ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ನಮಗೆ ಎಚ್ಚರಿಕೆ ನೀಡಿಲ್ಲ: ಎಂ.ಪಿ.ರೇಣುಕಾಚಾರ್ಯ

Published 21 ಮಾರ್ಚ್ 2024, 5:33 IST
Last Updated 21 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ನಮಗೆ ಯಾವುದೇ ಎಚ್ಚರಿಕೆ ನೀಡಿಲ್ಲ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

‘ನಾವು ಪಕ್ಷದ ವಿರುದ್ಧ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ದ ಮಾತನಾಡಿಲ್ಲ‌. ನಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದೇವೆ. ನಮ್ಮ ವಿರುದ್ಧ ಕೆಲವರ ಪಿತೂರಿಯಾಗಿದೆ. ಜನ ಸಾಮಾನ್ಯರ ಭಾವನೆಗಳನ್ನು ನಾವು ಬಹಿರಂಗವಾಗಿ ಹೇಳಿದ್ದೇವೆ. ಪಕ್ಷ ವಿರೋಧ ಚಟುವಟಿಕೆ ಮಾಡಿದರೆ ಪಕ್ಷದಿಂದ ಹೊರ ಹಾಕಲಿ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ನಾವು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಿ ಎಂದು ಮೊದಲಿನಿಂದಲೂ ಹೇಳಿದ್ದೇವೆ. ಸಮೀಕ್ಷೆಯಲ್ಲಿ ಅವರ ಅವರ ಹೆಸರು ಬಂದಿಲ್ಲ. ಅದರೂ ಅವರಿಗೆ ಟಿಕೆಟ್‌ ನೀಡಲಾಗಿದೆ. ಅದನ್ನು ನಾವು ವಿರೋಧಿಸಿದ್ದೇವೆ. ಯಾರು ತಪ್ಪು ಮಾಡಿದ್ದಾರೋ ಅವರನ್ನು ಪಕ್ಷದಿಂದ ಹೊರ ಹಾಕಲಿ’ ಎಂದರು.

‘ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಬಿ.ಎಸ್‌.ಯಡಿಯೂರಪ್ಪ ಅ‌ವರು ಸೌಜನ್ಯಕ್ಕಾಗಿಯೂ ನಮಗೆ ಆಹ್ವಾನ ನೀಡಿಲ್ಲ. ನಮ್ಮ ಅವಶ್ಯಕತೆ ಇಲ್ಲ ಅಂದರೆ ನಮ್ಮನ್ನು ಬಿಡಲಿ. ಆದರೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ನರೇಂದ್ರ ಮೋದಿಯವರು ಪ್ರಧಾನಿಯಾಗಲಿ ಎಂದು ನಾವು ಬಯಸುತ್ತೇವೆ’ ಎಂದು ಹೇಳಿದರು.

‘ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪುತ್ರನಿಗೆ ಟಿಕೆಟ್ ನೀಡಬೇಕಿತ್ತು. ಅದು ಯಾವ ಕಾರಣಕ್ಕೆ ಎನ್ನುವುದು ಗೊತ್ತಿಲ್ಲ‌. ಹಾಗಂತ ನಾವು ಅವರ ಪರವಾಗಿ ಇದ್ದೇವೆ ಎಂದಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಾಮನೂರು ಶಿವಶಂಕರಪ್ಪ ಅವರ ಜೊತೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದು, ತಾಕತ್ತು ಇದ್ದರೆ ಅಂತವರು ಬಹಿರಂಗವಾಗಿ ಬಂದು ದೇವಸ್ಥಾನದ ಘಂಟೆ ಹೊಡೆದು ಹೇಳಲಿ. ಸುಖಾ ಸುಮ್ಮನೆ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

‘ಸಂಸದರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಮನೆಗೆ ಭೇಟಿ ನೀಡಿದ್ದರು. ಪುತ್ರ ಜಿ.ಎಸ್.ಅನಿತ್ ಕುಮಾರ್ ಅವರು ನಮ್ಮನ್ನು ಎಲ್ಲವನ್ನು ಮರೆತು ಒಟ್ಟಾಗಿ ಹೋಗೋಣ’ ಎಂದು ಮಾತನಾಡಿದರು. ನಾನು ಸ್ವಾರ್ಥಿಯಲ್ಲ. ನನ್ನೊಬ್ಬನ ತೀರ್ಮಾನವಲ್ಲ. ಎಲ್ಲರೂ ಕುಳಿತು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT