ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಸ್ವಾವಲಂಬನೆಯ ಬದುಕು, ಸಾಧನೆಯ ತುಡಿತ

Published 8 ಮಾರ್ಚ್ 2024, 6:52 IST
Last Updated 8 ಮಾರ್ಚ್ 2024, 6:52 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಸ್ವಾವಲಂಬನೆಯ ತುಡಿತ, ಸಾಧನೆಯ ಹಂಬಲದಿಂದ ತಾವೂ ಸ್ವಾವಲಂಬಿಯಾಗಿರುವುದರಲ್ಲಿ ಇತರ ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ನೆರವಾದವರು ಖತಮುನ್ನಿಸಾ ದೊಡ್ಮನೆ.

ಸಮೀಪದ ಭಾನುವಳ್ಳಿ ಗ್ರಾಮದ ಖತಮುನ್ನಿಸಾ, 2000ನೇ ಸಾಲಿನಲ್ಲಿ ಗ್ರಾಮದ ಮಹಿಳೆಯರ ಸಹಕಾರದಿಂದ ಈಶ್ವರ ಅಲ್ಲಾ ಮಹಿಳಾ ಸ್ವ–ಸಹಾಯ ಸಂಘ ಆರಂಬಿಸಿದರು. ಈ ಸಂಘದ ಮೂಲಕ ಸೆಣಬಿನ ಬ್ಯಾಗ್‌ ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಟೈಲರಿಂಗ್‌ನಲ್ಲಿ ತರಬೇತಿ ಪಡೆದಿರುವ ಅವರು ತಮ್ಮ ಮಹಿಳಾ ಸ್ವ–ಸಹಾಯ ಸಂಘದ ಉಳಿತಾಯದ ಹಣದಿಂದ 10 ಹೊಲಿಗೆ ಯಂತ್ರ ಮತ್ತು 1 ಕಟಿಂಗ್ ಯಂತ್ರ ಖರೀದಿಸಿದ್ದಾರೆ. ಮಹಿಳೆಯರಿಗೆ ಹೊಲಿಗೆ, ಕಟಿಂಗ್, ಡಿಸೈನ್‌ಗಳ ತರಬೇತಿ ನೀಡುತ್ತಿದ್ದಾರೆ.

ಆಕರ್ಷಕವಾಗಿ ವಿನ್ಯಾಸಗೊಳಿಸಿದ ಸೆಣಬಿನ ಬ್ಯಾಗ್, ಬಣ್ಣಗಳಿಂದ ವಿನ್ಯಾಸಗೊಂಡ ವಿದ್ಯಾರ್ಥಿಗಳ ಲಂಚ್ ಬ್ಯಾಗ್, ಮನೆಗಳ ಒಳಾಂಗಣದಲ್ಲಿ ಅಂದವಾಗಿ ಕಾಣುವಂತ ವಾಲ್ ಹ್ಯಾಂಗ್ ಬ್ಯಾಗ್, ಕಚೇರಿಗಳ ಫೈಲ್‌,  ಫಿನಾಯಿಲ್, ಸೋಪ್‌ ತಯಾರಿಸುವ ಮೂಲಕ ಮಹಿಳಾ ಸ್ವಾವಲಂಬನೆಗೆ ನಾಂದಿ ಹಾಡಿದ್ದಾರೆ. 

ತಾವು ತಯಾರಿಸಿದ ವಸ್ತುಗಳನ್ನು ಕೃಷಿಮೇಳ, ಜಾತ್ರೆ, ಮಾರಾಟ ಮೇಳಗಳಿಗೆ, ಪುಸ್ತಕ ಅಂಗಡಿಗಳಿಗೆ ಮತ್ತು ಕಚೇರಿಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಈ ಮೂಲಕ ಆದಾಯವನ್ನೂ ಪಡೆಯುತ್ತಿದ್ದಾರೆ.

ಬ್ಯಾಗ್‌ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಪಶ್ಚಿಮ ಬಂಗಾಳ ಮತ್ತು ಮುಂಬೈಯಿಂದ ತರಿಸಿಕೊಳ್ಳುತ್ತಾರೆ. 

‘75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರದ ಹರ್ ಗರ್ ತಿರಂಗಾ ಕಾರ್ಯಕ್ರಮದಡಿ 13,000 ಬಾವುಟಗಳನ್ನು ತಯಾರಿಸಿ ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ನೀಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ 20,000 ಮಾಸ್ಕ್‌ ತಯಾರಿಸಿ ಕೊಟ್ಟಿದ್ದೇವೆ. ಚುನಾವಣಾ ಪರಿಕರಗಳ ಬ್ಯಾಗ್  ತಯಾರಿಸಿಕೊಟ್ಟಿದ್ದೇವೆ’ ಎಂದು ಖತಮುನ್ನಿಸಾ ವಿವರಿಸುತ್ತಾರೆ.

‘ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿಯನ್ನು ಸರ್ಕಾರ ನೀಡುತ್ತಿದ್ದು, ನಮ್ಮ ಸಂಘದಿಂದ ತಯಾರಿಸುವ ಹಂತದಲ್ಲಿ ಇದ್ದೇವೆ. ಇದರಿಂದ ಕನಿಷ್ಠ 20 ಮಹಿಳೆಯರಿಗೆ ಉದ್ಯೋಗ ಸಿಗುತ್ತದೆ. ಅದಕ್ಕಾಗಿ ಸರ್ಕಾರದ ಸ್ವಾವಲಂಬನೆ ಯೋಜನೆಯಡಿ ₹ 8 ಲಕ್ಷ ಆರ್ಥಿಕ ನೆರವು ಮಂಜೂರಾಗಿದೆ’ ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿದರು.

ಮಹಿಳಾ ಸ್ವಾವಲಂಬನೆಯ ಉದ್ದೇಶದಿಂದ ಹಲವರಿಗೆ ಅವರು ತರಬೇತಿ ನೀಡುತ್ತಿದ್ದಾರೆ. ತುಂಗಭದ್ರಾ ಸಂಜೀವಿನಿ ಸ್ವ–ಸಹಾಯ ಸಂಘಗಳ ಒಕ್ಕೂಟದ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷೆಯಾಗಿರುವ ಅವರು, ಇಂತಹ ಹಲವು ಒಕ್ಕೂಟಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯ ತರಬೇತುದಾರರು, ವಿಶ್ವ ಕರ್ಮ ಯೋಜನೆಯಲ್ಲೂ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಶ್ವರ ಅಲ್ಲಾ ಎಂದು ಸಂಘಕ್ಕೆ ನಾಮಕರಣ ಮಾಡಿರುವ ಹಿಂದೆ ಅವರ ಜಾತ್ಯತೀತ ಮನೋಭಾವ ಎದ್ದು ಕಾಣುತ್ತಿದೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು.

ಭಾನುವಳ್ಳಿಯ ಈಶ್ವರ ಅಲ್ಲಾ ಮಹಿಳಾ ಸ್ವಸಹಾಯ ಸಂಘಗಳಿಂದ ತಯಾರಾದ ಫಿನಾಯಿಲ್ ಮತ್ತು ಸೋಪ್‌ ಆಯಿಲ್ 
ಭಾನುವಳ್ಳಿಯ ಈಶ್ವರ ಅಲ್ಲಾ ಮಹಿಳಾ ಸ್ವಸಹಾಯ ಸಂಘಗಳಿಂದ ತಯಾರಾದ ಫಿನಾಯಿಲ್ ಮತ್ತು ಸೋಪ್‌ ಆಯಿಲ್ 
ಕಚೇರಿ ಫೈಲ್‌ ತಯಾರಿಸುತ್ತಿರುವುದು
ಕಚೇರಿ ಫೈಲ್‌ ತಯಾರಿಸುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT