ.

‘ಕುಂದವಾಡ ಕೆರೆ ಪರಿಸರ ವ್ಯವಸ್ಥೆಯಲ್ಲಿ ನಾನು 148 ವಿಧದ ಹಕ್ಕಿಗಳನ್ನು ಗುರುತಿಸಿದ್ದೇನೆ. ಇವುಗಳಲ್ಲಿ 46 ವಿಧಗಳು ವಿದೇಶಗಳಿಂದ ವಲಸೆ ಬರುತ್ತವೆ. 32 ಚಿಟ್ಟೆಯ ವಿಧಗಳು ಇದ್ದವು. ಇವಷ್ಟೇ ಅಲ್ಲದೇ ಕೀಟಗಳು, ಆಮೆ, ನೀರು ಹಾವು ಸೇರಿ ಜೀವ ವೈವಿಧ್ಯಕ್ಕೆ ಈ ಸ್ಮಾರ್ಟ್ ಸಿಟಿ ಕಾಮಗಾರಿಗಳು ಧಕ್ಕೆ ತಂದಿದೆ. ಕೆರೆ ನೀರು ಖಾಲಿಯಾದಾಗ ಹಲವು ವಿಧದ ಜೀವಜಂತುಗಳು ನಾಶವಾಗಿವೆ. ವಲಸೆ ಹಕ್ಕಿಗಳು ಸಮೀಪದ ಕೊಂಡಜ್ಜಿ ಕೆರೆಗೆ ವಲಸೆ ಹೋದವು. ಕಾಮಗಾರಿಗಾಗಿ 1 ವರ್ಷ 10 ತಿಂಗಳುಗಳಿಂದ ಈ ಕೆರೆಗೆ ನೀರು ಬರುವುದನ್ನು ನಿಲ್ಲಿಸಲಾಗಿದೆ. ನೀರು ಸಂಪೂರ್ಣ ಬತ್ತಿ 11 ತಿಂಗಳುಗಳು ಕಳೆದಿವೆ. ಇಲ್ಲಿಯ ಕೆರೆ ಪರಿಸರಕ್ಕೆ ಧಕ್ಕೆಯಾಗದಂತೆ ಅರ್ಧ ಕೆರೆಯ ನೀರನ್ನಷ್ಟೇ ಬತ್ತಿಸಿ ಕೆಲಸ ಮಾಡಿಸಬಹುದಾದ ಸಾಧ್ಯತೆ ಇತ್ತು. ಆದರೆ ಆಡಳಿತ ಈ ಕೆಲಸ ಮಾಡಲಿಲ್ಲ. ಈಗಾಗಲೇ ಸುಸ್ಥಿತಿಯಲ್ಲಿದ್ದ ಕೆರೆ ಪರಿಸರವನ್ನು ಮತ್ತೆ ಅಭಿವೃದ್ಧಿಗೆ ಒಡ್ಡುವ ಅಗತ್ಯವಾದರೂ ಏನಿತ್ತು, ಇನ್ನು ಈ ಕಾಮಗಾರಿ ಮುಗಿಯುವುದಾದರೂ ಎಂದು ಅವರು ಪ್ರಶ್ನಿಸಿದ್ದಾರೆ. ಜಲಚರಗಳು ಹಾಗೂ ಇತರ ಜೀವವೈವಿಧ್ಯ ಪುನಶ್ಚೇತನಗೊಳ್ಳಲು 10-15 ವರ್ಷಗಳೇ ಬೇಕಾಗಬಹುದು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್. ಶಿಶುಪಾಲ ಅಭಿಪ್ರಾಯಪಟ್ಟಿದ್ದಾರೆ.

‘ಕೆರೆ ದಂಡೆಯಲ್ಲಿ ಕುಳಿತುಕೊಳ್ಳಲೆಂದು ನೂರಾರು ಜನರು ದೇಣಿಗೆ ನೀಡಿದ್ದ ಬೆಂಚುಗಳನ್ನು ಕಿತ್ತು ಬಿಸಾಕಿದ್ದಾರೆ. ಇವುಗಳನ್ನು ಬಳಸದೇ ಹಾಳು ಮಾಡಿದ್ದು ದೇಣಿಗೆ ನೀಡಿದರಿಗೆ ಅವಮಾನವಲ್ಲವೇ? ಸಿಮೆಂಟ್ ಮೂರ್ತಿಗಳ ರಕ್ಷಣೆಗೂ ಕ್ರಮ ಕೈಗೊಂಡಿಲ್ಲ. ಅವೆಲ್ಲವೂ ಈಗ ಕೆರೆ ಪರಿಸರದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಿದ್ದಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಕೆರೆ ಏರಿಯ ಇಳಿಜಾರಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವ ಕಾರಣ ನೀರಿನಲ್ಲಿ ಪ್ಲಾಸ್ಟಿಕ್‌ನ ವಿಷಕಾರಿ ಅಂಶಗಳು ಸೇರುವ ಸಾಧ್ಯತೆಗಳು ಇವೆ. ನೀರು ಶುದ್ಧೀಕರಣ ಮಾಡಿದರೂ ನೀರಿನಲ್ಲಿ ಸೇರಿದ ಮೈಕ್ರೋ ಪ್ಲಾಸ್ಟಿಕ್ ನಿವಾರಣೆ ಅಸಾಧ್ಯ. ಹೀಗಾಗಿ ಈ ಕಾಮಗಾರಿ ಎಷ್ಟರಮಟ್ಟಿಗೆ ಪರಿಸರಕ್ಕೆ ಪೂರಕವಾಗಿ ನಿಲ್ಲಲಿದೆ ಎಂಬ ಆತಂಕ ಉಂಟಾಗಿದೆ. ಕಾಮಗಾರಿ ಮುಗಿದ ನಂತರ ಕುಂದವಾಡ ಕೆರೆ ಪರಸರ ವ್ಯವಸ್ಥೆ ಮರುಪೂರಣಗೊಳ್ಳುವುದೇ ಎಂಬ ಪ್ರಶ್ನೆಯೂ ಕಾಡುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿ ನಿಧಾನವಾಗಿರುವ ಕುರಿತು ಆಕ್ಷೇಪಿಸಿದ ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ದೇವರಮನೆ, ‘ಕುಂದವಾಡ ಕೆರೆಯು ನಗರದ ಪ್ರಮುಖ ಕುಡಿಯುವ ನೀರಿನ ಆಗರ. ಆದರೆ ಇದರ ಅಭಿವೃದ್ಧಿ ಕಾಮಗಾರಿ ಈಚೆಗೆ ತೀರಾ ನಿಧಾನವಾಗಿದೆ. ಬೆಂಗಳೂರಿನಲ್ಲಿ ಹಲವು ತುರ್ತು ಕಾಮಗಾರಿಗಳನ್ನು ದಿನ–ರಾತ್ರಿ ಎನ್ನದೇ ವಿಶೇಷ ಬೆಳಕಿನ ವ್ಯವಸ್ಥೆಗಳನ್ನು ಬಳಸಿಕೊಂಡಾದರೂ ಮಾಡಿ ಮುಗಿಸುತ್ತಿದ್ದಾರೆ. ಅಂಥ ತುರ್ತು ಇಲ್ಲಿ ಕಂಡುಬರುತ್ತಿಲ್ಲ. ಸದ್ಯಕ್ಕೆ ಕುಡಿಯುವ ನೀರಿಗೆ ಟಿ.ವಿ. ಸ್ಟೇಶನ್‌ ಕೆರೆಯನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ. ಆದರೆ ಜನಸಂಖ್ಯೆ ಹಾಗೂ ನೀರಿನ ಅಗತ್ಯಗಳು ದಿನದಿನಕ್ಕೂ ಹೆಚ್ಚುತ್ತಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಆಡಳಿತ ಗಮನಹರಿಸಬೇಕಿದೆ. ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಕುಂದವಾಡ ಕೆರೆಯ ಕಾಮಗಾರಿಯನ್ನು ಮುಗಿಸಿ ಜನರಿಗೆ ಕುಡಿಯುವ ನೀರು ಹಾಗೂ ವಾಯುವಿಹಾರಕ್ಕೆ ಅವಕಾಶ ಮಾಡಿಕೊಡಬೇಕಿದೆ. ಬರುವ ಮಳೆಗಾಲದೊಳಗೆ ಮುಗಿಸಿದರೆ ಜನರಿಗೂ, ಇಲ್ಲಿಯ ಜೀವಿಗಳು, ಪಕ್ಷಿ ಸಂಕುಲಕ್ಕೂ ಅನುಕೂಲ’ ಎಂದು ಅಭಿಪ್ರಾಯಪಟ್ಟರು.

‘ಕೆರೆ ಅಭಿವೃದ್ಧಿ ಕಾಮಗಾರಿ ಆರಂಭಿಸುವುದಕ್ಕೂ ಮೊದಲೇ ಇಲ್ಲಿಯ ಜೀವವೈವಿಧ್ಯದ ಬಗ್ಗೆ ಅಧ್ಯಯನ ವರದಿ ಪಡೆಯಬೇಕಿತ್ತು. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಕಾಮಗಾರಿ ಆರಂಭಿಸಬೇಕಿತ್ತು. ಅದ್ಯಾವುದೂ ಆಗಿಲ್ಲ. ಕೆರೆ ಪರಿಸರದಲ್ಲಿ ಸೈಕಲ್‌ ಟ್ರ್ಯಾಕ್‌ ಮಾಡುವುದು ಬೇಡ ಎಂದು ನಾವು ಹೈಕೋರ್ಟ್‌ಗೆ ಹೋದ ಕಾರಣ, ಸೈಕಲ್‌ ಟ್ರ್ಯಾಕ್‌ ಕೈಬಿಡಲಾಗಿದೆ. ನೀರಿನ ಸಂಗ್ರಹ ಹೆಚ್ಚಳ ಮಾಡುವುದಾಗಿ ಸ್ಮಾರ್ಟ್‌ ಸಿಟಿಯವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಆದರೆ, ಇಲ್ಲಿ ಕೆರೆ ಏರಿಯನ್ನು 5–6 ಮೀಟರ್‌ಗಳಷ್ಟು ವಿಸ್ತರಣೆ ಮಾಡಿರುವುದರಿಂದ ಸಹಜವಾಗಿ ನೀರಿನ ಸಂಗ್ರಹ ಕಡಿಮೆಯಾಗುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾದರೆ ನಾವು ಮತ್ತೆ ಹೋರಾಟ ಮಾಡಲಿದ್ದೇವೆ’ ಎಂದು ಯುವ ಭಾರತ್‌ ಗ್ರೀನ್‌ ಬ್ರಿಗೇಡ್‌ ಅಧ್ಯಕ್ಷ ನಾಗರಾಜ ಸುರ್ವೆ ತಿಳಿಸಿದ್ದಾರೆ.

‘ಕೆರೆ ಸುತ್ತಲಿನ 30 ಮೀಟರ್‌ ಬಫರ್‌ ಝೋನ್‌ ಅನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳುವಂತೆ ನಾವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮೂರ್ನಾಲ್ಕು ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಯಾವುದೇ ಕಾರ್ಯಾಚರಣೆ ಆಗಿಲ್ಲ’ ಎಂದು ಅವರು ದೂರಿದರು.

ಹಳೆಯ ಬೆಂಚ್‌, ಮೂರ್ತಿಗಳ ಮರುಬಳಕೆ: ಕುಂದವಾಡ ಕೆರೆ ಅಭಿವೃದ್ಧಿ ಕಾಮಗಾರಿ ಶೇ 75ರಷ್ಟು ಪೂರ್ಣಗೊಂಡಿದೆ. ಏರಿಗೆ ಕಲ್ಲು ಹೊದಿಸುವುದು, ವಿದ್ಯುತ್‌ ಕಂಬಗಳು, ಕಲ್ಲಿನ ಬೆಂಚ್‌ಗಳನ್ನು ಹಾಕುವುದು, ನಡುಗಡ್ಡೆಗಳಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯ ಬಾಕಿ ಇದೆ ಎಂದು ಸ್ಮಾರ್ಟ್‌ ಸಿಟಿ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ ಪಾಟೀಲ್‌ ಹೇಳಿದರು.

ಈ ಹಿಂದೆ ಕೆರೆ ಪರಿಸರದಲ್ಲಿ ಇದ್ದ ಸಿಮೆಂಟ್‌ ಬೆಂಚ್‌ಗಳಲ್ಲಿ ಸುಸ್ಥಿತಿಯಲ್ಲಿ ಇರುವಂಥವನ್ನು ಬಳಸಲಾಗುವುದು. ಸಿಮೆಂಟ್‌ ಶಿಲ್ಪಗಳು ಕೆಲವು ಒಡೆದುಹೋಗಿವೆ. ಉಳಿದವನ್ನು ಎತ್ತಿಡಲಾಗಿದೆ. ಅವುಗಳನ್ನೂ ಮತ್ತೆ ಅಲಂಕಾರದ ಉದ್ದೇಶಕ್ಕೆ ಬಳಸಲಾಗುವುದು. ನೀರಿನಲ್ಲಿ ಆಮ್ಲಜನಕದ ಮಟ್ಟ ಕಾಯ್ದುಕೊಳ್ಳಲು ರೂಪಿಸಲಾಗಿದ್ದ ಕಾರಂಜಿ ವ್ಯವಸ್ಥೆಯನ್ನೂ ಎತ್ತಿಡಲಾಗಿದ್ದು, ಅದನ್ನೂ ಮತ್ತೆ ಬಳಸಲಾಗುವುದು. ಮೊದಲು ಒಂದು ನಡುಗಡ್ಡೆ ಇತ್ತು. ಈಗ ಮೊತ್ತೊಂದು ನಿರ್ಮಿಸಲಾಗಿದೆ. ಅವುಗಳಲ್ಲಿ ಪಕ್ಷಿಗಳಿಗೆ ಅಗತ್ಯವಾದ ಹಣ್ಣಿನ ಗಿಡಗಳನ್ನು ಬೆಳೆಸಲಾಗುವುದು ಎಂದು ಅವರು ವಿವರಿಸಿದರು.

ಕೆರೆಯ ಏರಿಯಲ್ಲಿ ಸೀಪೇಜ್‌ ಇರುವ ಕಡೆ ಮಾತ್ರ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿದೆ. ಅದರೆ ಮೇಲಿಂದ ಮತ್ತೆ ಕಲ್ಲು ಹಾಸು ಬರುವುದರಿಂದ ಪ್ಲಾಸ್ಟಿಕ್‌ಗೆ ನೀರಿನ ಸ್ಪರ್ಶ ಆಗುವುದಿಲ್ಲ. ಹೀಗಾಗಿ ನೀರಿಗೆ ಪ್ಲಾಸ್ಟಿಕ್‌ ಅಂಶ ಸೇರುವ ಪ್ರಶ್ನೆಯೇ ಬರುವುದಿಲ್ಲ. ಸದ್ಯಕ್ಕೆ ಮಳೆಯಿಂದಾಗಿ ಕೆರೆ ಅಂಗಳದಲ್ಲಿ ನೀರು ನಿಂತಿರುವುದರಿಂದ ಕೆಲಸ ಸ್ಥಗಿತಗೊಂಡಿದೆ. ನೀರನ್ನು ಒಣಗಿಸಿ ಮತ್ತೆ ಕೆಲಸ ಶುರು ಮಾಡಲು ಇನ್ನು ಒಂದು ವಾರವಾದರೂ ಅಗತ್ಯ ಎಂದು ಅವರು ವಿವರಿಸಿದರು.

ಪರಿಸರ ಪ್ರೇಮಿಗಳ ಆರೋಪ–ಆಕ್ಷೇಪಗಳನ್ನು ಅಲ್ಲಗಳೆದಿರುವ ಸ್ಮಾರ್ಟ್‌ ಸಿಟಿ ಅಧಿಕಾರಿಗಳು, ಕಾಮಗಾರಿ ಮುಗಿದ ನಂತರ ಕೆರೆ ಪರಿಸರ ಇನ್ನಷ್ಟು ಸುಂದರಗೊಂಡು ಜೀವ ವೈವಿಧ್ಯ ಪುನಶ್ಚೇತನಗೊಳ್ಳುವ ಭರವಸೆ ನೀಡಿದ್ದಾರೆ. ಕುಡಿಯುವ ನೀರಿನ ಪ್ರಮುಖ ಸಂಗ್ರಹಾಗಾರವಾಗಿರುವ ‘ಕುಂದವಾಡ ಕೆರೆ ಪರಿಸರ’ ಯಾವಾಗ ಸುಸ್ಥಿತಿಗೊಳ್ಳುವುದೋ ಎಂದು ನಾಗರಿಕರು ಕಾಯುವಂತಾಗಿದೆ.

ಕೆರೆ ಪರಿಸರದಲ್ಲಿ ಮರಗಿಡ ಹೆಚ್ಚಿಸಿ

ಕುಂದವಾಡ ಕೆರೆ ಮೈಸೂರು ಅರಸರ ಕಾಲದಲ್ಲಿ ಕಟ್ಟಿಸಿದ ನೈಸರ್ಗಿಕ ಕೆರೆಯೇ ಹೌದು. ಆದರೆ ಕಾಲಕ್ರಮೇಣ ನಗರ ಬೆಳೆದಂತೆ, ಸುತ್ತಲೂ ಲೌಔಟ್‌ಗಳು ನಿರ್ಮಾಣವಾದಂತೆ ಕೆರೆಗೆ ನೀರು ಹರಿದುಬರುವುದು ಕಡಿಮೆಯಾಗತೊಡಗಿತು. ಹೀಗಾಗಿ ಈಗ ಭದ್ರಾ ಕಾಲುವೆಯಿಂದ ನೀರು ತುಂಬಿಸುವ ಸಂಗ್ರಹಾಗಾರದಂತಾಗಿದೆ. ನಗರಗಳು ಬೆಳೆದಂತೆಲ್ಲ ಕೆರೆಯ ಅಭಿವೃದ್ಧಿ ಅವಶ್ಯ. ಆದರೆ ಕೆರೆ ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು.

***

ಕುಂದವಾಡ ಕೆರೆಯ ಪರಿಸರದಲ್ಲಿ ಇನ್ನಷ್ಟು ಮರಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು. ಲೈಟಿಂಗ್ ವ್ಯವಸ್ಥೆ ಮಾಡಿದರೂ, ಪಕ್ಷಿಗಳ ಆವಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನೀರನ್ನು ಸ್ವಚ್ಛವಾಗಿಡಲು ಆದ್ಯತೆ ನೀಡಬೇಕು.

- ಬಸವರಾಜ ಕುಂಚೂರು, ದಾವಣಗೆರೆ ಜಿಲ್ಲೆಯ ಕೆರೆಗಳ ಕುರಿತ ಕೃತಿಯ ಲೇಖಕರು

***

ಕಾಮಗಾರಿ ಆರಂಭವಾದ 4 ತಿಂಗಳಲ್ಲೇ ಪೂರ್ಣಗೊಳಿಸಲು ಯತ್ನ

ಕೆರೆಯ ಬಂಡ್‌ನ ದುರಸ್ತಿಗಾಗಿ ಹಾಗೂ ಕೆರೆಯನ್ನು ಇನ್ನಷ್ಟು ಸುಂದರಗೊಳಿಸುವ ಉದ್ದೇಶದಿಂದ ಈ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕುಡಿಯುವ ನೀರಿನ ಸಂಗ್ರಹಾಗಾರವಾಗಿರುವುದರಿಂದ ಕೆರೆಯನ್ನು ಖಾಲಿ ಮಾಡಿಸಿಕೊಡಲು ಮಹಾನಗರ ಪಾಲಿಕೆ ತಡ ಮಾಡಿತು. ಹೀಗಾಗಿ ಕಾಮಗಾರಿ ಆರಂಭವಾಗಲು ತುಂಬಾ ವಿಳಂಬವಾಯಿತು. ನಂತರ ವೇಗವಾಗಿ ಕಾಮಗಾರಿ ಆರಂಭವಾಯಿತು. ನಡುವೆ ಕೆಲವು ಸಂಘಟನೆಗಳು ಹೈಕೋರ್ಟ್‌ಗೆ ಹೋಗಿದ್ದ ಕಾರಣ ಕೆಲಸ 2 ತಿಂಗಳ ಕಾಲ ಸ್ಥಗಿತವಾಯಿತು. ಹೈಕೋರ್ಟ್‌ ಆದೇಶದಂತೆ ಸೈಕಲ್‌ ಟ್ರ್ಯಾಕ್‌ ಅನ್ನು ಯೋಜನೆಯಿಂದ ಕೈಬಿಡಲಾಗಿದೆ. ಈಗ ಮಳೆಯಿಂದಾಗಿ ಕೆರೆಯಂಗಳದಲ್ಲಿ ಅಪಾರ ನೀರು ನಿಂತಿರುವುದರಿಂದ ಕಾಮಗಾರಿ ಸ್ಥಗಿತವಾಗಿದೆ. ಈ ನೀರನ್ನು ಮತ್ತೆ ಖಾಲಿ ಮಾಡಿ ಕಾಮಗಾರಿ ಆರಂಭಿಸಬೇಕಿದೆ. ಕೆಲಸ ಆರಂಭವಾದ 4 ತಿಂಗಳಲ್ಲೇ ಕೆಲಸ ಮುಗಿಸಬೇಕು ಎಂಬ ಗುರಿಯಿದೆ.

ಯಾವುದೇ ಕೆರೆ ಬೇಸಿಗೆಯಲ್ಲಿ ಬತ್ತಿದಾಗಲೂ ಜಲಚರಗಳು ಮಾಯವಾಗುವುದು ಸಹಜ. ಮತ್ತೆ ನೀರು ಬಂದಾಗ ಅವು ಬಂದೇ ಬರುತ್ತವೆ. ಇದು ನೈಸರ್ಗಿಕ ಪ್ರಕ್ರಿಯೆ. ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿಯೂ ಕಾಮಗಾರಿ ಮುಗಿದು ನೀರು ತುಂಬಿಸುತ್ತಿದ್ದಂತೆಯೇ ಜೀವ ವೈವಿಧ್ಯ ಪುನಶ್ಚೇತನಗೊಳ್ಳಲಿದೆ. ಪಕ್ಷಿಗಳೂ ಸದ್ಯಕ್ಕೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿವೆ. ನೀರು ಮತ್ತೆ ಬಂದಾಗ ಅವೂ ಮತ್ತೆ ಇಲ್ಲಿಗೆ ಬರಲಿವೆ.

ಕೆರೆಯ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಆಗುವುದಿಲ್ಲ. ಏಕೆಂದರೆ ಕೆರೆಯ ಬಂಡ್‌ ಅನ್ನು ವಿಸ್ತರಣೆ ಮಾಡುವುದಕ್ಕೆ ಕೆರೆಯಂಗಳದ ಮಣ್ಣನ್ನೇ ಅಗೆದು ಬಳಸಲಾಗಿದೆ. ಇದರಿಂದ ಕೆರೆ ಹೆಚ್ಚು ಆಳವಾಗಿದೆ. ಹೀಗಾಗಿ ನೀರಿನ ಸಂಗ್ರಹ ಪ್ರಮಾಣ ಅಷ್ಟೇ ಇರುತ್ತದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ನಗರದ ಜನತೆಗೆ ಶುದ್ಧಿ ನೀರು ಒದಗಿಸಲು ಕ್ರಮ ಕೈಗೊಳ್ಳಲಿದ್ದೇವೆ.

–ರವೀಂದ್ರ ಮಲ್ಲಾಪುರ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌

***

ದಾವಣಗೆರೆಯಲ್ಲಿ ನದಿಯೂ ಇಲ್ಲ, ಕಾಡೂ ಇಲ್ಲ. ಇಂತಹ ಪ್ರದೇಶದಲ್ಲಿ ಕೆರೆಯನ್ನು ಸಂರಕ್ಷಿಸಿ ಉಳಿಸಿಕೊಳ್ಳಬೇಕಿದೆ. ಕುಂದವಾಡ ಕೆರೆ ಒಂದು ಪ್ರಕೃತಿ ವಿಜ್ಞಾನ ಕೇಂದ್ರವಾದರೆ ಒಳ್ಳೆಯದು

– ಡಾ.ಎಸ್. ಶಿಶುಪಾಲ, ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು