ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಜಲಾಶಯಗಳ ಒಳ, ಹೊರ ಹರಿವು ನಿರ್ವಹಿಸಲು ಸೂಚನೆ

ಕಾಳಿ ನದಿಯ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ
Last Updated 19 ಜೂನ್ 2021, 15:45 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಳಿ ನದಿಯ ಜಲಾಶಯಗಳಿಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಒಳಹರಿವು ಇರುವಷ್ಟೇ ಪ್ರಮಾಣದಲ್ಲಿ ಹೊರಹರಿವನ್ನೂ ನಿರ್ವಹಿಸಲು ರಾಜ್ಯ ವಿದ್ಯುತ್ ನಿಗಮಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ಹೆಚ್ಚು ಮಳೆಯಾಗುವ 20 ಜಿಲ್ಲೆಗಳ ಜಿಲ್ಲಾಧಿಕಾರಿ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೊ ಸಂವಾದ ಹಮ್ಮಿಕೊಂಡಿದ್ದರು. ಉತ್ತರ ಕನ್ನಡದಲ್ಲಿ ಮಳೆಗಾಲಕ್ಕೆ ಕೈಗೊಳ್ಳಲಾದ ಸಿದ್ಧತೆಗಳನ್ನು ವಿವರಿಸಲಾಗಿದೆ’ ಎಂದರು.

‘ನಮ್ಮ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಭಾರಿ ಮಳೆಯಾಗುವುದಿಲ್ಲ. ಆದರೆ, ಈ ಬಾರಿ ಚಂಡಮಾರುತದಿಂದಾಗಿ ಉತ್ತಮ ಮಳೆಯಾಗಿದೆ. ಹಾಗಾಗಿ, ಮಳೆಗಾಲದ ಆರಂಭದಲ್ಲೇ ನೆರೆ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ರಾಜ್ಯ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಂದಲೂ ಸ್ಪಷ್ಟ ನಿರ್ದೇಶನ ಬಂದಿದೆ. ತಟ್ಟಿಹಳ್ಳ, ಕದ್ರಾ, ಕೊಡಸಳ್ಳಿ ಜಲಾಶಯಗಳು ಶೇ 70ರಷ್ಟು ಭರ್ತಿಯಾಗುತ್ತಿದ್ದಂತೆ ನೀರನ್ನು ಹೊರಹರಿಸಲು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಮುಂಗಾರಿಗೆ ಸಂಬಂಧಿಸಿದಂತೆ ಉತ್ತರ ಕನ್ನಡದಲ್ಲಿ ಸದ್ಯ ಗಂಭೀರ ಸ್ಥಿತಿಯಿಲ್ಲ. ಹೊನ್ನಾವರ ತಾಲ್ಲೂಕಿನ ಗುಂಡಬಾಳದಲ್ಲಿ ಕೆಲವು ದಿನಗಳ ಹಿಂದೆ ನದಿಯ ಮಟ್ಟ ಏರಿಕೆಯಾಗಿತ್ತು. ಆಗ ಐವರುಒಂದು ದಿನ ಮಾತ್ರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು’ ಎಂದರು.

ಗುಡ್ಡ ಕಸಿತ ತಡೆಗೆ ಕ್ರಮ:‘ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಗುಡ್ಡ ಕುಸಿಯಬಹುದಾದ ಸ್ಥಳಗಳನ್ನು ಏಪ್ರಿಲ್‌ನಲ್ಲೇ ಐ.ಆರ್.ಬಿ ಅಧಿಕಾರಿಗಳ ಜೊತೆ ಪರಿಶೀಲಿಸಲಾಗಿದೆ. ಮಣ್ಣು ಕುಸಿಯದಂತೆ, ನೀರು ನಿಲ್ಲದಂತೆ, ಮನೆಗಳಿಗೆ ತೊಂದರೆ ಆಗದಂತೆ ಮಾಡಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗಿತ್ತು. ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡುವಾಗಲೂ ಈ ಸ್ಥಳಗಳನ್ನು ಪುನಃ ಪರಿಶೀಲನೆ ಮಾಡಿದ್ದೇನೆ. ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳೂ ಮಾಹಿತಿ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

‘ಗುಡ್ಡವನ್ನು ನೇರವಾಗಿ ಕತ್ತರಿಸಿದ್ದರೆ, ಮೆಟ್ಟಿಲುಗಳನ್ನಾಗಿ ಮಾಡಲು ಸೂಚಿಸಲಾಗಿದೆ. ಗುಡ್ಡದ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಐದು ಕಿಲೊ ಮೀಟರ್‌ಗೊಬ್ಬ ನೋಡಲ್ ವ್ಯಕ್ತಿ, ದುರಸ್ತಿಗೆ ಗ್ಯಾಂಗ್ ಇರಬೇಕು ಎಂದು ನಿರ್ದೇಶನ ನೀಡಲಾಗಿದೆ. ಅಲ್ಲದೇ ತಕ್ಷಣ ರಕ್ಷಣಾ ಕಾರ್ಯಾಚರಣೆಗಳಿಗೂ ಸಿದ್ಧತೆ ಮಾಡಲಾಗಿದೆ’ ಎಂದು ಹೇಳಿದರು.

‘ಸರ್ಕಾರಕ್ಕೆ ಪ್ರಸ್ತಾವ’:‘ಸಿದ್ದಾಪುರದ ಕಾನಸೂರು, ಶಿರಸಿಯ ಜಾಜಿಗುಡ್ಡದಂಥ ಪ್ರದೇಶಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಶ್ವತವಾಗಿ ಪರ್ಯಾಯ ಜಾಗವನ್ನು ಹುಡುಕಬೇಕಿದೆ. ಇದಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುತ್ತಿದೆ. ಅಲ್ಲಿರುವ ಸ್ಥಳೀಯರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಈಗಾಗಲೇ ಏಳು ಮನೆಗಳ ಪೈಕಿ ಎರಡು ಮೂರು ಸ್ಥಳಾಂತರವಾಗಿವೆ. ಇದೇ ರೀತಿ ಎಲ್ಲರಿಗೂ ಬೇರೆಡೆ ವ್ಯವಸ್ಥೆ ಮಾಡಲಾಗುವುದು’ ಎಂದರು.

---

ಮಳೆಗಾಲದ ತುರ್ತು ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೆ.ಸಿ.ಬಿ, ಮರ ಕತ್ತರಿಸುವ ಯಂತ್ರ, ಸ್ಥಳೀಯವಾಗಿ ಲಭ್ಯ ಸಂಪನ್ಮೂಲ ಬಳಸಲು ಅನುಮತಿ ನೀಡಲಾಗಿದೆ.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT