ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲೂ ಕುಡಿಯುವ ನೀರಿಗೆ ಅಭದ್ರತೆ!

ಬರಿದಾದ ದಾವಣಗೆರೆಯ ಕುಂದವಾಡ, ಟಿ.ವಿ.ಸ್ಟೇಷನ್‌ ಕೆರೆಗಳ ಒಡಲು, ಆತಂಕ
ಅಕ್ಷರ ಗಾತ್ರ

ದಾವಣಗೆರೆ: ಮಧ್ಯಕರ್ನಾಟಕ ನಗರಿ ದಾವಣಗೆರೆಗೆ ಕುಡಿಯುವ ನೀರಿನ ಆಸರೆಯಾದ ಕುಂದವಾಡ, ಟಿ.ವಿ.ಸ್ಟೇಷನ್‌ ಕೆರೆಗಳು ಈಗ ಖಾಲಿ--–ಖಾಲಿ.
ಕುಂದವಾಡ ಮತ್ತು ಟಿ.ವಿ.ಸ್ಟೇಷನ್ ಕೆರೆಗಳ ನೀರಿನ ಸಂಗ್ರಹ ಗಣನೀಯವಾಗಿ ಕುಸಿಯುತ್ತಿದ್ದು, ಭದ್ರಾ ಜಲಾಶಯದಿಂದ ಹರಿಸುವ ನೀರಿಗಾಗಿ ಕಾಯುವಂತಾಗಿದೆ.

ಕುಂದವಾಡ ಮತ್ತು ಟಿ.ವಿ.ಸ್ಟೇಷನ್‌ ಕೆರೆಗಳ ನೀರಿನ ಪ್ರಮಾಣ ಕ್ರಮವಾಗಿ 2.8 ಮೀಟರ್‌ ಹಾಗೂ 3.25 ಮೀಟರ್‌ ನಷ್ಟಿದ್ದು, ನೀರಿನ ಸಂಗ್ರಹ ದಿನೇದಿನ ಕಡಿಮೆಯಾಗುತ್ತಿದೆ.

ಟಿ.ವಿ.ಸ್ಟೇಷನ್‌ ಕೆರೆಯಲ್ಲಿ ಈಗ ಇರುವ ನೀರು 10ರಿಂದ 12ದಿನಗಳವರೆಗೆ ಮಾತ್ರ ಸಾಕಾಗಬಹುದು. ಹೀಗಾಗಿ, ಈ ಕೆರೆಯನ್ನು ಅವಲಂಬಿಸಿರುವ ವಿದ್ಯಾನಗರ, ತರಳಬಾಳು ಬಡಾವಣೆ, ವಿನಾಯಕ ಬಡಾವಣೆ, ಶಿವಕುಮಾರ ಬಡಾವಣೆ ಮೊದಲ ಮತ್ತು ಎರಡನೇ ಹಂತ, ಜಯನಗರ ನಿಟುವಳ್ಳಿ ಬಡಾವಣೆಗಳಿಗೆ 4–5 ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ.

ನಗರದ ಮೂರನೇ ಒಂದು ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕುಂದವಾಡ ಕೆರೆಗೆ ತುಂಗಭದ್ರಾ ನದಿಯಿಂದ ನಿತ್ಯ 20 ಮಿಲಿಯನ್‌ ಲೀಟರ್‌ ನೀರು ಪಂಪ್‌ ಮಾಡಲಾಗುತ್ತಿದೆ. ಆದರೆ, ಕೆರೆಗೆ ಬರುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಕುಂದವಾಡ ಕೆರೆಯಲ್ಲೂ ನೀರಿನ ಸಂಗ್ರಹ ಕುಸಿಯುತ್ತಿದೆ.

ಸದ್ಯ ಕುಂದವಾಡ ಕೆರೆ ವ್ಯಾಪ್ತಿಯ ಭಾಗಗಳಿಗೆ ವಾರಕ್ಕೆರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಜಲಾಶಯದಿಂದ ನೀರು
ಹರಿಸುವುದು ತಡವಾದರೆ, ಸಮಸ್ಯೆ ಈ ಭಾಗದಲ್ಲೂ ಹೆಚ್ಚುವ ಆತಂಕ ಎದುರಾಗಿದೆ.

ಜಲಾನಯನ ಪ್ರದೇಶದಲ್ಲಿ ಉತ್ತಮ ಎನ್ನುವಷ್ಟು ಮಳೆ ಇನ್ನೂ ಆಗದಿರುವುದರಿಂದ ಕೆರೆಗಳಿಗೆ ನೀರುಣಿಸುವ ಭದ್ರಾ ಜಲಾಶಯದ ಒಡಲು ಬರಿದಾಗಿದೆ. ಹೀಗಾಗಿ, ಮಳೆಗಾಲ ಆರಂಭವಾದರೂ ನಗರದ ಜನತೆಗೆ ಕುಡಿಯುವ ನೀರಿನ ಅಭದ್ರತೆ ಎದುರಾಗಿದೆ.

‘ನೀರಿನ ಸಮಸ್ಯೆ ಎದುರಿಸಲು ಸಿದ್ಧ’
ಭದ್ರಾ ಜಲಾಶಯದಲ್ಲಿ 141 ಅಡಿ ನೀರಿದ್ದು, ಈ ಮಟ್ಟ 150 ಅಡಿಗೆ ತಲುಪಿದರೆ ನಾಲೆಗಳಿಗೆ ನೀರು ಹರಿಸಬಹುದು. ಮಳೆ ಚುರುಕುಗೊಳ್ಳುತ್ತಿದ್ದು, ಜುಲೈ ತಿಂಗಳ ಅಂತ್ಯದ ಒಳಗೆ ನಾಲೆಗಳಿಂದ ಕೆರೆಗಳಿಗೆ ನೀರು ಹರಿದು ಬರುವ ನಿರೀಕ್ಷೆ ಇದೆ. ಟಿ.ವಿ.ಸ್ಟೇಷನ್‌ ಕೆರೆಯಲ್ಲಿರುವ ನೀರು 12 ದಿನಕ್ಕೆ ಸಾಕಾಗಲಿದೆ.

ಇರುವ ನೀರನ್ನು ಯೋಜನಾಬದ್ಧವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೆರೆಗಳಿಗೆ ನೀರು ಬರುವುದು ತಡವಾದರೆ ಪರ್ಯಾಯ ಮಾರ್ಗ ಕಂಡುಕೊ ಳ್ಳಲಾಗುವುದು ಎನ್ನುತ್ತಾರೆ ಪಾಲಿಕೆ ನೀರು ಸರಬರಾಜು ವಿಭಾಗದ ಎಂಜಿನಿಯರ್ ಮಂಜುನಾಥ್.

ಕುಂದವಾಡ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಪಂಪ್ ಮಾಡಲಾಗುತ್ತಿದೆ. ಹೀಗಾಗಿ ಈ ಕೆರೆಯಿಂದ ವಾರದಲ್ಲಿ ಎರಡು ದಿನ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿದೆ.

ಜಲ ಸಂಗ್ರಹ ನೋಡಿಕೊಂಡು ಕುಡಿಯುವ ನೀರು ಸರಬರಾಜು ಮಾಡುವ ವೇಳಾಪಟ್ಟಿ ಯನ್ನು ಮಾರ್ಪಾಡು ಮಾಡಲಾಗು ವುದು. ಸಮಸ್ಯೆ ಗಂಭೀರವಾಗದಂತೆ ಎಚ್ಚರವಹಿಸಲಾಗುವುದು ಎಂದು ಭರವಸೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT