ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

170 ಗ್ರಾ.ಪಂ. ಗಳಿಗೆ ಒಂದು ತಿಂಗಳಲ್ಲಿ ನೀರು

ಜಲಜೀವನ್ ಮಿಷನ್: ಅಧಿಕಾರಿಗಳ ಜೊತೆ ಆಯುಕ್ತ ವಿಶಾಲ್ ಸಭೆ
Last Updated 17 ಜುಲೈ 2021, 15:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ 170 ಗ್ರಾಮ ಪಂಚಾಯ್ತಿಗಳಿಗೆ ಆಗಸ್ಟ್‌ 15ರ ಒಳಗಾಗಿ ಮನೆಮನೆಗೆ ಸ್ವಚ್ಛ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಆಯುಕ್ತ ಆರ್. ವಿಶಾಲ್ ತಿಳಿಸಿದರು.

ಶನಿವಾರ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ‘ನಿತ್ಯ ಒಬ್ಬರಿಗೆ 55 ಲೀಟರ್‌ ನೀರು ಕೊಡಲಾಗುವುದು. ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಲು 320 ಯೋಜನೆಗಳಿಗೆ ಡಿಪಿಆರ್‌ ಆಗಿದೆ. 172 ಕಡೆ ಕಾಮಗಾರಿ ಆರಂಭಿಸಲಾಗಿದೆ. 24 ಡಿಪಿಆರ್‌ಗಳು ಈ ವರ್ಷದಲ್ಲಿ ಪೂರ್ಣಗೊಳ್ಳಲಿವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಜಲಜೀವನ್ ಯೋಜನೆಯಡಿ ನೀರಿನ ಸಂಪರ್ಕ ಪಡೆದ ಮನೆಗಳಿಗೆ ಮೀಟರ್ ಅಳವಡಿಸಲಾಗುವುದು. ಒಂದು ಲೀಟರ್‌ ನೀರಿಗೆ ಗರಿಷ್ಠ 1ರಿಂದ 2 ಪೈಸೆ ಮಾತ್ರ ಪಾವತಿ ಮಾಡಬೇಕಾಗುತ್ತದೆ. ನೀರು ಪೂರೈಕೆ ವ್ಯವಸ್ಥೆ ನಿರ್ವಹಣೆ ಹೊಣೆ ಇರುವ ಗ್ರಾಮ ಪಂಚಾಯ್ತಿಗಳಿಗೆ ಈ ಹಣ ಹೋಗುತ್ತದೆ. ನೀರು ವಾಣಿಜ್ಯ ಚಟುವಟಿಕೆಗೆ ಬಳಕೆಯಾದರೆ ಇದರ ದರ ಸ್ವಲ್ಪ ಹೆಚ್ಚಾಗುತ್ತದೆ. ಬೆಳಗಾವಿ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಎಂಜಿನಿಯರ್‌ಗಳ ಕೊರತೆ ಉಂಟಾಗಿತ್ತು. ಈಗ ಅದು ಸರಿ ಹೋಗಿದೆ’ ಎಂದರು.

‘ಯೋಜನೆ ಚುರುಕುಗೊಳಿಸಲು ಜಿಲ್ಲಾವಾರು ಸಭೆ ಮಾಡಲಾಗುತ್ತಿದ್ದು, ಬೀದರ್‌, ಕಲಬುರ್ಗಿ ಹಾಗೂ ದಾವಣಗೆರೆಯಲ್ಲಿ ಸಭೆಗಳನ್ನು ನಡೆಸಲಾಗಿದೆ. ಈ ವರ್ಷದ ಅಂತ್ಯದಲ್ಲಿ 20ರಿಂದ 25 ಲಕ್ಷ ಕುಟುಂಬಗಳಿಗೆ ಜಲಜೀವನ್ ಮೂಲಕ ನೀರು ಒದಗಿಸಲಾಗುವುದು. ನೀರಿನ ಪರೀಕ್ಷೆಗೆ ಕಲಘಟಗಿ ಸೇರಿದಂತೆ 78 ಕಡೆ ಕುಡಿಯುವ ಪ್ರಯೋಗಾಲಯ ಆರಂಭಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಬಿ. ಸುಶೀಲಾ ಹಾಗೂ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ

‘ಘನತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹಾಗೂ ಮರುಬಳಕೆಗೆ ಅನುಕೂಲ ಕಲ್ಪಿಸಲು 144 ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೊಲ್ಲೂರು, ಸವದತ್ತಿ, ಗಾಣಗಾಪುರ ಸೇರಿದಂತೆ ಹಲವು ಧಾರ್ಮಿಕ ಪ್ರದೇಶಗಳಲ್ಲಿ ಮರುಬಳಕೆಯ ಸೌಲಭ್ಯ ಅಳವಡಿಸಲಾಗುವುದು’ ಎಂದರು.

‘ಘನತ್ಯಾಜ್ಯದ ದ್ರವವನ್ನು ಬೂದು ನೀರು, ಕಪ್ಪು ನೀರು ಎಂದು ವಿಂಗಡಿಸಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಎರಡ್ಮೂರು ತಾಲ್ಲೂಕುಗಳು ಅಥವಾ ಜಿಲ್ಲೆಗೊಂದು ಕೇಂದ್ರ ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT