ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಕಸಿದುಕೊಂಡ ರಸ್ತೆ ಗುಂಡಿಗಳು

ಸುಂದರ ಮನೆಗಳಿರುವ ಬಡಾವಣೆಯಲ್ಲಿ ರಸ್ತೆ, ಚರಂಡಿ ಅವ್ಯವಸ್ಥೆ
Last Updated 27 ಸೆಪ್ಟೆಂಬರ್ 2016, 7:07 IST
ಅಕ್ಷರ ಗಾತ್ರ

ದಾವಣಗೆರೆ: ಇದು ಅಚ್ಚು ಕಟ್ಟಾಗಿ ಕಟ್ಟಿದ ಮನೆಗಳಿರುವ ಬಡಾವಣೆ. ಆದರೆ, ಜನ ಮನೆಯಿಂದ ಹೊರಗೆ ಹೆಜ್ಜೆಯಿಡಲೂ ಅಂಜಿಕೊಳ್ಳುವ ಪರಿಸ್ಥಿತಿ. ಇಲ್ಲಿನ ಜನ ಬೆಚ್ಚಗಿನ ಮನೆಗಳನ್ನೇನೋ ಕಟ್ಟಿಕೊಂಡಿದ್ದಾರೆ. ಆದರೆ, ರಸ್ತೆ, ಚರಂಡಿ ಅವ್ಯವಸ್ಥೆ ಇಲ್ಲಿನ ನಿವಾಸಿಗಳ ನೆಮ್ಮದಿಯ ಜೀವನಕ್ಕೆ ಅಡ್ಡಿಯಾಗಿದೆ.

ನಗರದ ಪಿ.ಬಿ. ರಸ್ತೆಯ ಮಗ್ಗುಲಲ್ಲೇ ಇರುವ 18ನೇ ವಾರ್ಡ್‌ನ ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್‌ನ ಬಹಳಷ್ಟು ರಸ್ತೆಗಳ ಸ್ಥಿತಿಯಿದು. ದುರಸ್ತಿ ಕಾಣದ ರಸ್ತೆಗಳು, ಸ್ವಚ್ಛತೆಯಿಲ್ಲದ ಚರಂಡಿಗಳು ಜನರನ್ನು ಕಾಡುತ್ತಿವೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಪರದಾಡುತ್ತ ಓಡಾಡುವುದಕ್ಕಿಂತ ಮನೆಯಲ್ಲಿರು ವುದೇ ಲೇಸು ಎಂಬ ಅಸಹಾಯಕತೆ ಜನರಲ್ಲಿದೆ.

ದೇವರಾಜ ಅರಸು ಬಡಾವಣೆ ‘ಎ’ ಬ್ಲಾಕ್‌, ಶಂಕರ ವಿಹಾರ ಬಡಾವಣೆ, ವಿನಾಯಕನಗರ, ಜೈನ್‌ ಲೇಔಟ್, ವಿನೋಬನಗರ 7ನೇ ಮುಖ್ಯರಸ್ತೆಯಿಂದ 4ನೇ ತಿರುವು ವರೆಗಿನ ಭಾಗಗಳು 18ನೇ ವಾರ್ಡ್‌ಗೆ ಸೇರುತ್ತವೆ. ವಾರ್ಡ್‌ನಲ್ಲಿ 1,836 ಮನೆಗಳಿದ್ದು, 8,246 ಜನ ನೆಲೆ ಕಂಡುಕೊಂಡಿದ್ದಾರೆ. ಆದರೆ, ವಾರ್ಡ್‌ನ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಒಳರಸ್ತೆಗಳು ಅಭಿವೃದ್ಧಿ ಕಂಡಿಲ್ಲ.

ಜೈನ್‌ ಲೇಔಟ್‌ನಲ್ಲಿ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದೆ. ಆದರೆ, ಪಕ್ಕದಲ್ಲೇ ಇರುವ ವಿನಾಯಕ ನಗರದ ರಸ್ತೆಗಳು ಟಾರ್‌ ಕೂಡ ಕಂಡಿಲ್ಲ. ಶಂಕರ ವಿಹಾರ ಬಡಾವಣೆ ಯಲ್ಲೂ ಪರಿಸ್ಥಿತಿ ಹೀಗೆಯೇ ಇದೆ. ಗ್ಯಾರೇಜ್‌ಗಳು, ಸಣ್ಣ ಕೈಗಾರಿಕೆ ಗಳು ಹೆಚ್ಚಿರುವ ಈ ಬಡಾವಣೆಯಲ್ಲಿ ರಸ್ತೆ, ಚರಂಡಿ ಅವ್ಯವಸ್ಥೆ ಜನರ ಬೆನ್ನು ಹತ್ತಿದೆ.

‘ನ್ಯಾಯಾಲಯ ಸಂಕೀರ್ಣ, ವಾಣಿಜ್ಯ ತೆರಿಗೆ ಇಲಾಖೆ, ದೂಡಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಕಚೇರಿಗಳು ದೇವರಾಜ ಅರಸು ಬಡಾವಣೆಯ ‘ಎ’ ಬ್ಲಾಕ್‌ನಲ್ಲಿಯೇ ಇವೆ. ಹೀಗಾಗಿ ಈ ಭಾಗದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಓಡಾಡುತ್ತಲೇ ಇರುತ್ತಾರೆ. ಇಷ್ಟಾದರೂ ಬಡಾವಣೆಯ ಒಳ ರಸ್ತೆಗಳು ಅಭಿವೃದ್ಧಿ ಕಾಣದಿರು ವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಿವಾಸಿ ಸುಧಾ.

ಕುಡಿಯುವ ನೀರು ರಸ್ತೆಯಲ್ಲಿ ಪೋಲು: ‘ವಿನಾಯಕನಗರದಲ್ಲಿ ಹಾದು ಹೋಗುವ ಕುಂದವಾಡ ಕೆರೆ ರಸ್ತೆಯಲ್ಲಿ ನೀರಿನ ಕೊಳವೆ ಒಡೆದು ಸಾವಿರಾರು ಲೀಟರ್‌ ಕುಡಿಯುವ ನೀರು ಪೋಲಾಗುತ್ತಿದೆ. ಅಪಾರ ಪ್ರಮಾಣದ ನೀರು ಉಕ್ಕಿಹರಿದು ರಸ್ತೆಯಲ್ಲಿ ಗುಂಡಿ ಬಿದ್ದಿವೆ. ಪಾಲಿಕೆ ಆಯುಕ್ತರಿಗೆ ಖುದ್ದು ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ನೀರು ಪೋಲಾಗುವುದೂ ನಿಂತಿಲ್ಲ ಎಂದು ಅಸಮಾಧಾನ’ ವ್ಯಕ್ತಪಡಿಸುತ್ತಾರೆ ಜನಸಾಮಾನ್ಯರ ಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನ ಬೆಳಕೇರಿ.

ಹಂದಿಗಳ ಸಾಮ್ರಾಜ್ಯ: ‘18ನೇ ವಾರ್ಡ್‌ಗೆ ಸೇರುವ ವಿನೋಬನಗರದ ರಸ್ತೆಗಳು ಹಂದಿಗಳ ರಾಜಧಾನಿಯಂತಾ ಗಿದೆ. ಇಲ್ಲಿನ ಒಳ ಚರಂಡಿಗಳನ್ನು ಸ್ವಚ್ಛಗೊಳಿಸಿ ದಶಕಗಳೇ ಕಳೆದಿವೆ. ಚಪ್ಪಡಿಕಲ್ಲು ಮುಚ್ಚಿದ ಚರಂಡಿಯೊಳಗೆ ಹಂದಿಗಳ ಸಾಮ್ರಾಜ್ಯವೇ ಅಡಗಿದೆ. ಹಂದಿಗಳು ಚರಂಡಿಯೊಳಗೆ ಬಿಲ ಕೊರೆದು ಮನೆ ಮಾಡಿಕೊಂಡಿವೆ. ಹೀಗಾಗಿ ನೀರು ನಿಂತು ಅಸಹನೀಯ ವಾಸನೆ ಬರುತ್ತಿದೆ’ ಎಂದು ಪರಿಸ್ಥಿತಿ ಬಿಚ್ಚಿಡುತ್ತಾರೆ ಇಲ್ಲಿನ ನಿವಾಸಿ ಸುರೇಶ್‌.

ವಾರಕ್ಕೊಮ್ಮೆ ಮಾತ್ರ ನೀರು: ‘ವಾರಕ್ಕೆ ಒಂದು ದಿನ ನೀರು ಸರಬರಾಜು ಮಾಡುತ್ತಾರೆ. ವಾರಕ್ಕೆ ಕನಿಷ್ಠ ಮೂರು ಬಾರಿಯಾದರೂ ನೀರು ನೀಡಿದರೆ ಅನುಕೂಲ ಆಗುತ್ತದೆ. ಅಲ್ಲದೇ ರಾತ್ರಿ ಹೊತ್ತಿನಲ್ಲಿ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ತೊಂದರೆ ಆಗುತ್ತಿದೆ. ಬೆಳಗಿನ ಸಮಯ ದಲ್ಲಿ ನೀರು ಸರಬರಾಜು ಮಾಡಿ, ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಶಿಕ್ಷಕಿ ಮದಿಹಾ.

‘ಪಾಲಿಕೆ ಸಿಬ್ಬಂದಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಾರೆ. ನಾವು ಅವರಿಗೆ ಫೋನ್‌ ಮಾಡಿ, ದುಂಬಾಲು ಬೀಳುವವರೆಗೂ ನೀರು ಬಿಡುವುದಿಲ್ಲ. ಶಂಕರ ವಿಹಾರ ಬಡಾವಣೆ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ’ ಎಂದು ಸಮಸ್ಯೆ ಬಿಚ್ಚಿಡುತ್ತಾರೆ ಅಬ್ದುಲ್‌ ರೆಹಮಾನ್‌.

‘ಎಷ್ಟೇ ಜಾಗೃತಿಯಿಂದ ವಾಹನ ಚಲಾಯಿಸಿದರೂ ದ್ವಿಚಕ್ರ ವಾಹನ ಸವಾರರು ಅಪಘಾತಗಳಿಂದ ಪಾರಾಗಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ಅಪಘಾತಗಳು ಇಲ್ಲಿ ಲೆಕ್ಕಕ್ಕಿಲ್ಲ’ ಎಂದು ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

**
‌‘ಕಸ ವಿಲೇವಾರಿಗೆ ಕ್ರಮ’

‘12ನೇ ವಾರ್ಡ್‌ನಲ್ಲಿ ಸ್ವಚ್ಛತೆ ಮರೀಚಿಕೆ, ಹಂದಿಗಳ ಹಾವಳಿಗೆ ನಾಗರಿಕರು ಹೈರಾಣ; ಕಿಷ್ಕಿಂದೆಯಂಥ ಗಲ್ಲಿಗಳಲ್ಲಿ ಸಮಸ್ಯೆಗಳ ಸುಳಿ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಪಾಲಿಕೆಯ ಪೌರ ಕಾರ್ಮಿಕರಿಂದ ನಿತ್ಯ ಕಸ ವಿಲೇವಾರಿ ಮಾಡಿಸುತ್ತಿದ್ದೇವೆ.

ಸಂಜೆ ವೇಳೆಯಲ್ಲಿ ಸಾರ್ವಜನಿಕರು ಎಲ್ಲೆಂದರೆಲ್ಲಿ ಕಸ ಎಸೆಯುತ್ತಿದ್ದಾರೆ. ಕಸ ವಿಲೇವಾರಿ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದೇವೆ. ಸೊಳ್ಳೆ ನಿಯಂತ್ರಣಕ್ಕೆ ಎರಡು ದಿನಗಳಿಗೆ ಒಮ್ಮೆ ಫಾಗಿಂಗ್‌ ಮಾಡಿಸುತ್ತಿದ್ದೇವೆ’ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

**
ನಾಗರಿಕರಿಗೆ ಡೆಂಗಿ ಆತಂಕ

‘ನಮ್ಮ ವಾರ್ಡ್‌ನಲ್ಲಿ ಮನೆಗಳಿಂದಲೇ ನೇರವಾಗಿ ಕಸ ಸಂಗ್ರಹಿಸಲು ಗಾಡಿಯವರು ಬರುವುದಿಲ್ಲ. ಇತ್ತ ಕಂಟೈನರ್‌ ವ್ಯವಸ್ಥೆಯೂ ಇಲ್ಲ. ಅನಿವಾರ್ಯವಾಗಿ ಕಂಡಕಂಡಲ್ಲಿ ಕಸ ಎಸೆಯಲಾಗುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿದೆ.

ಜನರಿಗೆ ಡೆಂಗಿ ರೋಗ ಬರುತ್ತಿದೆ. ನನ್ನ ಮಗನಿಗೇ ಡೆಂಗಿ ಕಾಯಿಲೆ ಬಂದಿತ್ತು. ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆವು. ನಗರದಲ್ಲಿ ಈಗಾಗಲೇ ಶಂಕಿತ ಡೆಂಗಿಗೆ 3 ಮಕ್ಕಳು ಬಲಿಯಾಗಿ ದ್ದಾರೆ. ಪಾಲಿಕೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸುತ್ತಾರೆ ಸುರೇಂದ್ರ.

**
ಸದಸ್ಯರು ಏನಂತಾರೆ ?

‘ದೇವರಾಜ ಅರಸು ಬಡಾವಣೆ ನಗರಾಭಿವೃದ್ಧಿ ಪ್ರಾಧಿಕಾರ ಮೊದಲು ರಚಿಸಿದ ಬಡಾವಣೆ. ಆದರೆ, ರಸ್ತೆಗಳು ಅಭಿವೃದ್ಧಿ ಆಗಿರಲಿಲ್ಲ. ನಾನು ಆಯ್ಕೆ ಆದ ನಂತರ ಉದ್ಯಾನ ಹಾಗೂ ಒಂದೆರಡು ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಹಾಗೆಯೇ ಜೈನ್‌ ಲೇಔಟ್‌ ಅಭಿವೃದ್ಧಿ ಮಾಡಲಾಗಿದೆ. ಆದ್ಯತೆ ಮೇರೆಗೆ ಉಳಿದೆಡೆಯೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ವಾರ್ಡ್‌ ಸದಸ್ಯೆ ಲಲಿತಾ ರಮೇಶ್‌ ಪ್ರತಿಕ್ರಿಯಿಸಿದರು.

‘ವಿನಾಯಕನಗರ ಹಾಗೂ ವಿನೋಬನಗರದ ರಸ್ತೆಗಳು ಹಾಗೂ ಚರಂಡಿ ಅಭಿವೃದ್ಧಿಗೆ ಅನುದಾನ ನೀಡುವಂತೆ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೂ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಅನುದಾನ ಪಡೆದು ನನ್ನ ಅವಧಿಯಲ್ಲೇ ಬಹುತೇಕ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸೊಳ್ಳೆ ನಿಯಂತ್ರಣಕ್ಕೆ ಕ್ರಮ:  ಸೊಳ್ಳೆ ನಿಯಂತ್ರಣಕ್ಕಾಗಿ ವಾರ್ಡ್‌ನಲ್ಲಿ ಫಾಗಿಂಗ್‌ ಮಾಡಿಸಲಾಗುವುದು. ಹಾಗೆಯೇ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು.
  ಬೆಳಿಗ್ಗೆ ಹೊತ್ತಿನಲ್ಲಿಯೇ ನಲ್ಲಿ ನೀರು ಸರಬರಾಜು ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಾರ್ಡ್‌ನ ಇನ್ನೊಂದು ಪಾರ್ಕ್‌ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

**
ವಾರ್ಡ್‌ 17ರ ಓದುಗರ ಪ್ರತಿಕ್ರಿಯೆ

ಹಕ್ಕುಪತ್ರ ನೀಡಿ..
ಮೈಸೂರು ಮಠ ಹಾಗೂ ಕಾಡಪ್ಪರ ಕಣದ ನಿವಾಸಿಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಬಹುತೇಕ ನಿವಾಸಿಗಳಿಗೆ ಇಂದಿಗೂ ಹಕ್ಕುಪತ್ರ ದೊರೆತಿಲ್ಲ. ಪಾಲಿಕೆ ಅಧಿಕಾರಿಗಳು ಹಕ್ಕುಪತ್ರ ನೀಡಿದರೆ ಮನೆಗಳನ್ನು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ.
–ಕೆ.ಸಿ.ನಿರಂಜನಮೂರ್ತಿ, ದಾದಾಪೀರ್‌ ಕಾಡಪ್ಪರ ಕಣದ ನಿವಾಸಿಗಳು.

*
ನೀರಿನ ಘಟಕ ಆರಂಭಿಸಿ..
ಗಡಿಯಾರ ಕಂಬದ ಬಳಿ ರೋಟರಿ ಕ್ಲಬ್‌ ಸಹಯೋಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ತುಂಬಾ ದಿನಗಳಾಗಿವೆ. ಆದರೆ, ಜನರಿಗೆ ಉಪಯೋಗಕ್ಕೆ ದೊರೆಯುತ್ತಿಲ್ಲ. ರೋಟರಿ ಕ್ಲಬ್‌ನವರು ಹಾಗೂ ಪಾಲಿಕೆ ಸದಸ್ಯರು ಗಮನಹರಿಸಬೇಕು.
– ಡಿ.ಗುಡ್ಡಪ್ಪ, ಹಣ್ಣು ವ್ಯಾಪಾರಿ.

**
ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ₹ 10 ಕೋಟಿ ಬೇಕಿದೆ. ಯಾವ್ಯಾವ ಕಾಮಗಾರಿಗೆ ಎಷ್ಟು ಅನುದಾನ ಬೇಕಾಗಬಹುದು ಎಂಬ ಯೋಜನೆ ಸಿದ್ಧಪಡಿಸಲಾಗುವುದು.
– ಲಲಿತಾ ರಮೇಶ್‌, 18ನೇ ವಾರ್ಡ್‌ ಸದಸ್ಯೆ

**
ಪರಿಹಾರ ಸೂಚಿಸಿ...
ಈ ಸಮಸ್ಯೆಗಳಿಗೆ ನಿಮ್ಮಲ್ಲಿ ಪರಿಹಾರ ವಿದ್ದಲ್ಲಿ ಚುಟುಕಾಗಿ ಬರೆದು ಕಳುಹಿಸಿ. ಆಯ್ದ ಪ್ರತಿಕ್ರಿಯೆ ಗಳನ್ನು ‘ಪ್ರಜಾವಾಣಿ’ ಯಲ್ಲಿ ಪ್ರಕಟಿಸುತ್ತೇವೆ. ಬರಹ, ನುಡಿ ಅಥವಾ ಯೂನಿಕೋಡ್‌  ತಂತ್ರಾಂಶ ಬಳಸಿ ಪರಿಹಾರಗಳನ್ನು ಸೂಚಿಸುವವರು editordvg@ prajavani.co.in ಇ–ಮೇಲ್‌ಗೆ ಕಳುಹಿಸಿ. ಹಸ್ತಾಕ್ಷರದಲ್ಲಿ ಬರೆಯುವವರು ಕಳುಹಿಸಬೇಕಾದ ಅಂಚೆ ವಿಳಾಸ: ಪ್ರಜಾವಾಣಿ,
ನಂ. 515, 516/2, ಶ್ರಮಜೀವಿ ಕಾಂಪ್ಲೆಕ್ಸ್‌, ಪಿ.ಬಿ.ರಸ್ತೆ, ದಾವಣಗೆರೆ - 577 002. ಮೊ. 95133 22933 ಗೆ ವಾಟ್ಸ್‌ಆ್ಯಪ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT