ಮಂಗಳವಾರ, ಮಾರ್ಚ್ 28, 2023
31 °C
ಆರೋಗ್ಯ ಇಲಾಖೆಯಿಂದ ಮುಂದುವರಿದ ತಪಾಸಣೆ

ಬೆಳಗಾವಿ: 148 ಹೆರಿಗೆ ಯಶಸ್ವಿ, ಶಿಶುಗಳಿಗೆ ಕೋವಿಡ್ ‘ನೆಗೆಟಿವ್’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್–19 ಸೋಂಕು ತಗುಲಿದ್ದ 148 ಗರ್ಭಿಣಿಯರಿಗೆ ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ನವಜಾತ ಶಿಶುಗಳನ್ನು 5 ದಿನಗಳ ನಂತರ ಕೊರೊನಾವೈರಸ್‌ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿ ‘ನೆಗೆಟಿವ್’ ಬಂದಿದೆ.

76 ಸಹಜ ಹೆರಿಗೆಗಳಗಾಗಿವೆ. 72 (ಸಿಸೇರಿಯನ್‌) ಹೆರಿಗೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ತಾಯಂದಿರು ಹಾಗೂ ಮಕ್ಕಳು ಆರೋಗ್ಯದಿಂದಿದ್ದಾರೆ. ಈ ಪೈಕಿ 100 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸೋಂಕಿನಿಂದ ರಕ್ಷಣೆಗೆ ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವೈದ್ಯರು ಮಾರ್ಗದರ್ಶನ ನೀಡಿದ್ದಾರೆ. ಆರೋಗ್ಯ ಇಲಾಖೆಯಿಂದಲೂ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಗರ್ಭಿಣಿಯರ ಆರೈಕೆಗೆಂದೇ ಬಿಮ್ಸ್‌ನಲ್ಲಿ ಪ್ರತ್ಯೇಕ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.

ನಿಗಾಕ್ಕೆ ತಂಡ:

‘ಆಸ್ಪತ್ರೆಯಲ್ಲಿ ಕೋವಿಡ್–19 ಸೋಂಕಿತ ಗರ್ಭಿಣಿಯರ ಚಿಕಿತ್ಸೆಗೆಂದೇ 8 ಮಂದಿಯ ತಂಡ ಕಾರ್ಯನಿರ್ವಹಿಸುತ್ತಿದೆ. ಅವರು ನಿರಂತರ ನಿಗಾ ವಹಿಸುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ’ ಎಂದು ಬಿಮ್ಸ್ ವೈದ್ಯಕೀಯ ನಿರ್ದೇಶಕ ಡಾ.ವಿನಯ್‌ ದಾಸ್ತಿಕೊಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಡುಗಡೆ ಆದವರಿಗೆ, ಮನೆಯಲ್ಲೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗುತ್ತಿದೆ. ಮಾಸ್ಕ್‌ ಬಳಕೆ ನಿಲ್ಲಿಸಬಾರದು. ಹಾಲೂಡಿಸುವಾಗಲೂ ಮಾಸ್ಕ್‌ ಹಾಕಿರಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ ಶನಿವಾರದವರೆಗೆ 1.07 ಲಕ್ಷ ಮಾದರಿಗಳನ್ನು ಸಂಗ್ರಹಿಸಿ ‍ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 90,728 ಮಂದಿಗೆ ಕೋವಿಡ್–19 ವರದಿ ನೆಗೆಟಿವ್ ಬಂದಿದೆ. 14,235 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 10,145 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ  ಮಾಡಲಾಗಿದೆ. 3,887 ಸಕ್ರಿಯ ಪ್ರಕರಣಗಳಿವೆ.

ಆರೋಗ್ಯ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 8 ತಿಂಗಳು ತುಂಬಿದ ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಮೇ, ಜೂನ್‌, ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ 900 ಮಂದಿಯಲ್ಲಿ 148 ಮಂದಿಗೆ ಕೋವಿಡ್ ದೃಢಪಟ್ಟಿದೆ.

ತಪಾಸಣೆ ಮುಂದುವರಿಕೆ:

‘ಕಂಟೈನ್ಮೆಂಟ್‌ ಝೋನ್‌ ಹಾಗೂ ಕಂಟೈನ್ಮೆಂಟ್‌ ಅಲ್ಲದ ಪ್ರದೇಶಗಳಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ 100 ಮಂದಿ ಕೋವಿಡ್ ಸೋಂಕಿತರಲ್ಲಿ ಸರಾಸರಿ 15 ಮಂದಿ ಗರ್ಭಿಣಿಯರು ಇದ್ದಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. 148 ಮಂದಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿರುವುದು ಗಮನಾರ್ಹ ವಿಶೇಷವಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂ ವಿ.ಮುನ್ಯಾಳ ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಸರಾಸರಿ 70ಸಾವಿರ ಗರ್ಭಿಣಿಯರಿದ್ದಾರೆ. ರ‍್ಯಾಪಿಡ್ ಕಿಟ್ ಬಳಸಿ ಕೋವಿಡ್–19 ಪರೀಕ್ಷೆ ಮುಂದುವರಿಸಲಾಗಿದೆ. 6 ತಿಂಗಳು ತುಂಬಿದ ಗರ್ಭಿಣಿಯರನ್ನು ಮೊದಲ ಹಂತದಲ್ಲಿ ಪರಿಗಣಿಸಲಾಗುವುದು’ ಎಂದು ತಿಳಿಸಿದರು.

ಹೋದ ತಿಂಗಳು, ಖಾನಾ‍ಪುರ ತಾಲ್ಲೂಕಿನ ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೋಂಕಿತೆಗೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಶ್ಲಾಘನೆ ವ್ಯಕ್ತಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು